ವಾಯುಮಾಲಿನ್ಯ ಸೂಚ್ಯಂಕ: ಕಂಪನಿಗಳ ದೂರಾಲೋಚನೆ..!

KannadaprabhaNewsNetwork | Published : May 23, 2025 12:32 AM
Air Pollution Index: Companies' foresight..!
Follow Us

- ಕಡೇಚೂರಿನಲ್ಲಿ ಕೆಮಿಕಲ್‌ ಫ್ಯಾಕ್ಟರಿಗಳಿಂದ ವಿಷಗಾಳಿ, ದುರ್ನಾತ । ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು: ಖಾಸಾಮಠಶ್ರೀ ಆತಂಕ

- ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಮಠ, ಗುರುಮಠಕಲ್ ಖಾಸಾಮಠ ಶ್ರೀ ವಿರೋಧ- ಕನ್ನಡಪ್ರಭ ಸರಣಿ ವರದಿ ಭಾಗ: 45

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕೆಮಿಕಲ್‌ ಕಂಪನಿಗಳ ಕುರಿತ ಜನವಿರೋಧ ವ್ಯಕ್ತವಾಗುತ್ತಿರುವ ಜೊತೆಗೆ, ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಭೇಟಿ, ಪರಿಶೀಲನೆ ಮುಂತಾದವುಗಳಿಂದಾಗಿ ಎಚ್ಚೆತ್ತಂತಿರುವ ಕಂಪನಿಗಳು ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವಂತೆ, ಉತ್ಪಾದನಾ ಕೆಲಸ ಕಾರ್ಯಗಳ ವೇಗಕ್ಕೆ ಕೊಂಚ ತಡೆ ನೀಡಿದ್ದಾರೆನ್ನಲಾಗಿದೆ.

ಯಾವಾಗಲೂ, ಬಹುತೇಕ "ಅನಾರೋಗ್ಯಕರ ವಾತಾವರಣ " ಎಂದೇ ವಾಯು ಗುಣಮಟ್ಟ ಸೂಚ್ಯಂಕ ತೋರಿಸುತ್ತಿದ್ದ ಈಗ, ಕಳೆದ ಕೆಲವು ಗಾಳಿ, ದುರ್ನಾತಕ್ಕೆ ಕಡಿವಾಣ ಬಿದ್ದಿದ್ದು, ಮಾಪನ 40 ಸೂಚ್ಯಂಕದ ಕೆಳಗಡೆ ಇತ್ತು. ಈವರೆಗೆ ಬಹುತೇಕ 100 ಸೂಚ್ಯಂಕದ ಮೇಲ್ಪಟ್ಟು, ಕೆಲವೊಮ್ಮೆ 80-90 ಕಂಡುಬರುತ್ತಿತ್ತು. ಇದು ಇದೇ ಮೊದಲ ಬಾರಿಗೆ ಅನ್ನುವಂತಿದೆ. ಇದು ಉತ್ತಮ ವಾತಾವರಣ ಎಂಬುದರ ಸಂಕೇತ. ಅಂದರೆ, ಪರಿಸರ ಇಲಾಖೆಯವರು ಈ ವೇಳೆಯಲ್ಲಿ ಅಲ್ಲಿನ ಮಾಲಿನ್ಯ ಪರಿಸರಕ್ಕೆ ಮುಂದಾಗಿರುವುದರಿಂದ ಅಪಾಯಕಾರಿ ಸೂಚ್ಯಂಕ ಬರಬಾರದು ಎಂಬ ಕಾರಣಕ್ಕೆ ಹೀಗೆ ಉತ್ಪಾದನೆ ನಿಯಂತ್ರಿಸಿ, ಉತ್ತಮ ಹವಾಮಾನದ ಸೂಚ್ಯಂಕ ವ್ಯಕ್ತವಾಗುತ್ತದೆ. ಭೇಟಿ, ಪರಿಶೀಲನೆ ನಂತರ ತಮ್ಮ ವಿರುದ್ಧ ಯಾವುದೇ ವರದಿಗಳು ಬಾರದಿದ್ದಾಗ, ಮತ್ತೆ ಎಂದಿನಂತೆ ಶುರು ಮಾಡಬಹುದು ಎಂಬ ಲೆಕ್ಕಾಚಾರ ಇರಬಹುದು ಎನ್ನಲಾಗುತ್ತಿದೆ.

ಸಂಜೆ, ರಾತ್ರಿ ಹಾಗೂ ನಸುಕಿನ ಜಾವದಲ್ಲಿ ಭಾರೀ ಪ್ರಮಾಣದ ದುರ್ನಾತ, ವಿಷಗಾಳಿಯ ಆತಂಕ ಅದ್ಯಾಕೋ ಗೊತ್ತಿಲ್ಲ ಇದೀಗ ಕಮ್ಮಿಯಾಗಿದೆ. ಪರಿಸರ ಮಾಲಿನ್ಯ ಮಾಪನ ವಾಹನ ಎಲ್ಲ ಕಡೆ ತಿರುಗಾಡುತ್ತಿತ್ತು. ಕೆಲ ದಿನಗಳ ಹಿಂದೆ, ಜಿಲ್ಲಾಧಿಕಾರಿ ಸೂಚಿಸಿದ, ಸಹಾಯಕ ಆಯುಕ್ತರ ನೇತೃತ್ವದ ಸಮಿತಿ ಬಂದಾಗಲೂ ದುರ್ನಾತಕ್ಕೆ ಕಡಿವಾಣ ಬಿದ್ದಿತ್ತು ಎಂದೆನ್ನುವ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಭೀಮಣ್ಣ ವಡವಟ್‌, ತಪಾಸಣೆಗೆಂದು ಅಧಿಕಾರಿಗಳು ಮೊದಲೇ ಡಂಗೂರ ಸಾರಿ ಬಂದರೆ ಕಂಪನಿಗಳು ಜಾಣ್ಮೆ ಮೆರೆಯುವುದಿಲ್ಲವೇ ಅಂತ ಪ್ರಶ್ನಿಸುತ್ತಾರೆ.

===ಬಾಕ್ಸ್‌====

-ಪ್ರಜ್ಞಾವಂತ ಸಮುದಾಯ ಎಚ್ಚೆತ್ತುಕೊಳ್ಳಲಿ: ಖಾಸಾಮಠಶ್ರೀ

ಕಡೇಚೂರಿನಲ್ಲಿ ಕೆಮಿಕಲ್‌ ಫ್ಯಾಕ್ಟರಿಗಳಿಂದ ವಿಷಗಾಳಿ, ದುರ್ನಾತದಿಂದಾಗಿ, ಈ ಭಾಗದ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಮಠಗಳಲ್ಲೊಂದಾದ ಗುರುಮಠಕಲ್‌ ಖಾಸಾಮಠದ ಶ್ರೀಶಾಂತವೀರ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.

ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕೈಗಾರಿಕೆಗಳು ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಇತರ ಕೈಗಾರಿಕೆಗಳು ಕಾನೂನು ಬಹಿರವಾಗಿ ಪರಿಸರಕ್ಕೆ ಹಾನಿಯಾಗು ವಿಷ ಅನಿಲವನ್ನು ಹೊರ ಹಾಕುತ್ತಿರುವುದು ಹಾಗೂ ಇತರ ಐದು ರಾಜ್ಯಗಳಿಂದ ಬರುತಿರುವ ರಾಸಾಯಾನಿಕ ಕೈಗಾರಿಕೆಗಳ ತ್ಯಾಜ್ಯವನ್ನು ಈ ಪ್ರದೇಶದಲ್ಲಿ ಶೇಖರಿಸುತ್ತಿರುವುದರ ಪರಿಣಾಮದಿಂದ ಸೈದಾಪುರ ವಲಯದ ಸುಮಾರು 10 ರಿಂದ 12 ಗ್ರಾಮಗಳ ಜನರ ಮೇಲೆ ಆರೋಗ್ಯ ಸಮಸ್ಯೆಯುಂಟಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಇದರ ವಿರುದ್ಧ ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆಯಾಗಿಲ್ಲ. ಈ ಸಮಸ್ಯೆ ಕೇವಲ ಅಲ್ಲಿನ ಗ್ರಾಮಗಳಿಗೆ ಸಿಮೀತವಿಲ್ಲ. ಈ ಜಿಲ್ಲೆಯ ಮತ್ತು ಕಲ್ಯಾಣ ನಾಡಿನ ಸಮಸ್ಯೆಯಾಗಿದೆ. ಕಾರಣ ಕೇವಲ 10 ರಿಂದ 15 ಕಂಪನಿಗಳು ಈ ಪ್ರದೇಶದಲ್ಲಿ ಕಾರ್ಯ ಪ್ರಾರಂಭಿಸಿದ್ದು ಈ ದುರ್ವಾಸನೆ ಗ್ರಾಮಗಳಿಗೆ ಬರುತ್ತಿದ್ದು, ಮುಂದೆ ಇನ್ನೂ ನೂರಾರು ಕಂಪನಿಗಳು ಪ್ರಾರಂಭವಾದರೆ ಈ ದುರ್ವಾಸನೆ ನಮ್ಮ ಜಿಲ್ಲೆಯ ಕೇಂದ್ರಕ್ಕೆ ತೊಂದರೆಯಾಗುವ ಮುನ್ಸೂಚನೆ ಬಗ್ಗೆ ಪರಿಸರವಾದಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಈ ಹೋರಾಟದಲ್ಲಿ ಇಲ್ಲಿನ ಮಠಾಧೀಶರು ಸೇರಿದಂತೆ ಪ್ರಜ್ಞಾವಂತ ಸಮುದಾಯ ಧ್ವನಿ ಎತ್ತುವುದು ಅವಶ್ಯಕವಾಗಿದೆ. ಇದನ್ನು ಸರ್ಕಾರದ ಮಟ್ಟದಲ್ಲಿ ಕೊಂಡೊಯ್ಯುವ ಕಾರ್ಯವನ್ನು ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕು. ನಾವು ಕೂಡ ಪ್ರತಿ ಗ್ರಾಮಗಳಿಗೆ ತೆರಳಿ ಅದರ ಪರಿಣಾಮಗಳನ್ನು ಜನರಿಂದ ಆಲಿಸುವ ಕಾರ್ಯಕ್ಕೆ ಅತಿ ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂಬ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

-

ಕೋಟ್‌-1 : ಈ ಭಾಗದ ಮಠಾಧೀಶರು ಸೇರಿದಂತೆ ಪ್ರಜ್ಞಾವಂತ ಸಮುದಾಯ ವಿಷಾನಿಲ - ದುರ್ನಾತ ಹೊರಸೂಸುವ ಕೆಮಿಕಲ್‌ ಕಂಪನಿಗಳ ಧ್ವನಿ ಎತ್ತುವುದು ಅವಶ್ಯಕವಾಗಿದೆ. ಇದನ್ನು ಸರಕಾರದ ಮಟ್ಟದಲ್ಲಿ ಕೊಂಡೊಯ್ಯುವ ಕಾರ್ಯವನ್ನು ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕು. ನಾವು ಕೂಡ ಪ್ರತಿ ಗ್ರಾಮಗಳಿಗೆ ತೆರಳಿ ಅದರ ಪರಿಣಾಮಗಳನ್ನು ಜನರಿಂದ ಆಲಿಸುವ ಕಾರ್ಯಕ್ಕೆ ಅತಿ ಶೀಘ್ರದಲ್ಲಿ ಪ್ರಾರಂಭಿಸಬೇಕು : ಶ್ರೀ ಶಾಂತವೀರ ಮುರುಘ ರಾಜೇಂದ್ರ ಮಹಾಸ್ವಾಮಿಗಳು. (22ವೈಡಿಆರ್10)

-

ಕೋಟ್‌-2 : ತಪಾಸಣೆಗೆಂದು ಅಧಿಕಾರಿಗಳು ಮೊದಲೇ ಡಂಗೂರ ಸಾರಿ ಬಂದರೆ ಕಂಪನಿಗಳು ಜಾಣ್ಮೆ ಮೆರೆಯುವುದಿಲ್ಲವೇ. ಸಮಿತಿ ವರದಿ ನೀಡುವಾಗ ಎಲ್ಲವೂ ಸರಿಯಿದೆ ಎಂಬ ವಾತಾವರಣ ಸೃಷ್ಟಿಸಲು ಇದು ಕಂಪನಿಗಳ ಹೂಡಿರುವ ಸಂಚು. ಈಗ ಆರಂಭಗೊಂಡಿರುವ ಚಳವಳಿಗೆ ಒಂದು ಸುಖಾಂತ್ಯ ಬರಬೇಕೆಂದರೆ ಜನರು ಪಟ್ಟುಬಿಡದೆ ಇಂತಹಗಳ ವಿರುದ್ಧ ಹೋರಾಟ ಚುರುಕುಗೊಳಿಸಿದಾಗ ಮಾತ್ರ. ಮರೆತರೆ, ಮತ್ತೇ ವಿಷಗಾಳಿ ದುರ್ನಾತ ಶುರುವಾಗುತ್ತದೆ. : ಭೀಮಣ್ಣ ವಡವಟ್‌, ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರ, ಸೈದಾಪುರ. (22ವೈಡಿಆರ್‌11)

-

ಕೋಟ್‌-3 : ಈ ಭಾಗದಲ್ಲಿ ಉತ್ತಮ ಮತ್ತು ಉನ್ನತ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ನಮ್ಮ ಭಾಗ ಅಭಿವೃದ್ಧಿಯಾಗುತ್ತದೆ, ಇಲ್ಲಿನ ನಿರೋದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುತ್ತದೆ, ಇಲ್ಲಿನ ಜನ ಗುಳೆ ಹೋಗುವುದನ್ನು ಬಿಟ್ಟು ಇಲ್ಲೇ ದುಡಿದು ತಂದೆ-ತಾಯಿಯನ್ನು ನೋಡಿಕೊಂಡು ಜೀವನ ಸಾಗಿಸುತ್ತಾರೆ ಎಂದು ಕನಸು ಕಂಡಿದ್ದೆವು. ಆದರೆ, ಎಲ್ಲವೂ ಹಗಲುಗನಸು ಕಂಡಂತಾಗಿದೆ. ಉದ್ಯೋಗ ನೀಡದಿದ್ದರೂ ಪರವಾಗಿಲ್ಲ, ಜನರಿಗೆ ವಿಷ ಕಂಪನಿಗಳನ್ನು ಬಂದ್ ಮಾಡಿ. : ಕಮಲಾ ಎಂ. ಕುಲಕರ್ಣಿ, ಸೈದಾಪುರ. (22ವೈಡಿಆರ್‌12)

-

22ವೈಡಿಆರ್‌14 : ಬುಧವಾರ ಸಂಜೆ 8. 30 ರ ಸುಮಾರಿಗೆ ವಾಯಮಾಪನ ಗುಣಮಟ್ಟ ಉತ್ತಮ ಎಂದು ತೋರಿಸುತ್ತಿರುವ ಸೂಚ್ಯಂಕ.