ಹಿರೇಬಗನಾಳ ವ್ಯಾಪ್ತಿಯಲ್ಲಿ ಗಾಳಿ ಗುಣಮಟ್ಟ ಪರೀಕ್ಷೆ

KannadaprabhaNewsNetwork |  
Published : Feb 28, 2026, 02:30 AM IST
ರಾತ್ರಿಯ ವೇಳೆಯಲ್ಲಿ ಗಾಳಿಯ ಗುಣಮಟ್ಟ ಪರಿಶೀಲಿಸುತ್ತಿರುವ ಉಪಕರಣವುಳ್ಳ ವಾಹನ. | Kannada Prabha

ಸಾರಾಂಶ

ಪರಿಸರ ನಿಯಂತ್ರಣ ಇಲಾಖೆ ಕೊಪ್ಪಳ ತಾಲೂಕಿನ ಹಿರೇಬಗನಾಳ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗಾಳಿ ಗುಣಮಟ್ಟ ಪರಿಶೀಲನೆ ಪ್ರಾರಂಭಿಸಿದೆ. ಗುರುವಾರ ರಾತ್ರಿಯಿಂದಲೇ ಗಾಳಿಯ ಗುಣಮಟ್ಟ ಪರೀಕ್ಷೆ ಮಾಡುವ ಉಪಕರಣ ಸುತ್ತಾಡಿಸಲಾಗುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕಾರ್ಖಾನೆ ತ್ಯಾಜ್ಯದಿಂದ ಹಾಳಾಗಿರುವ ಪರಿಸರದಿಂದ ರೋಸಿ ಹೋಗಿರುವ ಜನರು ಆಕ್ರೋಶಗೊಂಡು ಪ್ರತಿಭಟನೆ ಮಾಡಿದ್ದರಿಂದ ಎಚ್ಚೆತ್ತ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಕೊಪ್ಪಳ ತಾಲೂಕಿನ ಹಿರೇಬಗನಾಳ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗಾಳಿ ಗುಣಮಟ್ಟ ಪರಿಶೀಲನೆ ಪ್ರಾರಂಭಿಸಿದೆ.

ಆದರೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಉಪಕರಣದ ಮೂಲಕ ಗುಣಮಟ್ಟ ಪರೀಕ್ಷೆ ಆರಂಭಿಸುತ್ತಿದ್ದಂತೆ ಕಾರ್ಖಾನೆಗಳು ತ್ಯಾಜ್ಯ ಹೊರಸೂಸುವುದನ್ನು ನಿಲ್ಲಿಸಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊಪ್ಪಳದಲ್ಲಿ ನಡೆದ ಬೃಹತ್ ಪ್ರತಿಭಟನೆ ಮತ್ತು ಜನಾಕ್ರೋಶದಿಂದ ಕೊನೆಗೂ ಜಿಲ್ಲಾಡಳಿತ ಮತ್ತು ಪರಿಸರ ನಿಯಂತ್ರಣ ಇಲಾಖೆ ಎಚ್ಚೆತ್ತಿದೆ.

ಗುರುವಾರ ರಾತ್ರಿಯಿಂದಲೇ ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗಾಳಿಯ ಗುಣಮಟ್ಟ ಪರೀಕ್ಷೆ ಮಾಡುವ ಉಪಕರಣ ಸುತ್ತಾಡಿಸಲಾಗುತ್ತಿದೆ.

ಹೋರಾಟಕ್ಕೆ ಮಣಿದ ಆಡಳಿತ: ಕಾರ್ಖಾನೆಯಿಂದ ಹೊರಸೂಸುವ ಹೊಗೆ ಮತ್ತು ಕಪ್ಪುಬೂದಿಯಿಂದ ಗಾಳಿ ಮತ್ತು ಪರಿಸರದಲ್ಲಿ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಪರೀಕ್ಷೆ ಮಾಡಿ ಎಂದು ರೈತರು, ಗ್ರಾಮಸ್ಥರು ಮತ್ತು ವಿವಿಧ ಸಂಘಟನೆ ಮುಖಂಡರು ಮನವಿ ಮಾಡಿದರೂ ಪರಿಸರ ನಿಯಂತ್ರಣ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಕಾರ್ಖಾನೆಯೊಂದಿಗೆ ಶಾಮೀಲಾಗಿ, ಅವರಿಗೆ ಬೇಕಾದಂತೆ ವರದಿ ನೀಡಿದೆ ಎಂದು ಹೋರಾಟಗಾರ ಡಿ.ಎಚ್. ಪೂಜಾರ ಆರೋಪಿಸಿದ್ದಾರೆ.

ಈಗ ಜನಶಕ್ತಿ ರೊಚ್ಚಿಗೆದ್ದಿದ್ದರಿಂದ ಕೊನೆಗೂ ತಪಾಸಣೆಗೆ ಮುಂದಾಗಿದೆ. ಆದರೆ, ಇದರಲ್ಲೂ ಮೋಸ ನಡೆದಿದ್ದು, ಗ್ರಾಮಸ್ಥರು ನೀಡುವ ಮಾಹಿತಿಯ ಪ್ರಕಾರ, ಗಾಳಿಯ ಗುಣಮಟ್ಟ ಪರೀಕ್ಷೆಯ ಉಪಕರಣ ನಮ್ಮೂರಿಗೆ ಬಂದಾಗ ಕಾರ್ಖಾನೆಗಳು ಹೊಗೆ ಬಿಡುವುದನ್ನೇ ಬಂದ್ ಮಾಡಿವೆ. ಅವರಿಗೆ ಮಾಹಿತಿ ನೀಡಿಯೇ ವಾಹನ ನಮ್ಮೂರಿಗೆ ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ, ವಾಹನ ಕೇವಲ 24 ಗಂಟೆಗಳ ಕಾಲ ಪರಿಶೀಲನೆ ಮಾಡಿದರೆ ಸಾಲದು, ವಾರಗಟ್ಟಲೇ ಇಲ್ಲಿಯೇ ಇರಲಿ ಎಂದು ಆಗ್ರಹಿಸಿದ್ದಾರೆ.

ನಿರಂತರ ಗಾಳಿಯ ಗುಣಮಟ್ಟ ಪರೀಕ್ಷೆ ಮಾಡುವ ಉಪಕರಣ ಗಾಳಿಯಲ್ಲಿನ ಧೂಳಿನ ಕಣಗಳು ಮತ್ತು ವಿಷಪೂರಿತ ಅಂಶಗಳನ್ನು ಪತ್ತೆ ಮಾಡುತ್ತದೆ. ಇದರ ವರದಿಯನ್ನಾಧರಿಸಿ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಕ್ರಮವಹಿಸಲು ಮುಂದಾಗಿದೆ. ಆದರೆ, ಇದರಲ್ಲಿಯೂ ವಿಶ್ವಾಸಾರ್ಹತೆ ಇಲ್ಲದಂತೆ ಆಗಿರುವುದು ನೋವಿನ ಸಂಗತಿ ಎನ್ನುತ್ತಾರೆ ಗ್ರಾಮಸ್ಥರು.

ಹೀಗಾಗಿ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ಬಿಟ್ಟು ಸ್ವತಂತ್ರ ಸಂಸ್ಥೆಯಿಂದ ಅಧ್ಯಯನ ಮಾಡಿಸಬೇಕು. ಇದಕ್ಕಿಂತ ಮಿಗಿಲಾಗಿ ಬಾಧಿತ ಗ್ರಾಮಗಳ ಜನರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಾಮಾಣಿಕವಾಗಿ ನಡೆಯಲಿ: ಜನರು ಹೋರಾಟವನ್ನು ತೀವ್ರಗೊಳಿಸಿದರೆ ಆಡಳಿತ ಮಣಿಯುತ್ತದೆ ಎನ್ನುವುದಕ್ಕೆ ಕೊನೆಗೂ ತಪಾಸಣೆಗೆ ಮುಂದಾಗಿರುವುದೇ ಸಾಕ್ಷಿಯಾಗಿದೆ. ಆದರೆ, ಇದನ್ನಾದರೂ ಪ್ರಾಮಾಣಿಕತೆಯಿಂದ ಮಾಡಬೇಕು. ಈ ಬಗ್ಗೆಯೂ ಅನುಮಾನಗಳಿರುವುದು ನೋವಿನ ಸಂಗತಿ ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಷ್ಟಪಟ್ಟು ದುಡಿದರೂ ರೈತರಿಗೆ ತಪ್ಪದ ಸಂಕಷ್ಟ: ಯು. ಬಸವರಾಜ
ಅಘನಾಶಿನಿ ವೇದಾವತಿ ಜೋಡಣೆ ವಿರುದ್ಧ ನಿರಂತರ ಹೋರಾಟ