ಎನ್‌ಇಪಿ ವಿರೋಧಿಸಿ ಎಐಡಿಎಸ್ಓ ಯಶಸ್ವಿ ಹೋರಾಟ: ಪ್ರೊ. ಅಲ್ಲಮಪ್ರಭು ಬೆಟ್ಟದೂರು

KannadaprabhaNewsNetwork | Published : Jul 8, 2024 12:31 AM

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಯಶಸ್ವಿ ಹೋರಾಟ ಕಟ್ಟುವಲ್ಲಿ ಎಐಡಿಎಸ್ಓ ಪ್ರಮುಖ ಪಾತ್ರ ವಹಿಸಿದೆ.

ವಿಜಯೋತ್ಸವ ಸಮಾವೇಶದಲ್ಲಿ ಹೋರಾಟಗಾರ

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಯಶಸ್ವಿ ಹೋರಾಟ ಕಟ್ಟುವಲ್ಲಿ ಎಐಡಿಎಸ್ಓ ಪ್ರಮುಖ ಪಾತ್ರ ವಹಿಸಿದೆ ಎಂದು ಹೋರಾಟಗಾರ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಾಲ್ಕು ವರ್ಷದ ಪದವಿಯನ್ನು ರಾಜ್ಯ ಸರ್ಕಾರ ಹಿಂದೆ ಪಡೆದಿರುವ ಹಿನ್ನೆಲೆ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಐಡಿಎಸ್ ಓ ಹಮ್ಮಿಕೊಂಡಿದ್ದ ವಿಜಯೋತ್ಸವ ಸಮಾವೇಶದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಗಳನ್ನು ಕೊಡುವುದನ್ನು ಬಿಟ್ಟರೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಬೇರೆ ಯಾವ ಉದ್ದೇಶವಿಲ್ಲ. ಶಿಕ್ಷಣವನ್ನ ಖಾಸಗೀಕರಣಗೊಳಿಸಿ, ಶಿಕ್ಷಣದಲ್ಲಿ ಧಾರ್ಮಿಕ ವಿಷಯ ತುಂಬುವಂತಹ ಪಿತೂರಿಯಾಗಿತ್ತು ಎಂದು ಹೇಳಿದರು.ನಮ್ಮ ದೇಶ ವಿವಿಧತೆಯಿಂದ ಕೂಡಿರುವಂಥದ್ದು ಹಾಗೂ ವಿವಿಧ ಬಗೆಯ ಆಹಾರ ಮಾದರಿಗಳನ್ನು ಹೊಂದಿರುವಂಥದ್ದು. ಇಂಥ ದೇಶದಲ್ಲಿ ಶಿಕ್ಷಣವನ್ನ ಕೇಂದ್ರೀಕರಣಗೊಳಿಸುವಂತಹ ಸರ್ಕಾರದ ಈ ಶಿಕ್ಷಣ ವಿರೋಧಿ ನೀತಿ ವಿರೋಧಿಸಿ ಎಐಡಿಎಸ್ಓ ಹಾಗೂ ನಮ್ಮ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ನಿರಂತರ ಸಹಿ ಸಂಗ್ರಹ ಮಾಡಲಾಗಿತ್ತು. ರಾಜ್ಯ ಶಿಕ್ಷಣ ನೀತಿಯನ್ನು ತರುವಲ್ಲಿ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದರು.

ಎಐಡಿಎಸ್ಓ ರಾಜ್ಯ ನಾಯಕರಾದ ತುಳಜರಾಮ್ ಎನ್.ಕೆ. ಮಾತನಾಡಿ, ಕೇಂದ್ರ ಸರ್ಕಾರ ಜನರ ಹೋರಾಟಕ್ಕೆ ಸ್ಪಂದಿಸದೆ ಭಂಡತನದಿಂದ ಈ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ, ಜನ ವಿರೋಧಿ ನೀತಿಯನ್ನು ಜಾರಿಗೆ ತಂದಿದ್ದು, ಈಗ ಅದನ್ನ ಹಿಂಪಡೆಯಲಾಗಿದೆ ಎಂದರು.

ಸಂಘಟನೆ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಗಾಯತ್ರಿ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಎಐಡಿಎಸ್ಓ ಕಾರ್ಯಕರ್ತರಾದ ವೆಂಕಟೇಶ್, ಕೋಟೇಶ್ ಪ್ರದೀಪ್, ಪ್ರಾಧ್ಯಾಪಕರಾದ ಮಹಾಂತೇಶ್ ನೆಲಾಗಣಿ, ಡಾ. ತುಕಾರಾಮ ನಾಯಕ್, ಸೋಮೇಶ್ ಉಪ್ಪಾರ್, ಡಾ. ಪ್ರಕಾಶ್ ಬಳ್ಳಾರಿ, ಡಾ. ನವೀನ್ ಪಿ., ವಸಂತ್ ಕುಮಾರ್, ಶಿವರಾಮ್, ಡಾ. ನಾಗರಾಜ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article