ಭಿನ್ನಮತದಿಂದ ಇಬ್ಭಾಗವಾದ ಅಹಿಂದ!

KannadaprabhaNewsNetwork | Published : Nov 10, 2024 1:49 AM

ಸಾರಾಂಶ

2005ರಲ್ಲಿ ಜೆಡಿಎಸ್‌ ವರಿಷ್ಠ ದೇವೇಗೌಡರೊಂದಿಗೆ ಮುನಿಸಿಕೊಂಡಿದ್ದ ಸಿದ್ದರಾಮಯ್ಯ ಅಹಿಂದ ಸಂಘಟನೆಯನ್ನು ಹುಟ್ಟುಹಾಕಿ ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾವೇಶ ನಡೆಸಿದ್ದರು. ಈ ಸಮಾವೇಶದ ಮೂಲಕವೇ ಅಹಿಂದ ನಾಯಕರಾಗಿ ಬೆಳೆದಿದ್ದು. ಮುಖ್ಯಮಂತ್ರಿ ಕುರ್ಚಿವರೆಗೂ ಸಿದ್ದರಾಮಯ್ಯ ಬಂದಿದ್ದರು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಮತ್ತೆ ಮರುಹುಟ್ಟು ಪಡೆದಿದ್ದ "ಅಹಿಂದ " ಮುಖಂಡರಲ್ಲಿನ ಭಿನ್ನಮತದಿಂದಾಗಿ ಇಬ್ಭಾಗವಾಗಿದೆ. ಅಹಿಂದ ಹೆಸರಲ್ಲೇ ಎರಡು ಸಂಘಟನೆಗಳು ಅಧಿಕೃತವಾಗಿಯೇ ಹುಟ್ಟುಕೊಂಡಿವೆ. ಇದು ಸಿದ್ದರಾಮಯ್ಯ ಅವರ ನೈಜ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡುತ್ತಿದೆ.

2005ರಲ್ಲಿ ಜೆಡಿಎಸ್‌ ವರಿಷ್ಠ ದೇವೇಗೌಡರೊಂದಿಗೆ ಮುನಿಸಿಕೊಂಡಿದ್ದ ಸಿದ್ದರಾಮಯ್ಯ ಅಹಿಂದ ಸಂಘಟನೆಯನ್ನು ಹುಟ್ಟುಹಾಕಿ ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾವೇಶ ನಡೆಸಿದ್ದರು. ಈ ಸಮಾವೇಶದ ಮೂಲಕವೇ ಅಹಿಂದ ನಾಯಕರಾಗಿ ಬೆಳೆದಿದ್ದು. ಮುಖ್ಯಮಂತ್ರಿ ಕುರ್ಚಿವರೆಗೂ ಸಿದ್ದರಾಮಯ್ಯ ಬಂದಿದ್ದು ಈ ಅಹಿಂದ ಮೂಲಕವೇ. ಬಳಿಕ ದಿನ ಕಳೆದಂತೆ ಅಹಿಂದ ನಿಷ್ಕ್ರಿಯಗೊಳ್ಳುತ್ತಾ ಬಂದಿತ್ತು. ಈ ನಡುವೆ ಸಿದ್ದರಾಮಯ್ಯ ಬೆಂಬಲಿಗರು, ಆಗ ಅಹಿಂದ ಕಾರ್ಯಕರ್ತರಾಗಿದ್ದ ಹಲವರು ಸೇರಿಕೊಂಡು 2024ರ ಜನವರಿಯಲ್ಲಿ ಅಹಿಂದ ಸಂಘಟನೆಯನ್ನು ನೋಂದಣಿ ಮಾಡಿಸುವ ಮೂಲಕ ಅಹಿಂದಕ್ಕೆ ಮರುಹುಟ್ಟು ಕೊಟ್ಟಿದ್ದರು.

ಈ ಮಧ್ಯೆ ಸಿಎಂ ಬದಲಾವಣೆ ಕೂಗು ಕೇಳಿ ಬಂದ ಮೇಲೆ ಸಿದ್ದರಾಮಯ್ಯ ಪರ ಶಕ್ತಿ ಪ್ರದರ್ಶನಕ್ಕೆ ಸಜ್ಜು ಕೂಡ ಮಾಡಿಕೊಳ್ಳಲಾಗಿತ್ತು. ಆಗಸ್ಟ್‌ನಲ್ಲಿ ಸಮಾವೇಶ ನಡೆಸಲು ಎಲ್ಲ ಸಿದ್ಧತೆಗಳನ್ನು ಅಹಿಂದ ಮಾಡಿಕೊಂಡಿತ್ತು. ಆದರೆ ಅಷ್ಟರೊಳಗೆ ಮುಡಾ ಹಗರಣ ಗದ್ದಲ ಜೋರಾಗಿ ಹುಬ್ಬಳ್ಳಿಯಲ್ಲಿ ನಡೆಸಬೇಕಾಗಿದ್ದ ಸಮಾವೇಶವನ್ನು ರದ್ದಾಗಿತ್ತು. ಈ ನಡುವೆ ಅಹಿಂದ ಸಂಘಟನೆ ಮಾಡುವ ವಿಚಾರದಲ್ಲಿ ಮುಖಂಡರಲ್ಲಿ ಕಂಡು ಬಂದ ಭಿನ್ನಮತದಿಂದಾಗಿ ಇಬ್ಭಾಗವಾಗಿದ್ದು, ಅಹಿಂದ ಹೆಸರಲ್ಲೇ ಮತ್ತೊಂದು ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.

ರಾಷ್ಟ್ರೀಯ ಅಹಿಂದ:

ಮೊದಲು ಅಹಿಂದ ಎಂದು ಮಾತ್ರ ಇತ್ತು. ಈ ಸಂಘಟನೆಯನ್ನು ಜನವರಿಯಲ್ಲಿ ನೋಂದಣಿ ಮಾಡಿಸಿದ್ದು. ಸಿದ್ದರಾಮಯ್ಯ ಅವರೊಂದಿಗೆ 2005ರಲ್ಲಿ ಗುರುತಿಸಿಕೊಂಡಿದ್ದವರೇ ಈ ಸಂಘಟನೆಯಲ್ಲಿದ್ದರು. ಅಹಿಂದ ಸಂಘಟನೆ ಮಾಡುವ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿದೆ. ಇದರಿಂದಾಗಿ ಕೆಲವರು ಸೇರಿಕೊಂಡು "ರಾಷ್ಟ್ರೀಯ ಅಹಿಂದ ಸಂಘಟನೆ " ಎಂದು ಮತ್ತೊಂದು ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ನೋಂದಣಿ ಮಾಡಿಸಿದ್ದಾರೆ. ಮಾಜಿ ಸಚಿವ ದಿ. ಸಿ.ಎಸ್‌. ಶಿವಳ್ಳಿ ಅವರ ಸಹೋದರ ಮುತ್ತಣ್ಣ ಶಿವಳ್ಳಿ, ರಾಷ್ಟ್ರೀಯ ಅಹಿಂದಕ್ಕೆ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಸಂಘಟನೆ ಕೂಡ ಕಳೆದ ಒಂದೆರಡು ತಿಂಗಳ ಹಿಂದೆಯಷ್ಟೇ ನೋಂದಣಿಯಾಗಿದೆ. ಡಿಸೆಂಬರ್‌ನಲ್ಲಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಗೊಂದಲ:

ಅಹಿಂದ ಹೆಸರಲ್ಲೇ ಎರಡು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿರುವುದು ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಅಹಿಂದ ಜತೆಗೆ ಗುರುತಿಸಿಕೊಳ್ಳಬಯಸುವವರಲ್ಲಿ ಗೊಂದಲ ಉಂಟಾಗುತ್ತಿದೆ. ಆ ಸಂಘಟನೆಯವರು ಪ್ರತಿಭಟನೆಗೆ ಕರೆ ಕೊಟ್ಟಾಗ ಈ ಸಂಘಟನೆಯವರು ಮತ್ತೇನೂ ಕಾರ್ಯಕ್ರಮ ಆಯೋಜಿಸಿರುತ್ತಾರೆ. ಇಲ್ಲದಿದ್ದರೆ ಅದರ ಮರುದಿನ ಪ್ರತಿಭಟನೆಗೆ ಕರೆ ಕೊಟ್ಟಿರುತ್ತಾರೆ. ಯಾವ ಸಂಘಟನೆ ಜತೆಗೆ ಗುರುತಿಸಿಕೊಳ್ಳಬೇಕು ಎಂಬುದು ತಿಳಿಯದಂತಾಗಿದೆ ಎಂಬುದು ಸಿದ್ದರಾಮಯ್ಯ ಅಭಿಮಾನಿಗಳು ಹೇಳುವ ಮಾತು.

ಪ್ರಯತ್ನ:

ಈ ನಡುವೆ ಸಂಘಟನೆ ಇಬ್ಭಾಗವಾಗುವುದರಿಂದ ಸರಿಯಾಗದು. ಇದರ ಬದಲಿಗೆ ಎರಡು ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಈ ಸಂಬಂಧ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಿ, ಉಂಟಾಗಿರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಕೆಲವು ಮುಖಂಡರು ಪ್ರಯತ್ನವನ್ನೂ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಅಹಿಂದ ಸಂಘಟನೆ ಇಬ್ಭಾಗವಾಗಿರುವುದು ಸಿದ್ದರಾಮಯ್ಯ ಅವರ ನೈಜ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿರುವುದಂತೂ ಸತ್ಯ.ಅಹಿಂದದಲ್ಲಿ ಎರಡನೆಯ ಸ್ತರದ ನಾಯಕರನ್ನು ಗುರುತಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಜನವರಿಯಲ್ಲಿ ಅಹಿಂದ ಎಂಬ ಹೆಸರಲ್ಲಿ ಸಂಘಟನೆ ಹುಟ್ಟುಹಾಕಿದ್ದೇವೆ. ಅದರಿಂದ ಕೆಲವೊಂದಿಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವು. ಆದರೆ ಕೆಲವರು ಇಲ್ಲಿಂದ ಹೊರಗೆ ಹೋಗಿ ಅಹಿಂದ ರಾಷ್ಟ್ರೀಯ ಸಂಘಟನೆ ಎಂಬುದನ್ನು ಹುಟ್ಟುಹಾಕಿಕೊಂಡಿದ್ದಾರೆ. ಎರಡು ಸಂಘಟನೆ ಒಂದು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅಹಿಂದ್‌ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ ಕರಡಿಕೊಪ್ಪ ಹೇಳಿದರು.ಅಹಿಂದ ಸಂಘಟನೆ ಮಾಡಲು ಕೆಲವರು ಅಡ್ಡಿಯನ್ನುಂಟು ಮಾಡುತ್ತಿದ್ದರು. ಇದರಿಂದಾಗಿ ಬೇಸತ್ತು ರಾಷ್ಟ್ರಮಟ್ಟದಲ್ಲಿ ಅಹಿಂದ ಸಂಘಟನೆ ಕಟ್ಟಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆ ಹುಟ್ಟುಹಾಕಿದ್ದೇವೆ. ಅಹಿಂದ ಜತೆಗೆ ಗುರುತಿಸಿಕೊಂಡಿರುವ ಬಹುತೇಕರು ನಮ್ಮೊಂದಿಗೆ ಇದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ನೋಂದಣಿ ಮಾಡಿಸಿದ್ದೇವೆ. ಹುಬ್ಬಳ್ಳಿಯಲ್ಲಿ ಡಿಸೆಂಬರ್‌ನಲ್ಲಿ ಪದಾಧಿಕಾರಿಗಳ ಪದಗ್ರಹಣ ಆಯೋಜಿಸಲಾಗುವುದು ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು.

Share this article