ಕನ್ನಡಪ್ರಭ ವಾರ್ತೆ ಹಾಸನ
ಇತ್ತೀಚಿನ ದಿನಗಳಲ್ಲಿ ಎಚ್‌ಐವಿ ಸೋಂಕಿನ ಕೆಂಗಣ್ಣಿಗೆ ಯುವಜನತೆ ತುತ್ತಾಗುತ್ತಿದ್ದಾರೆ ಎಂದು ಹಿಮ್ಸ್‌ನ ಐಸಿಟಿಸಿ ಕೌನ್ಸಿಲರ್ ಕೆ.ಎಚ್. ಮಂಜುಳಾ ಹೇಳಿದರು.ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಏಡ್ಸ್ ಜಾಗೃತಿ ಮತ್ತು ತಡೆಗಟ್ಟುವಿಕೆ ವಿಷೇಶ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆಯು ಆದಷ್ಟು ಜಾಗರೂಕರಾಗಿ ಹೆಜ್ಜೆ ಇಡಬೇಕು. ಭಾರತದಲ್ಲಿ ೨.೪ ಮಿಲಿಯನ್ ಎಚ್‌ಐವಿ ಸೋಂಕಿತರಿದ್ದಾರೆ. ಇದು ನಿಜವಾಗಿಯೂ ದುರ್ದೈವದ ಸಂಗತಿಯಾಗಿದೆ. ರಕ್ತದಾನ ಮಹಾದಾನ, ಆದರೆ ಇತರರಿಂದ ರಕ್ತವನ್ನ ಪಡೆಯುವುದಕ್ಕಿಂತ್ತ ಮುಂಚಿತವಾಗಿ ರಕ್ತದ ಪರೀಕ್ಷೆ ಮಾಡಿಸುವುದು ಸೂಕ್ತ. ಏಡ್ಸ್ ಕಾಯಿಲೆ ಮಾನವರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ವೈರಸ್‌ನ ತೀವ್ರತೆ ಅತಿರೇಕಕ್ಕೆ ತಲುಪಿದರೆ ಸೋಂಕಿತ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.
ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿತ ವ್ಯಕ್ತಿಯಿಂದ ರಕ್ತವನ್ನ ಪಡೆದುಕೊಳ್ಳುವುದು,ಸೋಂಕಿತ ಸೂಜಿ-ಸಿರಂಜುಗಳ ಬಳಕೆ, ಎಚ್‌ಐಗೆ ತುತ್ತಾಗಿರುವ ತಾಯಿ ಮಗುವಿಗೆ ಸ್ತನಪಾನ ಮಾಡಿಸಿದಾಗ ಈ ಸೋಂಕು ಹರಡುತ್ತದೆ. ಎಲ್ಲಾ ಯುವಕ-ಯುವತಿಯರು ಸರಿಯಾದ ದಾರಿಯಲ್ಲಿ ಸಾಗಿ ವಿವಾಹವಾಗುವವರೆಗೂ ಬ್ರಹ್ಮಚರ್ಯ ಪಾಲನೆ ಮಾಡಿದರೆ ಈ ಮಾರಣಾಂತಿಕ ಸೋಂಕಿನ ಹರಡುವಿಕೆಯನ್ನ ನಿಲ್ಲಿಸಬಹುದು. ಕ್ಷಣಿಕ ಸುಖಕ್ಕಾಗಿ ನಿಮ್ಮ ಮುಂದಿನ ಉಜ್ವಲ ಭವಿಷ್ಯವನ್ನ ಹಾಳುಮಾಡಿಕೊಳ್ಳಬೇಡಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಎಚ್‌ಐವಿ ಹಾಗೂ ಏಡ್ಸ್‌ಗೆ ಸಂಬಂಧಪಟ್ಟಂತೆ ಎಲ್ಲರೂ ಎಚ್ಚರದಿಂದ ಮುನ್ನಡೆಯಬೇಕು. ನಾವು ಸಾಗುವ ಮಾರ್ಗ ಉತ್ತಮವಾಗಿದ್ದರೆ ಇಂತಹ ಸೋಂಕುಗಳ ಮೂಲವನ್ನೇ ನಾಶಪಡಿಸಬಹುದು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಸಾಗಬೇಕು. ಏಡ್ಸ್ ಎಂದರೆ ಭಯಬೇಡ ಜಾಗ್ರತೆ ವಹಿಸಿ ಎಂದು ತಿಳಿಸಿದರು.
ರೆಡ್ ರಿಬ್ಬನ್ ಕ್ಲಬ್ ಸಂಚಾಲಕ ಪಿ. ನಂದನ್ ಹಾಗೂ ಇತರರು ಹಾಜರಿದ್ದರು.