ದಾಂಡೇಲಿ: ಅಂತಾರಾಷ್ಟ್ರೀಯ ರೋಟರಿ ಕ್ಲಬ್ ಜಗತ್ತಿನನ್ನು ಪೋಲಿಯೋ ಮುಕ್ತವನ್ನಾಗಿ ಮಾಡಲು ಹೋರಾಡಿ ಯಶಸ್ವಿಯಾಗಿದೆ. ೨೦೩೦ರ ಹೊತ್ತಿಗೆ ಭಾರತವನ್ನು ಸಂಪೂರ್ಣ ಸಾಕ್ಷರತಾ ದೇಶ ಮಾಡುವ ಗುರಿಯನ್ನು ಹೊಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಿರಂತರ ಪ್ರಯತ್ನದಲ್ಲಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಪ್ರಾಂತಪಾಲ ಕೊಲ್ಲಾಪುರದ ನಾಸಿರ್ ಬೋರ್ಸದ್ವಾಲಾ ತಿಳಿಸಿದರು.
ವಿಶ್ವವನ್ನು ಪೋಲಿಯೋ ಮುಕ್ತದ ಹೋರಾಟ ಫಲವಾಗಿ ವಿಶ್ವದಲ್ಲಿಯೇ ಇಬ್ಬರು ಪೋಲಿಯೋ ಪೀಡಿತರು ಮಾತ್ರ ಉಳಿದುಕೊಂಡಿದ್ದಾರೆ. ಭಾರತವನ್ನು ಸಂಪೂರ್ಣ ಸಾಕ್ಷರತಾ ದೇಶ ಮಾಡುವತ್ತ ಗಮನಹರಿಸಿ ಶಾಲೆಗಳಲ್ಲಿ ಕಂಪ್ಯೂಟರ್. ಲ್ಯಾಪ್‌ಟಾಪ್, ಶುದ್ಧ ನೀರು, ಆಟಿಕೆ, ಆಟದ ಮೈದಾನ, ಪ್ರಯೋಗಾಲಯ, ನುರಿತ ಶಿಕ್ಷಕರನ್ನು ಒದಗಿಸಲಾಗುತ್ತಿದೆ. ಇನ್ನೂ ದಾಂಡೇಲಿಯಲ್ಲಿ ೧೯೮೦ರ ವೇಳೆಗೆ ಆರಂಭವಾದ ರೋಟರಿ ಶಾಲೆ ಅತ್ಯುತ್ತಮವಾಗಿ ಸೇವೆ ನೀಡುತ್ತಿರುವುದು ಗಮನಾರ್ಹ ಎಂದರು.
ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷ ಜೋಸೆಫ್ ಎಸ್. ಗೋನ್ಸಾಲಿಸ್ ಮಾತನಾಡಿ, ನಿಸ್ವಾರ್ಥ ಸೇವಾ ಮನೋಭಾವದಿಂದ ೪ ಲಕ್ಷಕ್ಕೂ ಸದಸ್ಯ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿದೆ. ಪ್ರತಿ ಸದಸ್ಯರು ಸೇವಾ ಮನೋಭಾವ ಮತ್ತು ಸಮರ್ಪಣಾ ಭಾವನೆಯಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಸಂಪರ್ಕ ಅಧಿಕಾರಿ ಕೆ.ಜಿ. ಗಿರಿರಾಜ ಇದ್ದರು.
ಕಾರ್ಯಕ್ರಮದಲ್ಲಿ ಗಾಯನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿನಿ ಅಕ್ಷತಾ ಬಿರಾದಾರ ಹಾಗೂ ದಾಂಡೇಲಿಯ ೨೦೨೨- ೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ತಿವಾರಿ ಹಾಗೂ ಸಮಾಜಸೇವಕ ಪ್ರಕಾಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಪ ಪ್ರಾಂತಪಾಲ ಧಾರವಾಡದ ಆನಂದಕುಮಾರ್ ಪಿ. ನಾಯಕ, ದಾಂಡೇಲಿ ರೋಟರಿ ಕ್ಲಬ್ ಕಾರ್ಯದರ್ಶಿ ಅಶುತೋಷಕುಮಾರ ರೈ ಹಾಗೂ ಪ್ರಮುಖರಾದ ದೀಪಕ್ ಎಸ್ ಭಂಡಗಿ, ಲಿಯೋ ಆರ್. ಪಿಂಟೋ, ಮನೋಹರ್ ಎಸ್. ಕದಂ, ಮಿಥುನ ನಾಯಕ, ಪಿ.ಯು. ಹೆಗಡೆ, ಎಚ್.ವೈ. ಮೆರವಾಡೆ, ಆರ್.ಪಿ. ನಾಯ್ಕ, ರಾಹುಲ್ ಬಾವಾಜಿ , ರತ್ನಾ ಶೆಟ್ಟಿ ಇದ್ದರು.