ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಆಸಕ್ತಿ, ಸೂಕ್ತ ಕಾರ್ಯತಂತ್ರ ಮುಖ್ಯ: ಸಿ.ಆರ್.ಕಲ್ಪಶ್ರೀ

KannadaprabhaNewsNetwork |  
Published : Nov 07, 2026, 01:15 AM IST
12 | Kannada Prabha

ಸಾರಾಂಶ

ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಸಾಮರ್ಥ್ಯ ಮತ್ತು ಸುಧಾರಿಸಿಕೊಳ್ಳಬೇಕಾದ ದೌರ್ಬಲ್ಯಗಳನ್ನು ಗುರುತಿಸಿಕೊಂಡು, ಅದಕ್ಕೆ ಅನುಗುಣವಾಗಿ ಅಧ್ಯಯನದ ಯೋಜನೆ ರೂಪಿಸಿಕೊಳ್ಳಬೇಕು. ವಿವಿಧ ವಿಷಯಗಳ ಅಧ್ಯಯನಕ್ಕೆ ಸಮಾನ ಆದ್ಯತೆ ನೀಡುವುದರ ಜೊತೆಗೆ, ಈಗಾಗಲೇ ಓದಿರುವ ವಿಷಯಗಳ ಪುನರಾವರ್ತನೆಗೆ ಹೆಚ್ಚಿನ ಮಹತ್ವ ನೀಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಆಸಕ್ತಿ, ಸಮಯ ನಿರ್ವಹಣೆ, ಅಪಾಯ ನಿರ್ವಹಣೆ ಹಾಗೂ ಸೂಕ್ತ ಕಾರ್ಯತಂತ್ರ ಅತ್ಯಂತ ಪ್ರಮುಖವಾಗಿವೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿ ಸಿ.ಆರ್. ಕಲ್ಪಶ್ರೀ ತಿಳಿಸಿದರು.

ನಗರ ಕೇಂದ್ರ ಗ್ರಂಥಾಲಯದಲ್ಲಿ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಕೆಎಎಸ್ ಪೂರ್ವಭಾವಿ ಪರೀಕ್ಷೆಯ 4ನೇ ಅಣಕು ಪರೀಕ್ಷೆಯ 2ನೇ ಪತ್ರಿಕೆಯ ಅಣಕು ಪರೀಕ್ಷೆಯನ್ನು ಕಾರ್ಯಕ್ರಮವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಸಾಮರ್ಥ್ಯ ಮತ್ತು ಸುಧಾರಿಸಿಕೊಳ್ಳಬೇಕಾದ ದೌರ್ಬಲ್ಯಗಳನ್ನು ಗುರುತಿಸಿಕೊಂಡು, ಅದಕ್ಕೆ ಅನುಗುಣವಾಗಿ ಅಧ್ಯಯನದ ಯೋಜನೆ ರೂಪಿಸಿಕೊಳ್ಳಬೇಕು. ವಿವಿಧ ವಿಷಯಗಳ ಅಧ್ಯಯನಕ್ಕೆ ಸಮಾನ ಆದ್ಯತೆ ನೀಡುವುದರ ಜೊತೆಗೆ, ಈಗಾಗಲೇ ಓದಿರುವ ವಿಷಯಗಳ ಪುನರಾವರ್ತನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ಅಧ್ಯಯನಕ್ಕೆ ಮಾಹಿತಿಯ ವಿಶ್ವಾಸಾರ್ಹ ಮೂಲಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಹಲವು ಮೂಲಗಳ ಹಿಂದೆ ಓಡುವ ಬದಲು, ಯಾವುದಾದರೂ ಒಂದು ಉತ್ತಮ ಮೂಲವನ್ನು ಆಯ್ಕೆ ಮಾಡಿಕೊಂಡು ಅದನ್ನೇ ಪದೇ ಪದೇ ಓದುವ ಮೂಲಕ ವಿಷಯದ ಮೇಲೆ ಸ್ಪಷ್ಟತೆ ಮತ್ತು ಹಿಡಿತ ಸಾಧಿಸಬಹುದು ಎಂದರು.

ಪೂರ್ವಭಾವಿ ಪರೀಕ್ಷೆಗೆ ಅಗತ್ಯವಿರುವ ಪ್ರಮುಖ ಅಂಶಗಳು, ಅಧ್ಯಯನ, ಸಾಮಗ್ರಿಗಳು, ಪಠ್ಯಪುಸ್ತಕಗಳು ಹಾಗೂ ಸ್ವಂತ ಟಿಪ್ಪಣಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಿಕೊಳ್ಳಬೇಕು. ಸಂಕ್ಷಿಪ್ತ ಮಾಹಿತಿ ಸಂಗ್ರಹ ತಯಾರಿಸಿಕೊಳ್ಳುವುದರಿಂದ ಕೊನೆಯ ಹಂತದ ಪುನರಾವರ್ತನೆಗೆ ಅನುಕೂಲವಾಗುತ್ತದೆ ಎಂದರು.

ಅನಗತ್ಯ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಅಧ್ಯಯನದ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಜೊತೆಗೆ ಸಹ ಸ್ಪರ್ಧಾರ್ಥಿಗಳೊಂದಿಗೆ ಗುಂಪು ಚರ್ಚೆ ನಡೆಸುವುದರಿಂದ ವಿಷಯಗಳ ಕುರಿತು ಹೆಚ್ಚಿನ ತಿಳವಳಿಕೆ ಹಾಗೂ ವಿಭಿನ್ನ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ. ಮಂಜುನಾಥ್, ಮೈಸೂರು ವಿವಿ ನಿವೃತ್ತ ಮುಖ್ಯ ಗ್ರಂಥಪಾಲಕ ಡಾ. ರಾಮಶೇಷ್, ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ಎಸ್. ಸೌಮ್ಯಾ ಮೊದಲಾದವರು ಇದ್ದರು.ನಿರಂತರ ಪರಿಶ್ರಮ, ಸರಿಯಾದ ಕಾರ್ಯತಂತ್ರ, ಆತ್ಮವಿಶ್ವಾಸ ಮತ್ತು ಶಿಸ್ತುಬದ್ಧ ಅಧ್ಯಯನವೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಪ್ರಮುಖ ಸೂತ್ರಗಳಾಗಿವೆ. ಅಭ್ಯರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ತಮ್ಮ ಗುರಿ ಸಾಧಿಸಬೇಕು.

- ಸಿ.ಆರ್. ಕಲ್ಪಶ್ರೀ, ಮುಖ್ಯ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ