ಕನ್ನಡಪ್ರಭ ವಾರ್ತೆ ಸೊರಬ
ಪೌರಾಣಿಕ ಕಥೆಗಳು ಕೇವಲ ದೃಶ್ಯಕಾವ್ಯಗಳಲ್ಲ. ಅವು ಮನುಷ್ಯ ಜೀವನದ ಹಾದಿ ತಪ್ಪದಂತೆ ನೋಡಿಕೊಳ್ಳುವ ನೈತಿಕ ದಾರಿದೀಪಗಳು. ಇಂದಿನ ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಮೌಲ್ಯಗಳನ್ನು ಮರುಸ್ಥಾಪಿಸಿ, ಮುಂದಿನ ಪೀಳಿಗೆಗೆ ಸಂಸ್ಕಾರದ ಬೀಜ ಬಿತ್ತಲು ಪೌರಾಣಿಕ ಹಿನ್ನೆಲೆಯ ಕಲೆಗಳೇ ಶ್ರೇಷ್ಠ ಮಾಧ್ಯಮ ಎಂದು ಶಿಕ್ಷಕಿ ಗಿರಿಜಾ ವಾಸುದೇವ್ ಅಭಿಪ್ರಾಯಪಟ್ಟರು.ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಿ ವಾರ್ಷಿಕ ಸಮಾರಾಧನೆಯ ಅಂಗವಾಗಿ ಆಯೋಜಿಸಿದ್ದ ಅಹಿರಾವಣ-ಮಹಿರಾವಣ (ರಾಮ-ರಾವಣ ಯುದ್ಧ) ಪೌರಾಣಿಕ ಬಯಲಾಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ತಾಂತ್ರಿಕ ಯುಗದ ಅಬ್ಬರದಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮೊಬೈಲ್ ಮತ್ತು ಡಿಜಿಟಲ್ ಲೋಕದಲ್ಲಿ ಮುಳುಗಿರುವ ಯುವಪೀಳಿಗೆಗೆ ಜೀವನದ ನೈತಿಕತೆಗಳು ಮರೆಯಾಗುತ್ತಿವೆ. ಮನೆಮನೆಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ರಾಮಾಯಣದಂತಹ ಜಗಳಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಅಸ್ಥಿರ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ತಾಳ್ಮೆ, ಸತ್ಯ ಮತ್ತು ಧರ್ಮದ ಸಂಸ್ಕಾರವನ್ನು ಬಿತ್ತುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಗ್ರಾಮೀಣ ಭಾಗದಲ್ಲಿರುವ ಒಗ್ಗಟ್ಟು ಇಂತಹ ಸಾಂಸ್ಕೃತಿಕ ಪರಂಪರೆಯನ್ನು ಯುವಪೀಳಿಗೆಯವರೆಗೆ ಕೊಂಡೊಯ್ಯಲು ಪ್ರೇರಣೆಯಾಗಿದೆ. ಇದು ಹೆಮ್ಮೆಯ ವಿಷಯ. ಕಲೆ ನಮ್ಮ ಅಸ್ಮಿತೆಯಾಗಿದ್ದು, ಇಂತಹ ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹ ನೀಡಿದಾಗ ಮಾತ್ರ ನಮ್ಮ ಸಂಸ್ಕೃತಿ ಜೀವಂತವಾಗಿರಲು ಸಾಧ್ಯ ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಷಣ್ಮುಖಪ್ಪ ಚನ್ನಪಟ್ಟಣ ಮಾತನಾಡಿ, ಮಕ್ಕಳಿಗೆ ಕೇವಲ ಪದವಿಗಳಷ್ಟೇ ಸಾಲದು, ಪೋಷಕರ ಮೇಲಿನ ಪ್ರೀತಿ ಮತ್ತು ಕೌಟುಂಬಿಕ ಬಾಂಧವ್ಯವನ್ನು ಉಳಿಸಿಕೊಳ್ಳುವ ಸಂಸ್ಕಾರವನ್ನು ಕಲಿಸುವುದು ಇಂದಿನ ಪೋಷಕರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಗಳಿಸಿದರೂ ತಾಯಿ-ತಂದೆಯನ್ನು ಮರೆಯದ ಸಂಸ್ಕೃತಿಯನ್ನು ಬೆಳೆಸುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬ ಬಯಲಾಟ ಮಂಡಳಿಯ ವತಿಯಿಂದ ಗ್ರಾಮದ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಬಯಲಾಟದ ಭಾಗವತ ಪ್ರಕಾಶ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಬಯಲಾಟವು ಅದ್ಭುತವಾಗಿ ಮೂಡಿಬಂತು. ಗ್ರಾಮದ ಯುವಕರು, ಮಹಿಳೆಯರು ಮತ್ತು ಮಕ್ಕಳು ಬಯಲಾಟದಲ್ಲಿ ಪಾಲ್ಗೊಂಡು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯಿತು.
ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಧನಂಜಯ್ ಡಿ. ನಾಯ್ಕ, ಈಶ್ವರಪ್ಪ ಚನ್ನಪಟ್ಟಣ, ಪ್ರಾಂಶುಪಾಲ ಡಾ. ವಿಶ್ವನಾಥ್ ಕಾನಡೆ, ಉಪನ್ಯಾಸಕ ರಾಜಶೇಖರ್ ಆರ್. ನಾಯ್ಕ, ಮಹಾಬಲೇಶ್ವರ ನಾಯ್ಕ, ಹನುಮಂತಪ್ಪ ಕಾನಡೆ, ತಿಮ್ಮಪ್ಪ ಎನ್. ನಾಯ್ಕ, ಮಂಜಪ್ಪ, ವೆಂಕಟೇಶಪ್ಪ, ಬಸವರಾಜ್ ನ್ಯಾಯಬೆಲೆ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಪ್ರಶಾಂತ್ ನಾಯ್ಕ ನಡೆಸಿಕೊಟ್ಟರು.