ಜಗತ್ತಿನ ಮಹತ್ವದ ಘಟನೆಗಳಿಗೆ ಪತ್ರಿಕೆಗಳು ಕಾರಣ: ಉಪ ವಿಭಾಗಾಧಿಕಾರಿ ಯತೀಶ್

KannadaprabhaNewsNetwork |  
Published : Jul 08, 2024, 12:31 AM IST
ಪತ್ರಿಕಾ ದಿನಾಚರಣೆ ಉದ್ಘಾಟನೆ | Kannada Prabha

ಸಾರಾಂಶ

ಸಾಗರ ಪಟ್ಟಣದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸಾಗರ

ಪತ್ರಕರ್ತರು ಮತ್ತು ಪತ್ರಿಕೆಗಳಿಲ್ಲದಿದ್ದರೆ ಜಗತ್ತಿನ ಹಲವು ಮಹತ್ವದ ಘಟನೆ ನಡೆಯುತ್ತಿರಲಿಲ್ಲ ಎಂದು ಉಪ ವಿಭಾಗಾಧಿಕಾರಿ ಯತೀಶ್ ಎನ್. ಅಭಿಪ್ರಾಯಪಟ್ಟರು.

ಪಟ್ಟಣದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಹಕ್ಕುಗಳು, ವಾಕ್ ಸ್ವಾತಂತ್ರ್ಯ, ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ಬರಬೇಕೆಂಬ ಇತ್ಯಾದಿ ವಿಚಾರಗಳನ್ನು ಹದಿನೇಳನೇ ಶತಮಾನದಲ್ಲಿ ಪತ್ರಿಕೆಗಳು ಮಾಡಿದವು. ಅವತ್ತಿನ ಪತ್ರಕರ್ತರ ಹೋರಾಟದ ಫಲವಾಗಿ ಇವತ್ತು ನಾವು ಸ್ವಾತಂತ್ರ್ಯ ಫಲ ಅನುಭವಿಸುತ್ತಿದ್ದೇವೆ ಎಂದರು.

ಸ್ವಾತಂತ್ರ್ಯ ಹೋರಾಟ ನಡೆದಿರುವುದೇ ಪತ್ರಿಕೆಗಳ ಮೂಲಕ. ಸ್ವಾತಂತ್ರದ ಸಂದೇಶಗಳು, ಹೋರಾಟದ ವಿಷಯಗಳು ಪತ್ರಕರ್ತರ ಮೂಲಕ ಜನರಿಗೆ ತಲುಪುತ್ತಿತ್ತು. ಗಾಂಧೀಜಿ, ತಿಲಕರು, ರಾಜಾರಾಮ ಮೋಹನರಾಯರು ಮುಂತಾದವರು ಪತ್ರಿಕೆ ಮೂಲಕ ಜನರನ್ನು ಎಚ್ಚರಿಸಿದರು ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಇಂದು ಪತ್ರಿಕೋದ್ಯಮ ಉದ್ಯಮವಾಗಿ ಲಾಭದ ಲೆಕ್ಕಾಚಾರದಲ್ಲಿ ಬೆಳೆಯುತ್ತಿವೆ. ಸಣ್ಣ ಪತ್ರಿಕೆಗಳಿಗೂ ಸರ್ಕಾರ ಸಹಾಯ ಮಾಡಬೇಕು. ಜನರ ಧ್ವನಿಯಾಗಿ ಪತ್ರಿಕೆಗಳು ಕೆಲಸ ಮಾಡಬೇಕು. ಮುದ್ರಣ ಮಾಧ್ಯಮಗಳ ಜವಾಬ್ದಾರಿ ಹೆಚ್ಚಾಗಿದೆ ಎಂದರು.

ಉಪನ್ಯಾಸಕ ಡಾ.ಕೆ.ಪ್ರಭಾಕರರಾವ್ ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಹೊಣೆಗಾರಿಕೆ ಕುರಿತು ಮಾತನಾಡಿ, ಪತ್ರಿಕೆ ಇತಿಹಾಸ ನೋಡಿದರೆ ಬಹಳಷ್ಟು ರಾಷ್ಟ್ರೀಯ ನಾಯಕರನ್ನು ಪತ್ರಿಕೆಗಳು ರೂಪಿಸಿವೆ. ಸಮಾಜವನ್ನು ಧನಾತ್ಮಕವಾಗಿ ಪುನರ್ ರೂಪಿಸುವ ಜವಾಬ್ದಾರಿ ಪತ್ರಿಕೆಗಳು ನಿರ್ವಹಿಸಿವೆ. ಸಾಮಾಜಿಕ ಮೌಲ್ಯಗಳನ್ನು ಆಗಾಗ್ಗೆ ಧನಾತ್ಮಕವಾಗಿ ಬದಲಾವಣೆ ಮಾಡಿಕೊಳ್ಳುವುದು ಸಾಮಾಜಿಕ ಸುಧಾರಣೆ. ಇದರಲ್ಲಿ ಮಾಧ್ಯಮಗಳ ಹೊಣೆಗಾರಿಕೆ ಮಹತ್ವದ್ದು ಎಂದು ಹೇಳಿದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎಚ್.ವಿ.ರಾಮಚಂದ್ರರಾವ್ ವಿಮೆ ಬಾಂಡ್ ವಿತರಿಸಿದರು. ಪತ್ರಕರ್ತ ಶೈಲೇಂದ್ರ ಎ.ಆರ್. ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾ ವಿತರಕರಿಗೆ ಸೈಕಲ್ ವಿತರಿಸಲಾಯಿತು. ಗಣಪತಿ ಶಿರಳಗಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ್, ಪ್ರೇಮಾ ಕಿರಣಸಿಂಗ್, ಎ.ಡಿ.ರಾಮಚಂದ್ರ ಭಟ್, ಲಕ್ಷ್ಮಿನಾರಾಯಣ ಹೆಗಡೆ, ಕೆ.ಎನ್.ವೆಂಕಟಗಿರಿ ಮತ್ತಿತರರಿದ್ದರು. ರಮೇಶ್ ಎನ್.ಸ್ವಾಗತಿಸಿ, ಎಸ್.ವಿ.ಹಿತರಕ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಶಂಕರ ಹೆಗಡೆ ವಂದಿಸಿ, ಧರ್ಮರಾಜ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!