ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರವು ಕೆಪಿಎಸ್- ಮ್ಯಾಗ್ನೆಟ್ ನೀತಿ ಹಾಗೂ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ಸಾಲದ ಒಪ್ಪಂದದ ಮೂಲಕ ರಾಜ್ಯದ 45000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಾಗೂ ಖಾಸಗಿ ಶಾಲೆಗಳಿಗೆ ಹಸ್ತಾಂತರಿಸಲು ನ.4 ರಂದು ವಿಧಾನಸೌಧದಲ್ಲಿ ಸಭೆ ನಡೆಸಿದೆ. ಮೊದಲ ಹಂತದಲ್ಲಿ 2000 ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಸರ್ಕಾರದ ಈ ಜನವಿರೋಧಿ ನಡೆ ಸರಿಯಲ್ಲ ಎಂದು ಅವರು ತೀವ್ರವಾಗಿ ಖಂಡಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ಸರ್ಕಾರಿ ಶಾಲೆಯ ಶಿಕ್ಷಕರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಶಿಕ್ಷಕರಿಗೆ ಸೂಕ್ತ ಸೌಲಭ್ಯ ಕಲ್ಪಿಸದೆ, ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಸರ್ಕಾರದ ನೀತಿಗಳೇ ಕಾರಣವಾಗಿದ್ದರೂ, ಶಿಕ್ಷಕರ ಮೇಲೆಯೇ ದೋಷ ಹೊರಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆಗಳನ್ನು ನೀಗಿಸಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ, ಶಾಲೆ ಅಭಿವೃದ್ಧಿ ಹೆಸರಿನಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರವು ಮುಂದಾಗಿದೆ ಎಂದು ಅವರು ಕಿಡಿಕಾರಿದರು.
ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ, ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ, ಪ್ರೊ. ಲತಾ ಮೈಸೂರು, ಮುಖಂಡರಾದ ಸುಮಾ, ಹೆಜ್ಜಿಗೆ ಪ್ರಕಾಶ್, ಭೂಮಿ ಗೌಡ, ಆಸಿಯಾ ಬೇಗಂ, ಎಲ್. ಶಂಭುಲಿಂಗಸ್ವಾಮಿ, ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ಸ್ವಾತಿ, ಚಂದ್ರಿಕಾ, ಹೇಮಾ, ಅಂಜಲಿ, ನಂದೀಶ್, ವಿಜಯ್ ಮೊದಲಾದವರು ಇದ್ದರು.