ಜಿಲ್ಲೆಯಲ್ಲಿ ಶೀಘ್ರ ವಂದೇ ಭಾರತ ರೈಲು ಸಂಚಾರ

KannadaprabhaNewsNetwork |  
Published : May 23, 2025, 12:30 AM IST
 22ಬಿಕೆಟಿ3, (1)  | Kannada Prabha

ಸಾರಾಂಶ

ಅಮೃತ ಭಾರತ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಮತ್ತು ಇತರೆ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದ 12 ಜಿಲ್ಲೆಗಳಲ್ಲಿ ಈಗಾಗಲೇ ವಂದೇ ಭಾರತ ರೈಲು ಸಂಚರಿಸುತ್ತಿದೆ. ಶೀಘ್ರದಲ್ಲಿ ಬಾಗಲಕೋಟೆಯಲ್ಲೂ ಕೂಡಾ ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಮತ್ತು ಇತರೆ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೈಲ್ವೆ ಇಲಾಖೆಯಲ್ಲಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ಮುಂದಿನ ಜನಾಂಗ ಭವಿಷ್ಯ ರೂಪಿಸಲು ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರ ರೈಲ್ವೆ ಇಲಾಖೆಯ ಮಹತ್ತರವಾದ ಕಾರ್ಯಗಳನ್ನು ದೇಶವಾಸಿಗಳು ಗಮನಿಸುತ್ತಿದ್ದಾರೆ ಎಂದರು. ಇಡೀ ರಾಷ್ಟ್ರದಲ್ಲಿ 4,44,000 ಕಿ.ಮೀಗಳಿಗೆ ₹7.50 ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ಕೈಗೆತ್ತಿಗೊಳ್ಳಲಾಗಿದೆ. ಈ ಯೋಜನೆಯಡಿ ರಾಜ್ಯದಲ್ಲಿ ₹43 ಸಾವಿರ ಕೋಟಿ ಕಾರ್ಯ ನಡೆಯುತ್ತಿದೆ. ಅದರಲ್ಲಿ 11 ಯೋಜನೆ ತ್ವರಿತವಾಗಿ ಮುಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಈ 11 ಯೋಜನೆಗಳಲ್ಲಿ ಬಾಗಲಕೋಟೆ-ಕುಡಚಿ, ಗದಗ-ಹುಟಗಿ, ಗದಗ-ವಾಡಿ, ರಾಯಚೂರು-ಗಿಣಿಗೇರಾ ಒಳಗೊಂಡ ಕಾಮಗಾರಿಗಳನ್ನು ₹33 ಸಾವಿರ ಕೋಟಿಗಳಲ್ಲಿ ಹಂತ-ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಇಂದು ದೇಶದಾದ್ಯಂತ 103 ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣ ಯೋಜನೆಯಡಿ ₹15,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮೋದಿಯವರು ಲೋಕಾರ್ಪಣೆಗೊಳಿಸಿದ್ದಾರೆ. ಅದರಲ್ಲಿ ರಾಜ್ಯದ ಬಾಗಲಕೋಟೆ, ಮುನಿರಾಬಾದ್, ಗದಗ, ಧಾರವಾಡ ಹಾಗೂ ಗೋಕಾಕ ಸೇರಿದೆ. ಈ ಭಾಗದ 13ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿಗೆ ₹300 ಕೋಟಿ ವೆಚ್ಚದಲ್ಲಿ ಆಧುನೀಕರಣ ಗೊಳಿಸಲಾಗುತ್ತಿದೆ. ಗದಗ-ವಾಡಿ, ಕುಡಚಿ-ಬಾಗಲಕೋಟೆ ಸೇರಿದಂತೆ ಇನ್ನು ಅನೇಕ ಯೋಜನೆಗಳನ್ನು ಕೈಗೆತ್ತಿಗೊಳ್ಳಲಾಗಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಬಾಗಲಕೋಟೆ-ಕುಡಚಿ ಮಾರ್ಗ ತೀವ್ರಗತಿಯಲ್ಲಿ ಪ್ರಗತಿ ನಡೆದಿದೆ. ಇದರಿಂದ ಬಾಗಲಕೋಟೆಯ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದು, ಇಲ್ಲಿಯ ಉತ್ಪನ್ನಗಳಾದ ಸಕ್ಕರೆ ಸಿಮೆಂಟ್, ಇಳಕಲ್ಲ ಸೀರೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಬಾಗಲಕೋಟೆ ನಗರ ಆಗಾಧವಾಗಿ ಬೆಳೆಯುತ್ತಿದೆ. ಇಲ್ಲಿಯ ಕಾರ್ಮಿಕರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಗುಜರಾತ ಮತ್ತು ರಾಜ್ಯಸ್ಥಾನಕ್ಕೆ ತೆರಳುತ್ತಿದ್ದು, ಅವರಿಗೆ ರೈಲು ಸೇವೆ ಒದಗಿಸಬೇಕು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಜನಶತಾಬ್ದಿ ಎಕ್ಸಪ್ರೇಸ್ ಸೇವೆ, ಗೋಲಗುಂಬಜ್‌ ಎಕ್ಸಪ್ರೇಸ್‌ನಲ್ಲಿ 1 ಟೈಯರ್ ಎಸಿ, 2 ಟೈಯರ್‌ ಎಸಿ ಕೋಚ್‌ಗಳು ಒಟ್ಟಿಗೆ ಇರುತ್ತಿದ್ದು, ಅವುಗಳನ್ನು ಪ್ರತ್ಯೇಕ ಮಾಡುವಂತೆ ಮನವಿ ಮಾಡಿದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ರೈಲ್ವೆ ಇಲಾಖೆ ಇತ್ತೀಚಿನ ದಿನಗಳಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಮೊದಲು ರೈಲ್ವೆ ನಿಲ್ದಾಣಕ್ಕೆ ಬಂದಾಗ ಗಬ್ಬು ವಾಸನೆ ಸ್ವಾಗತಿಸುತ್ತಿದ್ದು, ಇಂದು ಪ್ರಧಾನಮಂತ್ರಿಗಳ ಮುತುರ್ವಜಿಯಿಂದಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಭಾಗದ ಪ್ರಮುಖ ಯೋಜನೆಯಾದ ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ಪೂರ್ಣಗೊಳಿಸಲು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಉಪಾಧ್ಯಕ್ಷೆ ಶೋಭಾ ದಾಸ್, ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯವಸ್ಥಾಪಕಿ ಬೆಲಾ ಮೀನಾ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ರೈಲ್ವೆ ನಿಲ್ದಾಣದ ಎಸ್ಆರ್ ಅರವಿಂದ ಹೆರ್ಲೇ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ