ಸಾಕಷ್ಟು ಅಳೆದು, ತೂಗಿದ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಾತಿವಾರು, ಪ್ರಾದೇಶಿಕವಾರು ಪ್ರಾತಿನಿಧ್ಯ ನೀಡಲು ಸಾಕಷ್ಟು ಕಸರತ್ತು ಮಾಡಲಾಗಿದ್ದರೂ ಎಂಟು ಜಿಲ್ಲೆಗಳು ಮಂತ್ರಿ ಸ್ಥಾನದಿಂದ ವಂಚಿತವಾಗಿದೆ. ಇದರ ಜತೆಗೆ ಮಹಿಳೆಯರಿಗೆ ಅವಕಾಶ ನೀಡದಿರುವುದು ಎದ್ದು ಕಾಣುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಕಷ್ಟು ಅಳೆದು, ತೂಗಿದ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಾತಿವಾರು, ಪ್ರಾದೇಶಿಕವಾರು ಪ್ರಾತಿನಿಧ್ಯ ನೀಡಲು ಸಾಕಷ್ಟು ಕಸರತ್ತು ಮಾಡಲಾಗಿದ್ದರೂ ಎಂಟು ಜಿಲ್ಲೆಗಳು ಮಂತ್ರಿ ಸ್ಥಾನದಿಂದ ವಂಚಿತವಾಗಿದೆ. ಇದರ ಜತೆಗೆ ಮಹಿಳೆಯರಿಗೆ ಅವಕಾಶ ನೀಡದಿರುವುದು ಎದ್ದು ಕಾಣುತ್ತಿದೆ.
ಸಂಪುಟದಲ್ಲಿ ಬೆಂಗಳೂರಿಗೆ ಆರು ಹಾಗೂ ಕಲಬುರಗಿ ಜಿಲ್ಲೆಗೆ ಮೂರು ಸಚಿವ ಸ್ಥಾನ ಸಿಕ್ಕಿರುವುದು ವಿಶೇಷ. ನಿಯಮದ ಪ್ರಕಾರ 34 ಜನರಿಗೆ ಸಚಿವರನ್ನಾಗಿ ಮಾಡಲು ಅವಕಾಶವಿದ್ದರೂ ಕೊನೆ ಕ್ಷಣದಲ್ಲಿ 19 ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದ ಪರಿಣಾಮ ಸಂಪುಟದ ಗಾತ್ರ ಸದ್ಯ 33 ಇದೆ.
ಸಂಪುಟದಲ್ಲಿ ಜಿಲ್ಲಾವಾರು, ಜಾತಿವಾರು ಪ್ರಾತಿನಿಧ್ಯ ನೀಡುವ ಪ್ರಯತ್ನ ಮಾಡಲಾಗಿದೆ. ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯಕ್ಕೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀಡಿದ ಸಂಖ್ಯೆಯಷ್ಟೇ ಜನರಿಗೆ ಮಂತ್ರಿ ಸ್ಥಾನ ನೀಡಲಾಗಿದ್ದು, ಕ್ರಮವಾಗಿ ಲಿಂಗಾಯತ 7, ಒಕ್ಕಲಿಗ ಸಮುದಾಯ 5, ಕುರುಬ ಸಮುದಾಯಕ್ಕೆ ಎರಡು ಸ್ಥಾನ ನೀಡಲಾಗಿದೆ. ಈ ಬಾರಿ ಮುಸ್ಲಿಂ ಸಮುದಾಯದ ಮೂವರಿಗೆ ಅವಕಾಶ ನೀಡಿದ್ದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಇಬ್ಬರಿಗೆ ಅವಕಾಶ ಕೊಡಲಾಗಿತ್ತು. ಪರಿಶಿಷ್ಟ ಜಾತಿ ಸಮುದಾಯಕ್ಕೆ 6 ಮತ್ತು ಪರಿಶಿಷ್ಟ ಪಂಗಡದ ನಾಲ್ವರಿಗೆ ಈ ಬಾರಿ ಸಚಿವಗಿರಿ ಲಭಿಸಿದೆ.
8 ಜಿಲ್ಲೆಗೆ ಸಿಗದ ಸಚಿವ ಸ್ಥಾನ:
ಕೋಲಾರ, ಕೊಡಗು, ರಾಯಚೂರು, ಉತ್ತರ ಕನ್ನಡ, ವಿಜಯನಗರ, ಬೆಂಗಳೂರು ಗ್ರಾಮಾಂತರ ಹಾಗೂ ಉಡುಪಿ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಈ ಪೈಕಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದ ಕಾರಣ ಮಂತ್ರಿ ಸ್ಥಾನ ಕೊಡಲು ಆಗಿಲ್ಲ. ಇನ್ನು ಕೊಡಗು ಜಿಲ್ಲೆಯಿಂದ ಎ.ಎಸ್.ಪೊನ್ನಣ್ಣ ಅವರನ್ನು ವಿಧಾನಸಭೆ ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಜಿಲ್ಲೆಗೆ ಪ್ರಾತಿನಿಧ್ಯ ಕೊಡುವ ಕೆಲಸ ಮಾಡಲಾಗಿದೆ.
ಬೆಂಗಳೂರಿಗೆ 6, ಕಲಬುರಗಿಗೆ 3:
ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಂದರೆ 28 ಶಾಸಕರನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯಿಂದ ಹಿರಿಯ ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಜಮೀರ್ ಅಹಮದ್, ಬೈರತಿ ಸುರೇಶ್, ರಿಜ್ವಾನ್ ಅರ್ಷದ್ ಅವರಿಗೆ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಇದನ್ನು ಹೊರತು ಪಡಿಸಿದರೆ ಸಂಪುಟದಲ್ಲಿ ಕಲಬುರಗಿ ಜಿಲ್ಲೆಯ ಮೂವರಿಗೆ ಮಂತ್ರಿ ಸ್ಥಾನ ದೊರಕಿದಂತಾಗಿದೆ. ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್ ಮೊದಲ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಕ್ಕಿದ್ದು, ಈಗ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ಪುತ್ರ ಅಜಯಸಿಂಗ್ ಅವರಿಗೆ ಮಂತ್ರಿಗಿರಿ ದೊರಕಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.