- ಸಂಸದ ಸಿದ್ದೇಶ್ವರ ಮನವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಂದನೆ: ಬಿಜೆಪಿ ಅಭ್ಯರ್ಥಿ ಹೇಳಿಕೆ
- ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ, ಮುಖಂಡರು, ಕಾರ್ಯಕರ್ತರ ಪ್ರಚಾರ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯದ 12 ಕೆಎಸ್‌ಆರ್‌ಪಿ ತುಕಡಿಗಳ ಹೊರತಾಗಿ ಕಾನೂನು, ಸುವ್ಯವಸ್ಥೆ ನಿಭಾಯಿಸಲು ಎರಡು ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪಿಸುವ ಪ್ರಸ್ತಾವನೆ ಕೇಂದ್ರ ಗೃಹ ಸಚಿವಾಲಯದ ಹಂತದಲ್ಲಿದೆ. ಹರಪನಹಳ್ಳಿಯಲ್ಲಿ ಬೆಟಾಲಿಯನ್ ಸ್ಥಾಪಿಸುವ ಸಂಸದ ಜಿ.ಎಂ.ಸಿದ್ದೇಶ್ವರ ಪ್ರಯತ್ನವನ್ನು ಸಾಕಾರಗೊಳಿಸುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭರವಸೆ ನೀಡಿದರು.
ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಈ ತಾಲೂಕಿನಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್ ಸ್ಥಾಪಿಸುವುದಕ್ಕೆ ಆದ್ಯತೆ ನೀಡಲಾಗುವುದು. ಈಗಾಗಲೇ ಸಂಸದ ಸಿದ್ದೇಶ್ವರ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಗೃಹ ಇಲಾಖೆಗೆ ಕಳಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ, ಹರಪನಹಳ್ಳಿಗೆ ಘಟಕ ಮಂಜೂರು ಮಾಡುವಂತೆ ಮಾಡಿದ್ದು, ಅಮಿತ್ ಶಾ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಚುನಾವಣೆ ಮುಗಿದ ನಂತರ ಹರಪನಹಳ್ಳಿಯಲ್ಲಿ ಇಂಡಿಯ ರಿಸರ್ವ್ ಬೆಟಾಲಿಯನ್ ಸ್ಥಾಪನೆಗೆ ಪ್ರಥಮಾದ್ಯತೆ ಮೇಲೆ ಚಾಲನೆ ನೀಡುತ್ತೇವೆ. ವಿಜಯನಗರ ಜಿಲ್ಲೆಗೆ ಹರಪನಹಳ್ಳಿ ತಾಲೂಕು ಸೇರಿದ್ದರೂ, ಭಾವನಾತ್ಮಕವಾಗಿ ದಾವಣಗೆರೆ ಜೊತೆಗೆ ಇಲ್ಲಿನ ಜನತೆ ಬೆರೆತಿದ್ದಾರೆ. ಈ ಕ್ಷೇತ್ರದ ಬಗ್ಗೆ ತಮಗೂ ವಿಶೇಷ ಅಭಿಮಾನ ಇದೆ. ನಿಮ್ಮೆಲ್ಲಾ ಕಷ್ಟ ಸುಖಗಳಿಗೆ ನಾವು ಸ್ಪಂದಿಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಂಸದರ ಜನಸಂಪರ್ಕ ಕಚೇರಿ ಸ್ಥಾಪಿಸುವೆ. ಸಾರ್ವಜನಿಕರು ಕೆಲಸಗಳಿಗೆ ವೃಥಾ ದಾವಣಗೆರೆ ಬರುವುದು ತಪ್ಪಲಿ. ನಾವೇ ಇಲ್ಲಿಗೆ ಬರುವಂತೆ, ಇಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ಸಹ ನೇಮಿಸುವೆ ಎಂದು ತಿಳಿಸಿದರು.
ನಿರಂತರ ಜನ ಸಂಪರ್ಕದಲ್ಲಿದ್ದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ. ಈಗಾಗಲೇ ಸಂಸದ ಸಿದ್ದೇಶ್ವರ, ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಜಿಲ್ಲಾ ಖನಿಜ ನಿಧಿ, ಸಂಸದರ ಅನುದಾನ ಬಳಸಿ, ಎಲ್ಲ ಗ್ರಾಮಗಳ ಶಾಲಾ ಕೊಠಡಿ, ರಂಗಮಂದಿರ, ಅಂಗನವಾಡಿ ಕಟ್ಟಡ, ವ್ಯಾಯಾಮ ಶಾಲೆ, ಬಸ್ಸು ತಂಗುದಾಣ, ಸಿಮೆಂಟ್ ರಸ್ತೆ ನಿರ್ಮಿಸಿದ್ದಾರೆ. ಪರಿಶಿಷ್ಟರು ಹೆಚ್ಚಾಗಿರುವ ಗ್ರಾಮಗಳನ್ನು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿಪಡಿಸಿದ್ದಾರೆ. ಜಲಜೀವನ್ ಮಿಷನ್‌ನಡಿ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರೊದಗಿಸಲಾಗುತ್ತಿದೆ ಎಂದರು.ಗ್ರಾಮ ಸಡಕ್‌ನಡಿ ಗ್ರಾಮೀಣ ರಸ್ತೆ ನಿರ್ಮಿಸಿದ್ದಾರೆ. ಮರಿಯಮ್ಮನಹಳ್ಳಿ- ಹರಪನಹಳ್ಳಿ- ಹರಿಹರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು, ಶೀಘ್ರವೇ ಹೆದ್ದಾರಿ ಅಭಿವೃದ್ಧಿಯಾಗಲಿದೆ. ಹರಪನಹಳ್ಳಿ ಸೇರಿದಂತೆ ಇಡೀ ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಯಾದ ತಮ್ಮನ್ನು ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಶೀರ್ವದಿಸಬೇಕು. ಮಹಿಳೆಯರಿಗೆ ಮೀಸಲಾತಿಯೆಂಬುದನ್ನು ಬರೀ ಬಾಯಿ ಮಾತಲ್ಲಿ ಅಲ್ಲ ದಾವಣಗೆರೆ ಕ್ಷೇತ್ರದಲ್ಲಿ ಮಹಿಳೆಗೆ ಅವಕಾಶ ನೀಡಿ, ಮೋದಿ ಪ್ರೋತ್ಸಾಹಿಸಿದ್ದಾರೆ. ತಮ್ಮನ್ನು ಭಾರಿ ಮತಗಳ ಅಂತರದಲ್ಲಿ ಗೆಲ್ಲಿಸಿ, ಲೋಕಸಭೆಗೆ ಆಯ್ಕೆ ಮಾಡುವಂತೆ ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಲೋಕಸಭೆ ಚುನಾವೆ ದೇಶಕ್ಕೆ ಅತ್ಯಂತ ಮಹತ್ವದ ಚುನಾವಣೆಯಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಆಗದ ಅಭಿವೃದ್ಧಿ ಕಾರ್ಯಗಳನ್ನು ನರೇಂದ್ರ ಮೋದಿ 2014ರಿಂದ ಈವರೆಗೆ ಮಾಡಿ ತೋರಿಸಿದ್ದಾರೆ. ಕೇವಲ ಒಂದು ದಶಕದಲ್ಲಿ ಮೋದಿ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಜನಧನ ಖಾತೆ ಘೋಷಿಸಿದಾಗ ಎಷ್ಟೋ ಜನ ವ್ಯಂಗ್ಯವಾಡಿದ್ದರು. ಆದರೆ, ಜನಧನ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಹಣ ಯಾವುದೇ ಮಧ್ಯವರ್ತಿಗಳ ಪಾಲಾಗದೇ, ನೇರವಾಗಿ ಫಲಾನುಭವಿ ಖಾತೆಗೆ ಜಮಾ ಆಗುತ್ತಿದೆ. ಇದು ಮೋದಿ ಬದ್ಧತೆ, ದೂರದೃಷ್ಟಿಗೆ ಸಾಕ್ಷಿ ಎಂದರು.ಕೇಂದ್ರದಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ₹100 ಬಿಡುಗಡೆಯಾದರೆ, ಜನರಿಗೆ ಕೇವಲ ₹15 ಮಾತ್ರ ಸಿಗುತ್ತಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ₹100 ಬಿಡುಗಡೆ ಮಾಡಿದರೆ, ಫಲಾನುಭವಿಗೆ ₹100 ಸಿಗುತ್ತಿತ್ತು. ಹಣ ನೇರವಾಗಿ ಫಲಾನುಭವಿ ಖಾತೆಗೆ ಜಮಾ ಆಗುತ್ತಿದೆ. ಮುಂದೆಯೂ ಮೋದಿ ಪ್ರಧಾನಿಯಾಗಿ ದೇಶವನ್ನು ಸುಭದ್ರಗೊಳಿಸುವ ಜೊತೆಗೆ ದೇಶ ಸುಭೀಕ್ಷೆಯಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಜನರೂ ನೆಮ್ಮದಿಯಿಂದ ಬಾಳುವಂತಾಗಲಿದೆ ಎಂದು ಅವರು ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಜಿ.ಎಸ್. ಅಶ್ವಿನಿ, ಲೋಕೇಶ, ಆರ್.ಅಶೋಕ, ಮಲ್ಲೇಶ, ಯಡಿಹಳ್ಳಿ ಶೇಖರಪ್ಪ, ಮಹೇಶ ಪೂಜಾರ, ಮಂಜುನಾಥ ಆರ್. ನಾಯ್ಕ, ಕಲ್ಲಣ್ಣಗೌಡ, ಮಂಜುನಾಥ, ವೀರಭದ್ರಪ್ಪ, ಮಹಾಂತೇಶ, ಬಸವರಾಜ, ಹೇಮಣ್ಣ, ಅಂಜಿನಪ್ಪ, ನಾಗರಾಜ, ವೀರಣ್ಣ, ಮಂಡಲ ಅಧ್ಯಕ್ಷರು, ಸದಸ್ಯರು, ಗ್ರಾಪಂ ಸದಸ್ಯರು, ಬೂತ್ ಅಧ್ಯಕ್ಷರು, ಸದಸ್ಯರು, ಗ್ರಾಮದ ಬಿಜೆಪಿ ಮುಖಂಡರು, ಗ್ರಾಮಸ್ಥರು ಇದ್ದರು.ಮಳೆಯಲ್ಲೂ ಪ್ರಚಾರ:
ತಾಲೂಕಿನ ನೀಲಗುಂದ, ಚಿರಸ್ತಳ್ಳಿ, ಯಡೆಹಳ್ಳಿ ಸೇರಿದಂತೆ ವಿವಿಧೆಡೆ ಪ್ರಚಾರ ವೇಳೆ ಮಳೆ ಸುರಿಯಿತು. ಮಳೆಯ ನಡುವೆಯೂ ಗಾಯತ್ರಿ ಸಿದ್ದೇಶ್ವರ್ ಮತ್ತು ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಪ್ರಚಾರ ಮಾಡಿದ್ದು ಗಮನ ಸೆಳೆಯಿತು.- - - ಬಾಕ್ಸ್ ಗಾಯತ್ರಕ್ಕನಿಗೆ ಗೆಲ್ಲಿಸೋದೇ ನಮ್ಮೆಲ್ಲರ ಗುರಿಪ್ರಧಾನಿ ನರೇಂದ್ರ ಮೋದಿ ಬಡವ, ಶ್ರೀಸಾಮಾನ್ಯರ ಪರ ಸದಾ ನಿಂತು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಹೇಳಿದರು.
ಕೋವಿಡ್ ವೇಳೆ ಎಲ್ಲರಿಗೂ 2 ಸಲ ಲಸಿಕೆ ನೀಡಿದ್ದಲ್ಲದೇ, ಬೂಸ್ಟರ್ ಡೋಸ್ ಕೂಡ ಕೊಡಿಸಿದರು. ಉಚಿತವಾಗಿ ಪಡಿತರ ನೀಡಿದರು. ದೊಡ್ಡ ದೊಡ್ಡ ಕಾಯಿಲೆ ಬಂದರೆ ಸಾಲ ಸೂಲ ಮಾಡಿ ಸಂಕಷ್ಟಕ್ಕೆ ಜನರು ಸಿಲುಕಿ ಆಸ್ತಿ, ಪಾಸ್ತಿ ಮಾರಿಕೊಳ್ಳುವ ಸ್ಥಿತಿ ಇತ್ತು. ಅದನ್ನು ಮನಗಂಡು ಮೋದಿ ಆಯುಷ್ಮಾನ್ ಭಾರತ್ ಯೋಜನೆ ತಂದು, ₹5 ಲಕ್ಷವರೆಗೂ ಉಚಿತ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಬಡವ, ಶ್ರೀಸಾಮಾನ್ಯರ ಪರ ಇನ್ನಷ್ಟು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಎಲ್ಲಾ ಕಾರ್ಯಕರ್ತರು ಮೋದಿ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ, ಗಾಯತ್ರಿ ಸಿದ್ದೇಶ್ವರ್ ಅಕ್ಕನವರನ್ನು ಗೆಲ್ಲಿಸಬೇಕು.- - - -13ಕೆಡಿವಿಜಿ5, 6, 7:
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ, ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿದರು.