ಸಿಆರ್‌ಎಫ್ ಯೋಜನೆಯಲ್ಲಿ ₹6 ಕೋಟಿ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗದೆ ಪ್ರಗತಿ ಪಥದಲ್ಲಿ ನಡೆಯುತ್ತಿರುವ ಜೊತೆಗೆ ಅಭಿವೃದ್ಧಿ ಪರ್ವ ಆರಂಭಿಸಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಮಲ್ಲೇನಹಳ್ಳಿ ಗ್ರಾಮದಿಂದ ಭಕ್ತರಹಳ್ಳಿ ತರೀಕೆರೆ ರಸ್ತೆಗೆ ಸಿಆರ್‌ಎಫ್ ಯೋಜನೆಯಲ್ಲಿ ₹6 ಕೋಟಿ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಸರ್ಕಾರ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರವಾಗಿ ಯಾವುದೇ ಜಾತಿ ಬೇಧವಿಲ್ಲದೆ ಸರ್ವ ಜನಾಂಗದ ಶಾಂತಿ ತೋಟ ನಿರ್ಮಾಣಕ್ಕೆ ಪಣ ತೊಟ್ಟು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ರೀತಿಯಲ್ಲಿ ಅಭಿವೃದ್ಧಿ ನಡೆಸುತ್ತಿದೆ ಎಂದು ತಿಳಿಸಿದರು.ಕಳೆದ ಹಲವಾರು ದಿನಗಳಿಂದ ಹಿಂದೆ ಬಿಳಿಕೆರೆ - ತರೀಕೆರೆ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಈಗ ತುಂಬಾ ಕಡೆ ಗುಂಡಿ ಬಿದ್ದಿರುವುದರಿಂದ ಆಯ್ದ ಭಾಗದಲ್ಲಿ ಮರು ಡಾಂಬರೀಕರಣ ಮಾಡಲು ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.ಸುಮಾರು ₹6 ಕೋಟಿ ವೆಚ್ಚದಲ್ಲಿ ಮಲ್ಲೇನಹಳ್ಳಿಯಿಂದ ಭಕ್ತರಹಳ್ಳಿ ವರೆಗೆ 7 ಕಿ.ಮೀ. ರಸ್ತೆಯನ್ನು ಮರು ಡಾಂಬರೀಕರಣ ಮಾಡುವುದರಿಂದ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಮುಕ್ತಾಯಗೊಳಿಸಬೇಕೆಂದು ಸೂಚನೆ ನೀಡಿದರು.ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವ ದಲ್ಲಿ ಹಲವಾರು ಜನಪರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.ಲೋಕೋಪಯೋಗಿ ಇಲಾಖೆಯಿಂದ ಜಾಗರದಲ್ಲಿ ₹10 ಕೋಟಿ ಕಾಮಗಾರಿ, ಗಂಗೆಗಿರಿ ಕೊಂಡದಖಾನ್ ವರೆಗೆ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಜಾಗರದಿಂದ ನೆತ್ತಿನ ಕೋಟೆಗೆ ₹5 ಕೋಟಿ ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ₹14 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.ಇದಲ್ಲದೆ ಪಿಆರ್‌ಡಿಯಲ್ಲಿ ಹಳ್ಳಿಗಳ ಒಳ ಭಾಗದ ರಸ್ತೆಗಳ ಅಭಿವೃದ್ಧಿಗೆ ₹10 ಕೋಟಿ ನೀಡಲಾಗಿದ್ದು, ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷ ಅನುದಾನದಲ್ಲಿ ₹10 ಕೋಟಿ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ. ಮಹಮದ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಗ್ರಾಪಂ ಸದಸ್ಯ ದಿನೇಶ್, ಶಿವು, ಸುರೇಶ್, ಬಿಂಡಿಗ ದೇವಿರಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕುಲಶೇಖರ್, ಮುಖಂಡರಾದ ಕಲ್ಲೇಶ್, ಜಯರಾಂ, ಜಗದೀಶ್ ಹಾಜರಿದ್ದರು. 26 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಿಂದ ಭಕ್ತರಹಳ್ಳಿ ತರೀಕೆರೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಎಚ್.ಡಿ. ತಮ್ಮಯ್ಯ ಬುಧವಾರ ಚಾಲನೆ ನೀಡಿದರು.