ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

KannadaprabhaNewsNetwork |  
Published : Jan 11, 2025, 12:47 AM IST
10ಎಚ್ಎಸ್ಎನ್21 : ಬಸ್‌ ದರರೇರಿಕೆ ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆಯನ್ನು ಮತ್ತೊಮ್ಮೆ ಎಳೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬಸ್ ದರ ಏರಿಕೆ ಮತ್ತು ಅಗತ್ಯ ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಸರ್ಕಾರ ಜನರಿಗೆ ಉಚಿತ ಗ್ಯಾರಂಟಿ ಕೊಡುವುದಾಗಿ, ವಿವಿಧ ವರ್ಗಗಳ ಜನರನ್ನು ಬೇರೊಂದು ರೀತಿಯಲ್ಲಿ ಸುಲಿಗೆ ಮಾಡಲು ಹೊರಟಿದೆ ಎಂದು ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಹಾಸನ

ತಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆಯನ್ನು ಮತ್ತೊಮ್ಮೆ ಎಳೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬಸ್ ದರ ಏರಿಕೆ ಮತ್ತು ಅಗತ್ಯ ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎನ್.ಆರ್‌. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದರು. ಮಹಿಳೆಯರಿಗೆ ಉಚಿತ ಸೌಲಭ್ಯ ನೀಡುವ ನೆಪದಲ್ಲಿ ಪುರುಷರಿಗೆ ಬಸ್ ಪ್ರಯಾಣ ದರವನ್ನು ದಿಢೀರ್ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಹಾಲು ಹಾಗೂ ಇನ್ನಿತರೆ ಅಗತ್ಯ ವಸ್ತುಗಳ ಮೇಲೆ ದಿನಕ್ಕೊಂದು ಬೆಲೆ ಏರಿಕೆ ನಿಗದಿ ಮಾಡಲಾಗುತ್ತಿದೆ. ಇದರಿಂದ ಬಡವರು ಮತ್ತು ಕೂಲಿ ಕಾರ್ಮಿಕರು ಬೇಸೆತ್ತು ಹೋಗಿದ್ದಾರೆ. ರಾಜ್ಯದ ನಾಲ್ಕು ವಿಭಾಗಗಳ ವ್ಯಾಪ್ತಿಯಲ್ಲೂ ಶೇ.೧೫ರಷ್ಟು ಬಸ್‌ದರ ಏರಿಕೆ ಮಾಡಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಜನರಿಗೆ ಉಚಿತ ಗ್ಯಾರಂಟಿ ಕೊಡುವುದಾಗಿ, ವಿವಿಧ ವರ್ಗಗಳ ಜನರನ್ನು ಬೇರೊಂದು ರೀತಿಯಲ್ಲಿ ಸುಲಿಗೆ ಮಾಡಲು ಹೊರಟಿದೆ ಎಂದು ಆಕ್ರೋಶ ಹೊರಹಾಕಿದರು. ತಮ್ಮ ಘೋಷಣೆ ಈಡೇರಿಸಿಕೊಳ್ಳಲು, ತಮ್ಮ ಮೌಲ್ಯ ಉಳಿಸಿಕೊಳ್ಳಲು ಸಾಮಾನ್ಯ ಜನರ ಮೇಲೆ ಏರಿಕೆ ಹೊರೆ ಹೊರಿಸಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕೇವಲ ಐದು ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವ ಸಲುವಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಆರ್ಥಿಕ ಹೂರೆಯನ್ನು ಹೆಚ್ಚಿಸಿದೆ. ಅಲ್ಲದೆ ಕೆಲವು ಯೋಜನೆಗಳು ಸಮರ್ಪಕವಾಗಿ ಇನ್ನೂ ಜನರಿಗೆ ತಲುಪುತ್ತಿಲ್ಲ. ಶಾಸಕರಿಗೆ ಬರುವ ಅನುದಾನವು ಸರಿಯಾಗಿ ಬರುತ್ತಿಲ್ಲ. ಹೀಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಹಾಲು, ಮದ್ಯ, ಸ್ಟಾಂಪ್ ಡ್ಯೂಟಿ ಏರಿಕೆ ನಂತರ ಇದೀಗ ಬಸ್ ದರವನ್ನೂ ಏರಿಕೆ ಮಾಡಿರುವುದು ತೀವ್ರ ಖಂಡನೀಯ. ಇದರಿಂದ ಬಡ ಜನರಿಗೆ ಅತೀವ ಹೊರೆಯಾಗಲಿದೆ. ಸ್ತ್ರೀ ಸಮುದಾಯಕ್ಕೆ ಉಚಿತವಾಗಿ ಪ್ರಯಾಣ ಸೌಲಭ್ಯ ನೀಡಿ, ಗಂಡಸರನ್ನು ಸುಲಿಗೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಕೂಡಲೆ ಬಸ್ ದರ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಎಚ್.ಪಿ. ಸ್ವರೂಪ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಮಾಧ್ಯಮದೊಂದಿಗೆ ಮಾತನಾಡಿ, ಬಸ್ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಎಸ್. ದ್ಯಾವೇಗೌಡ, ಕೆ.ಎಸ್. ಮಂಜೇಗೌಡ, ರಘು ಹೊಂಗೆರೆ, ಯೋಗೇಶ್, ರಘು ಭಾನು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ