ಶಿರಹಟ್ಟಿ: ಶರಣರ ತತ್ವಾದರ್ಶ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಮಾಜದಲ್ಲಿ ಹಿಂಸೆ,ದ್ವೇಷಕ್ಕೆ ಅವಕಾಶವಿರದು. ಶಾಂತಿ ಹಾಗೂ ಸೌಹಾರ್ದತೆ ನಮ್ಮ ಧ್ಯೇಯವಾಗಿರಬೇಕು. ಜಾತಿ ವ್ಯವಸ್ಥೆಯಿಂದ ದೂರವಿರಬೇಕು ಎಂದು ಜಿಲ್ಲಾ ಯುಥ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.
ಸಾರ್ಥಕ ಜೀವನಕ್ಕೆ ಪುರಾಣ, ಪ್ರವಚನಗಳು ಪೂರಕವಾಗಿವೆ. ಇದರಿಂದ ಒಳ್ಳೆಯ ವಿಚಾರಗಳು ಮೂಡಲು ಸಾಧ್ಯ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಯುವಜನತೆ ಹೆಚ್ಚಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಧ್ಯಾತ್ಮದತ್ತ ಒಲವು ತೋರಬೇಕು. ಭಕ್ತಿ ಬದುಕನ್ನು ದಿವ್ಯಗೊಳಿಸುವ ಮಧುರ ಸಾಧನ. ಹಿರಿಯರಾಗಲಿ, ಕಿರಿಯರಾಗಲಿ ಅವರ ಮನಸ್ಸುಗಳಲ್ಲಿ ಭಕ್ತಿ ಭಾವ ಒಡಮೂಡಬೇಕು ಎಂದು ತಿಳಿಸಿದರು.
ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ಶರಣರ ಸಂದೇಶಗಳನ್ನು ಪ್ರಚುರಪಡಿಸುವ ಕಾರ್ಯ ಯಥೇಚ್ಛವಾಗಿ ನಡೆಯುತ್ತಿದೆ. ಇದು ಅತ್ಯಂತ ಸಂತೋಷದಾಯಕ ಸಂಗತಿ. ಆದರೆ ಸಮಾಜದಲ್ಲಿ ಕೆಲ ಬದಲಾವಣೆ ಆಗದೇ ಇರುವದು ವಿಷಾದಕರ ಸಂಗತಿ. ಆದ್ದರಿಂದ ತಪ್ಪುಗಳನ್ನು ಗುರುತಿಸಿ ಸರಿಯಾದ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ಪುರಾಣ,ಪ್ರವಚನ ಆಲಿಸುವುದರಿಂದ ಕೆಟ್ಟ ವಿಚಾರಗಳು ದೂರವಾಗಿ,ಒಳ್ಳೆಯ ಭಾವನೆ ಮನಸ್ಸಲ್ಲಿ ಮೂಡುತ್ತವೆ. ಆಧ್ಯಾತ್ಮದ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ವಿಚಾರಗಳನ್ನು ಹೊಂದಿರುವ ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಭಕ್ತರು ಪಾಲ್ಗೊಳ್ಳಬೇಕು ಎಂದರು.
ಎಸ್.ಬಿ. ಹೊಸೂರ ಪ್ರಾಸ್ತಾವಿಕ ಮಾತನಾಡಿದರು. ವರವಿ ಮೌನೇಶ್ವರ ಮಠದ ಮೌನೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.ಕೀರ್ತನ ಭಾರತಿ ವಿದ್ಯಾಪೀಠದ ಅಧ್ಯಕ್ಷ ಹಾಗೂ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯ ಇಳಕಲ್ಲದ ಆರ್.ಶರಣಬಸವ ಶಾಸ್ತ್ರಿಗಳು ಪ್ರವಚನ ನೀಡಿದರು. ರೇಷ್ಮೆ ಉದ್ಯಮಿ ಚಂದ್ರಕಾಂತ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಐ.ಜಿ. ಬಡಿಗೇರ ನಿರೂಪಿಸಿದರು. ಬಸವರಾಜ ಬೋರಶೆಟ್ಟರ ವಂದಿಸಿದರು.