ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಸ್‌ಐಆರ್ ಮತ್ತು ಫಾರ್ಮ್-6ರ ಬದಲಾವಣೆಗಳ ಕುರಿತು ಕೈಗೊಂಡ ಬಹುತೇಕ ನಿರ್ಧಾರಗಳಿಗೆ ಚುನಾವಣಾ ಆಯೋಗದಲ್ಲಿ ಬಹುಮತದ ಅನುಮೋದನೆ ಸಿಕ್ಕಿರಲಿಲ್ಲ. ಆಯೋಗದ ಇತರ ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳಲ್ಲಿ 14 ಬಾರಿ ತಮ್ಮ ಲಿಖಿತ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದರು.
ಸಂವಿಧಾನದ ನಿಯಮಗಳ ಪ್ರಕಾರ ಚುನಾವಣಾ ಆಯೋಗದ ಪ್ರತಿಯೊಂದು ನಿರ್ಧಾರವೂ ಬಹುಮತದಿಂದ ಅಂಗೀಕಾರಗೊಳ್ಳಬೇಕು. ಆದರೆ, ಆಕ್ಷೇಪಗಳ ನಡುವೆಯೂ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಜಾರಿಗೆ ತಂದು 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕಿಡಿಕಾರಿದರು.ಸಾಮಾಜಿಕ ಹೋರಾಟಗಾರ ಉಗ್ರ ನರಸಿಂಹೇಗೌಡ ಮಾತನಾಡಿ, ನಮ್ಮ ದೇಶದ ಬಹುಪಾಲು ಜನರು ಬಡ ಕಾರ್ಮಿಕರು, ಬುಡಕಟ್ಟು ಜನಾಂಗದವರು, ಶ್ರಮಿಕರು ಹಾಗೂ ಶೋಷಿತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಂಕಪಟ್ಟಿ, ಬ್ಯಾಂಕ್ ಖಾತೆ ಅಥವಾ ಜನನ ಪ್ರಮಾಣಪತ್ರಗಳನ್ನು ತರಲು ಅವರಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಅಭಿ ಮಾತನಾಡಿ, ದೇಶವನ್ನಾಳಿದ ವಿವಿಧ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡು ಧ್ವಂಸಗೊಳಿಸಿವೆ. ಇಷ್ಟೆಲ್ಲಾ ಆಘಾತಕಾರಿ ಅಕ್ರಮಗಳು ಸಾರ್ವಜನಿಕವಾಗಿ ಹೊರಬಂದಿದ್ದರೂ, ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸದೇ ಮೌನ ವಹಿಸಿರುವುದು ದುರದೃಷ್ಟಕರ ಎಂದರು.