ಗದಗ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದ್ದು, ಇದರ ಯಶಸ್ಸಿಗೆ ಕಾಯಕ ಬಂಧುಗಳ ಪಾತ್ರ ಪ್ರಮುಖವಾಗಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಹೇಳಿದರು.
ನರೇಗಾ ಯೋಜನೆಯಡಿ ಗ್ರಾಮೀಣ ಭಾಗವನ್ನು ಅಭಿವೃದ್ಧಿಪಡಿಸುವ ಅವಕಾಶ ಕಾಯಕ ಬಂಧುಗಳಿಗೆ ಸಿಕ್ಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಪ್ರಯೋಜನ ದೊರಕಿಸಲು ಶ್ರಮವಹಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ನರೇಗಾ ಸಹಾಯಕ ನಿರ್ದೇಶಕ ಕುಮಾರ್ ಪೂಜಾರ್ ಮಾತನಾಡಿ, ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆಯಿಂದ ದುಡಿಯುವ ಕೈಗಳಿಗೆ ಸ್ಥಳೀಯವಾಗಿ ಕೆಲಸ ಸಿಕ್ಕಿದೆ. ಗಂಡು ಹೆಣ್ಣಿಗೂ ಸಮಾನ ಕೂಲಿ ದರ ನಿಗದಿಪಡಿಸಲಾಗಿದೆ. ಹಲವು ಕುಟುಂಬಗಳಿಗೆ ಈ ಕಾಯ್ದೆಯಿಂದ ಸಹಾಯವಾಗಿದೆ ಎಂದರು.ಜಿಲ್ಲಾ ಐಇಸಿ ಸಂಯೋಜಕ ವಿ.ಎಸ್.ಸಜ್ಜನ ಮಾತನಾಡಿ, ಕಾಯಕ ಬಂಧುಗಳ ಜವಾಬ್ದಾರಿ ಮಹತ್ವದಾಗಿದ್ದು, ನಲವತ್ತು ಕೂಲಿಕಾರರ ಮೇಲೆ ಒಬ್ಬರನ್ನು ಮೇಟಿ ಎಂದು ನೇಮಕ ಮಾಡುವರು. ಉದ್ಯೋಗ ಬೇಡಿಕೆ ಅರ್ಜಿ ಸಂಖ್ಯೆ 6 ಮತ್ತು ಹಾಜರಾತಿ ತೆಗೆದುಕೊಳ್ಳುವ ಬಗೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಐಇಸಿ ಸಂಯೋಜಕ ವಿರೇಶ ಶಿಬಿರಾರ್ಥಿಗಳಿಗೆ ಕಾಯಕ ಬಂಧು ಕಾರ್ಯಗಳು ಮತ್ತು ಜವಾಬ್ದಾರಿ ಕುರಿತು ಹೇಳಿದರು. ತಾಲೂಕು ಎಂಐಎಸ್ ಸಂಯೋಜಕ ಬಸವರಾಜ, ತಾಲೂಕು ತಾಂತ್ರಿಕ ಸಂಯೋಜಕ ಪ್ರವೀಣ್ ಮುಂತಾದವರು ಮಾತನಾಡಿದರು. ತರಬೇತಿಯಲ್ಲಿ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಕಾಯಕ ಬಂಧುಗಳು, ತಾಲೂಕಿನ ಬಿ.ಎಫ್.ಟಿ ಹಾಗೂ ಕಾಯಕ ಮಿತ್ರರು ಹಾಜರಿದ್ದರು.