ಅಹಿಂದ ಸಂಘಟನೆ ಹೆಚ್ಚಿನ ಮಟ್ಟದಲ್ಲಿಸಂಘಟನೆಯಾಗಲಿ: ಆರ್.ಉಮೇಶ್‌

KannadaprabhaNewsNetwork | Published : Oct 28, 2024 1:18 AM

ಸಾರಾಂಶ

ಚಾಮರಾಜನಗರದ ಜೋಡಿರಸ್ತೆಯಲ್ಲಿರುವ ತಾಲೂಕು ಕುರುಬರ ಸಂಘದ ಸಂಕೀರ್ಣದಲ್ಲಿ ಜಿಲ್ಲಾ ಅಹಿಂದ ಸಂಘಟನೆಯ ಅಪೇಕ್ಷಿತ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷರು, ಎಸ್‌ಪಿಕೆ ಗ್ರೂಪ್‌ನ ಮಾಲೀಕ ಆರ್.ಉಮೇಶ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅನೇಕರು ಕಟ್ಟಿರುವ ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶ್ರಮಿಸಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ, ಎಸ್‌ಪಿಕೆ ‌ಗ್ರೂಪ್‌ನ ಮಾಲೀಕ ಆರ್.ಉಮೇಶ್‌ ಹೇಳಿದರು.

ನಗರದ ಜೋಡಿರಸ್ತೆಯಲ್ಲಿರುವ ತಾಲೂಕು ಕುರುಬರ ಸಂಘದ ಸಂಕೀರ್ಣದಲ್ಲಿ ಜಿಲ್ಲಾ ಅಹಿಂದ ಸಂಘಟನೆಯ ಅಪೇಕ್ಷಿತ ಪದಾಧಿಕಾರಿಗಳ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯಾಧ್ಯಕ್ಷ ಪ್ರಭುಲಿಂಗ ಎಲ್ ದೊಡ್ಡಣಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಹಿಂದ ಸಂಘಟನೆಯಲ್ಲಿ ಕುರುಬರ ಸಮುದಾಯ ಮಾತ್ರವಲ್ಲದೆ ಹಿಂದುಳಿದ ವರ್ಗಗಳಲ್ಲಿ ಬರುವ ಎಲ್ಲ ಸಮುದಾಯದ ಮುಖಂಡರನ್ನು ಸಂಘಟನೆಯಲ್ಲಿ ಸೇರಿಸಿಕೊಂಡು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸ್ಥಾನಮಾನ ಹಂಚಿಕೆ ಮಾಡುವ ಮೂಲಕ ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸಿ ರಾಜ್ಯದಲ್ಲಿ ಮಾದರಿ ಸಂಘಟನೆ ಮಾಡುವಂತೆ ಸಲಹೆ ನೀಡಿದರು.

ಶೋಷಿತರ ಸಮುದಾಯಗಳು, ಅಹಿಂದ ಸಂಘಟನೆಗಳು ಹೆಚ್ಚಿನ ರೀತಿಯಲ್ಲಿ ಸಂಘಟನೆ ಆಗಬೇಕು. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಶೋಷಿತ ಸಮುದಾಯಗಳಿಗೆ ಅನ್ಯಾಯವಾದಂತಹ ಸಂದರ್ಭಗಳಲ್ಲಿ ಖಂಡಿಸಿ ಹೋರಾಟಗಳನ್ನು ರೂಪಿಸುವ ಮೂಲಕ ನ್ಯಾಯ ಪಡೆದುಕೊಳ್ಳುವ ಕೆಲಸ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಮಹೇಶ್‌ ಹಳೇಪುರ ಮಾತನಾಡಿ, ಈಗಾಗಲೇ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿ ಉದ್ಘಾಟನೆ ಮಾಡಲಾಗುತ್ತದೆ ಎಂದರು.

ಸಭೆಯಲ್ಲಿ ಮುಖಂಡರಾದ ಸೈಯದ್‌ ಇಸ್ಮಾಯಿಲ್, ಕೆರೆಹಳ್ಳಿ ಉಮೇಶ್, ಪ್ರಭುಸ್ವಾಮಿ, ಸದಾಶಿವ, ರಾಜ್‌ಕುಮಾರ್, ಮಹದೇವಸ್ವಾಮಿ, ರಾಜೇಶ್, ಕೃಷ್ಣಹಳೇಪುರ, ನಂಜುಂಡನಾಯಕ ಸಾಗಡೆ, ಮಾದೇಶ್ ಹೊಂಗನೂರು, ಮಧುಸೂದನ್ ಹೊಸಹಳ್ಳಿ, ಮಧು ಕೆಬ್ಬೇಪುರ, ಬಸವಣ್ಣ ಹೊನ್ನಹಳ್ಳಿ, ಶ್ರೀನಿವಾಸಗಣಿಗನೂರು, ರಾಘವೇಂದ್ರ ಬಸವಾಪುರ, ಸಿದ್ದರಾಜು ಕೋಟಂಬಳ್ಳಿ ಇತರರು ಭಾಗವಹಿಸಿದ್ದರು.

Share this article