ಗದಗ: ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕಂಪನಿಗಳಿಗೆ ಹಣ ಸಂದಾಯ ಮಾಡಿದ ಜನರಿಗೆ ತಕ್ಷಣ ಮರು ಪಾವತಿಸಬೇಕೆಂದು ಆಗ್ರಹಿಸಿ ಠಗಿ ಪೀಡಿತ ಜಮಾಕರ್ತ ಪರಿವಾರ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ನಡೆದ ಆಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಬಡ ಜನರು, ಕೂಲಿಕಾರ್ಮಿಕರು ಹಾಗೂ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳಲ್ಲಿ ಹಣ ತೊಡಗಿಸಿದ್ದು, ನಕಾರಾತ್ಮಕ ಉತ್ತರ ನೀಡುತ್ತ ಕಾಲಹರಣ ಮಾಡುತ್ತಿವೆ. ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೆಲ ಕಂಪನಿಗಳು ತಮ್ಮ ಕಾರ್ಯಾಲಯ ಬಂದ್ ಮಾಡಿದ್ದು, ಕನಿಷ್ಟ ಹತ್ತು ವರ್ಷಗಳಿಂದ ಜನರು ಕಚೇರಿಗಳ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತಾಗಿದೆ.ಪಿಎಸಿಎಲ್, ಗುರುಟೇಕ್, ಸಮೃದ್ಧಿ ಜೀವನ್, ಈ ಸ್ಟೋರಿ ಇಂಡಿಯಾ, ಜನಸ್ನೇಹ, ಅಗ್ರಿಗೋಲ್ಟ್, ಗ್ರೀನ್ ಬರ್ಡ್ ಸೇರಿದಂತೆ ಇನ್ನು ಹತ್ತು ಹಲವಾರು ಕಂಪನಿಗಳು ಜನರಿಗೆ ಮೋಸ ಮಾಡಿದ್ದು, ಕಂಪನಿಗಳ ಸ್ಥಿರಾಸ್ತಿ ಜಪ್ತಿ ಮಾಡಿ ತಕ್ಷಣ ಜನರಿಗೆ ಹಣ ಮರುಪಾವತಿ ಮಾಡಬೇಕು. ಬಂಡವಾಳ ಶಾಹಿಗಳ ಪರ ಇರುವ ರಾಜಕಾರಣಿಗಳನ್ನು ಸಹಿಸಲು ಸಾಧ್ಯವಿಲ್ಲ. ಬಡಜನರ ಶಾಪ ನಿಮಗೆ ತಟ್ಟದೇ ಇರಲು ಸಾಧ್ಯವಿಲ್ಲ ಎಂದರು.
ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಅರ್ಜಿ ತಗೆದುಕೊಂಡಿದ್ದು, ಆದರೆ ಹಣ ಪಾವತಿ ಪ್ರಕ್ರಿಯೆ ಬಹಳ ವಿಳಂಬವಾಗಿದೆ, ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ನೋಂದ ಜನರಿಗೆ ನ್ಯಾಯ ನೀಡುವಲ್ಲಿ ಪ್ರಾಮಾಣಿ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಠಗಿ ಪೀಡಿತ ಜಮಾಕರ್ತ ಪರಿವಾರ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಮದ್‌ಲಾಲ ಆಜಾದ ಹಾಗೂ ರಾಜ್ಯ ಘಟಕ ಅಧ್ಯಕ್ಷ ಅಪ್ಪಾಸಾಬ ಬುಗಡೆ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಲಕ್ಷಾಂತರ ಜನರ ಕೋಟ್ಯಂತರ ಹಣ ಕೊಳ್ಳೆ ಕಂಪನಿಗಳ ವಿರುದ್ದ ಕಠಿಣ ಕ್ರಮ ಹಾಗೂ ನಮ್ಮ ಹಣ ನಮಗೆ ಸಿಗುವವರೆಗೂ ಹೋರಾಟ ಅನಿವಾರ್ಯ ಎಂದರು.ಶಿರಹಟ್ಟಿ ತಾಲೂಕಾಧ್ಯಕ್ಷ ಮಂಜುನಾಥ ಆರೆಪಲ್ಲಿ, ಸುರೇಶ ಕರ್ಜಗಿ, ಹೊನಕೇರಪ್ಪ ನರಸಾಪೂರ, ಸುಮಂಗಲಾ ರಾಠೋಡ, ಗಂಗಮ್ಮ ಹುರಳಿ, ಶಿವಕುಮಾರ ಮಠದ, ನರಗುಂದ ತಾಲೂಕು ಘಟಕ ಅಧ್ಯಕ್ಷ ನದಾಫ್, ಅಶೋಕ ಕುರ್ತಕೋಟಿ, ನಿವೃತ್ತ ಶಿಕ್ಷಕ ಸಿ.ಬಿ ರಡ್ಡೇರ, ಕರಮುಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.