ಸಮಾಜದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರುವ ಗುರಿ ಹಾಕಿಕೊಳ್ಳಿ: ನಾರಾಯಣಸಾ ಭಾಂಡಗೆ

KannadaprabhaNewsNetwork |  
Published : Aug 12, 2024, 01:13 AM ISTUpdated : Aug 12, 2024, 01:14 AM IST
ಹುಬ್ಬಳ್ಳಿಯ ದಾಜಿಬಾನಪೇಟೆಯ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣಮಂಟಪದಲ್ಲಿ ಎಸ್‌ಎಸ್‌ಕೆ ಪದವೀಧರರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಇಲ್ಲಿನ ದಾಜಿಬಾನಪೇಟೆಯ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣಮಂಟಪದಲ್ಲಿ ಎಸ್‌ಎಸ್‌ಕೆ ಪದವೀಧರರ ಸಂಘದ ವತಿಯಿಂದ ಭಾನುವಾರ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

ಹುಬ್ಬಳ್ಳಿ: ಸಮಾಜದ ವಿದ್ಯಾರ್ಥಿಗಳು ಓದಿನ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸಬೇಕು. ವೈದ್ಯ, ಎಂಜಿನಿಯರ್‌, ಲೆಕ್ಕ ಪರಿಶೋಧಕರು ಸೇರಿದಂತೆ ಉನ್ನತ ಸ್ಥಾನಕ್ಕೇರುವ ಗುರಿ ಹಾಕಿಕೊಳ್ಳುವಂತೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸಲಹೆ ನೀಡಿದರು.

ಇಲ್ಲಿನ ದಾಜಿಬಾನಪೇಟೆಯ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣಮಂಟಪದಲ್ಲಿ ಎಸ್‌ಎಸ್‌ಕೆ ಪದವೀಧರರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಸ್‌ಎಸ್‌ಕೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ. ಸದ್ಯ ನಮ್ಮ ಸಮಾಜದ ಯಾರೂ ಐಎಎಸ್‌ ಅಧಿಕಾರಿಗಳಿಲ್ಲ. ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನ್ಯಾಯಾಧೀಶರು ನಮ್ಮ ಸಮಾಜದವರೇ ಇದ್ದರು. ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಬಯಸಿದರೆ ಅವರಿಗೆ ಬೇಕಾದ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದರು.

ಹುಬ್ಬಳ್ಳಿಯಲ್ಲಿ ನಮ್ಮ ಸಮಾಜ ಬಲಿಷ್ಠವಾಗಿದೆ. ಆದರೂ ನಮ್ಮ ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ. ಸಮಾಜದವರು ಯಾರೂ ಶಾಸಕರಿಲ್ಲ. ರಾಜಕೀಯ ಪ್ರಾತಿನಿಧ್ಯ ಸಿಕ್ಕರೆ ಸಮಾಜ ಸಂಘಟನೆಗೆ ಶಕ್ತಿ ಬರುತ್ತದೆ ಎಂದರು.ಸರ್ಕಾರದ ಯೋಜನೆಗಳು ನಮ್ಮ ಸಮಾಜದ ಬಡವರಿಗೆ ಸಿಗಬೇಕು. ನಿಗಮ- ಮಂಡಳಿಗಳಿಗೆ ನಮ್ಮ ಸಮಾಜದವರನ್ನು ಪರಿಗಣಿಸಬೇಕು. ಸಮಾಜದವರು ಏಳೆಂಟು ಜನ ಶಾಸಕರು, 2–3 ಜನ ಸಂಸದರಾಗಬೇಕು ಎಂದರು.

ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸಬೇಕು. ಪರಿಶ್ರಮದಿಂದ ಮುಂದೆ ಬರುವಂತೆ ಮಾರ್ಗದರ್ಶನ ಮಾಡಬೇಕು. ಸಮಾಜದರಿಂದ ಉಪಯೋಗ ಪಡೆದು ಉನ್ನತ ಹಂತಕ್ಕೇರಿದವರು ನಂತರ ಸಮಾಜವನ್ನು ಮರೆಯಬಾರದು. ಎಸ್‌ಎಸ್‌ಕೆ ಸಮಾಜದವರು ಪರಿಶ್ರಮಿಗಳು. ಸಾವಜಿ ಖಾನಾವಳಿಗಳು ಗುಣಮಟ್ಟದ ಆಹಾರಕ್ಕೆ ದೇಶದಲ್ಲೇ ಹೆಸರಾಗಿವೆ. ಇದು ನಮ್ಮ ಸಮಾಜದ ಬ್ರ್ಯಾಂಡ್. ಯಾವ ಕೆಲಸವೂ ಕೀಳಲ್ಲ ಎಂದರು.

ಎಸ್‌ಎಸ್‌ಕೆ ಕೇಂದ್ರ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಸತೀಶ ಮೆಹರವಾಡೆ ಮಾತನಾಡಿ, ಮಕ್ಕಳು ಸಮಾಜ ಮತ್ತು ಮನೆತನದ ಗೌರವ ಕಾಪಾಡಬೇಕು. ಸಮಾಜದವರು ವ್ಯವಹಾರದ ಜತೆಗೆ ಶಿಕ್ಷಣಕ್ಕೂ ಒತ್ತು ನೀಡಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡ ಕೃಷ್ಣಾಸಾ ಸೋಳಂಕಿ ಮಾತನಾಡಿದರು. ಎಸ್‌ಎಸ್‌ಕೆ ಪದವೀಧರರ ಸಂಘದ ಅಧ್ಯಕ್ಷ ರಾಜೇಶ ಎನ್‌. ಜಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಈ ವೇಳೆ ಎಸ್‌ಎಸ್‌ಕೆ ಬ್ಯಾಂಕ್ ಅಧ್ಯಕ್ಷ ವಿಠ್ಠಲಸಾ ಲದವಾ, ನಾಗೇಶ ಕಲಬುರ್ಗಿ, ನೀಲಕಂಠಸಾ ಪಿ.ಜಡಿ, ಎಫ್.ಕೆ. ದಲಬಂಜನ್‌, ಸುಭಾಷ ಭಾಂಡಗೆ, ಕಿರಣ ಪೂಜಾರಿ, ಭಾಸ್ಕರ ಜಿತೂರಿ, ನಾರಾಯಣ ಖೋಡೆ, ಶ್ರೀಕಾಂತ ಹಬೀಬ, ಡಿ.ಕೆ. ಚವ್ಹಾಣ, ರಂಗಾ ಬದ್ದಿ, ತುಕಾರಾಮ ಪೂಜಾರಿ ಸೇರಿದಂತೆ ಹಲವರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...