ಕೊಪ್ಪಳ: ಸದಾ ಸಮಾಜಮುಖಿ ಬೆಳಕು ಚೆಲ್ಲುವ ನಗರದ ಗವಿಸಿದ್ದೇಶ್ವರರ ಈ ವರ್ಷದ ಜಾತ್ರೆ ಅಂಗವಿಕಲರ ಬದುಕಿಗೆ ಆಸರೆ ಆಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ. ಅಂಗವಿಕಲತೆ ಮೆಟ್ಟಿ ನಿಲ್ಲಲು ಅವಶ್ಯವಿರುವ ಸಕಲ ಸಾಮಗ್ರಿಗಳನ್ನು ವಿತರಿಸುವ ಮೂಲಕ ಅವರ ಬಾಳಿಗೆ ಊರುಗೋಲಾಗಲಿದೆ.
ಶ್ರವಣ ಸಾಧನ ವಿತರಣೆ: ವಿದ್ಯಾರ್ಥಿಗಳಲ್ಲಿರುವ ಶ್ರವಣದೋಷ ನಿವಾರಣೆ ಮಾಡಿ, ಕಲಿಕಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಗುತ್ತದೆ. ಶ್ರೀ ಗವಿಮಠ, ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಜಿಲ್ಲಾ ಶಾಖೆ ಮತ್ತು ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಬೃಹತ್ ಉಚಿತ ಶ್ರವಣ ಸಾಧನ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಅವರ ಶೈಕ್ಷಣಿಕ ಬಲವರ್ಧನೆ ಮಾಡುವ ಸಂಕಲ್ಪವನ್ನು ಇಟ್ಟುಕೊಳ್ಳಲಾಗಿದೆ.
ಬೃಹತ್ ಜಾಥಾ: ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳ ಒಕ್ಕೂಟ, ವೈದ್ಯಕೀಯ ಮಹಾವಿದ್ಯಾಲಯಗಳು ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಜಾಗೃತಿ ನಡಿಗೆ ಹಮ್ಮಿಕೊಳ್ಳಲಾಗಿದೆ.ಗವಿಶ್ರೀಗಳಿಂದ ವಿಡಿಯೋ ಸಾಂಗ್ ಬಿಡುಗಡೆ:
ನಗರದ ಗವಿಮಠದಲ್ಲಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕರುನಾಡ ಕಲ್ಪತರು ನಮ್ಮ ಕೊಪ್ಪಳ ಅಲ್ಬಮ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಶ್ರೀಗಳು, “ಕರುನಾಡ ಕಲ್ಪತರು ನಮ್ಮ ಕೊಪ್ಪಳ” ಅಲ್ಬಮ್ ವಿಡಿಯೋ ಸಾಂಗ್ ಚೆನ್ನಾಗಿದೆ. ಇದೇ ರೀತಿಯ ಹೊಸ ತರಹದ ವಿಡಿಯೋ ಸಾಂಗ್ ಹೊರಬರಲಿ ಎಂದರು.
ಅಲ್ಬಮ್ ವಿಡಿಯೋ ಸಾಂಗ್ ತಂಡದವರಾದ ರಾಕ್ ಮಲ್ಲು, ಯು.ಕೆ. ಸಂಜು, ಶಿವು, ನವೀನ್, ಸಂಜನಾ, ಅಬ್ದುಲ್, ಶಿವಮೂರ್ತಿ ಸ್ಯಾಂಡಿ ಮುಂತಾದವರಿದ್ದರು.ನಿರ್ಮಾಪಕರಾದ ಬಸಮ್ಮ ಹೂಗಾರ, ನಿರ್ದೇಶಕ ರಾಕ್ ಮಲ್ಲು, ಸಾಹಿತ್ಯ ಮಂಜುನಾಥ ಪಾಲ್‌ಬಾವಿ, ಸಂಗೀತ ಪಯಾಜ್ ಕುಷ್ಟಗಿ, ಗಾಯನ ಎಲ್.ಎನ್. ಶ್ರೀಕಾಂತ, ನೃತ್ಯ ಸಂಯೋಜನೆ ಯು.ಕೆ. ಸಚಿಜು, ಛಾಯಾಗ್ರಾಹಕ ದರ್ಶನ ವಸ್ತ್ರದ, ಸಂಕಲನಕಾರರಾದ ಸಮೀರ ಕುಲಕರ್ಣಿ ಇವರ ಸಹಕಾರದಿಂದ “ಕರುನಾಡ ಕಲ್ಪತರು ನಮ್ಮ ಕೊಪ್ಪಳ” ಅಲ್ಬಮ್ ವಿಡಿಯೋ ಸಾಂಗ್ ಮೂಡಿಬಂದಿದೆ.