ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ `ವಿಮಾನ ಪ್ರಯಾಣ ಭಾಗ್ಯ

KannadaprabhaNewsNetwork | Published : May 18, 2025 11:49 PM
ಈ ಭೂಮಿ ಮೇಲೆ ದುಡಿಯುವವರಿಂದ ದುಡಿಸಿಕೊಳ್ಳುವ ಬಹಳಷ್ಟು ಮಂದಿಗೆ ದುಡಿಯುವವರ ನೋವು, ನಲಿವುಗಳು ಅರ್ಥವಾಗುವುದೇ ಇಲ್ಲ. ಅವರು ಸಾಯುವವರಿಗೂ ದುಡಿಯುತ್ತಿರಬೇಕು.
Follow Us

ಕನ್ನಡಪ್ರಭ ವಾರ್ತೆ ಭದ್ರಾವತಿ

ಈ ಭೂಮಿ ಮೇಲೆ ದುಡಿಯುವವರಿಂದ ದುಡಿಸಿಕೊಳ್ಳುವ ಬಹಳಷ್ಟು ಮಂದಿಗೆ ದುಡಿಯುವವರ ನೋವು, ನಲಿವುಗಳು ಅರ್ಥವಾಗುವುದೇ ಇಲ್ಲ. ಅವರು ಸಾಯುವವರಿಗೂ ದುಡಿಯುತ್ತಿರಬೇಕು. ನಾವು ದುಡಿಸಿಕೊಳ್ಳುತ್ತಿರಬೇಕು ಎಂಬ ಮನೋಭಾವನೆಯೇ ಹೆಚ್ಚು. ಇಂತಹ ದುಡಿಸಿಕೊಳ್ಳುವ ಜನರ ನಡುವೆ ದುಡಿಯುವವರು ನಮ್ಮ ಕುಟುಂಬದವರಂತೆ, ಅವರ ನೋವು, ನಲಿವುಗಳು ನಮ್ಮ ನೋವು, ನಲಿವುಗಳು, ಅವರನ್ನು ಪ್ರೀತಿಸಬೇಕು, ಗೌರವಿಸಬೇಕು ಎಂಬ ಭಾವನೆ ಹೊಂದಿರುವವರು ವಿರಳ. ಇಂತಹ ವಿರಳ ವ್ಯಕ್ತಿಗಳಲ್ಲಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ನಿವಾಸಿ, ಪ್ರಗತಿಪರ ರೈತ, ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್‌ರವರು ಸಹ ಒಬ್ಬರಾಗಿದ್ದಾರೆ.

ಕೂಡ್ಲಿಗೆರೆ ಹಾಲೇಶ್‌ರವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ೧೦ ಜನ ಕೂಲಿ ಕಾರ್ಮಿಕರನ್ನು ತಮ್ಮ ಕುಟುಂಬದವರಂತೆ ನೋಡುವ ಜೊತೆಗೆ ಅವರ ನೋವು, ನಲಿವುಗಳಲ್ಲಿ ಸದಾ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಅವರು ತಮ್ಮ ಸ್ವಂತ ಖರ್ಚಿನಲ್ಲಿ ೧೦ ಜನ ಕೂಲಿ ಕಾರ್ಮಿಕರನ್ನು ಮೇ.೧೭ರ ಶನಿವಾರ ತಮ್ಮ ಜೊತೆಗೆ ಗೋವಾ ಪ್ರವಾಸಕ್ಕೆ ಕರೆದು ಕೊಂಡು ಹೋಗಿದ್ದಾರೆ. ಒಟ್ಟು ೩ ರಾತ್ರಿ, ೪ ಹಗಲು ಪ್ರವಾಸ ಇದಾಗಿದೆ. ವಿಮಾನ ಪ್ರಯಾಣ ಎಂದರೆ ಗಗನ ಕುಸುಮವಾಗಿದ್ದು, ಅದರಲ್ಲೂ ವಿಮಾನ ಪ್ರಯಾಣದ ಕಲ್ಪನೆಯನ್ನೂ ಮಾಡಿಕೊಳ್ಳದ ಕೂಲಿ ಕಾರ್ಮಿಕರಿಗೆ ವಿಮಾನ ಪ್ರಯಾಣ ಮಾಡಿಸುವ ಮೂಲಕ ದುಡಿಸಿಕೊಳ್ಳುವವರಿಗೆ ಮಾದರಿಯಾಗಿದ್ದಾರೆ.

ಪ್ರವಾಸೋದ್ಯಮಿ ಮ್ಯಾಂಗೋಲೀಪ್ ಹಾಲಿಡೇಸ್ ಮಂಜುನಾಥ್‌ರವರ ನೇತೃತ್ವದಲ್ಲಿ ಈ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಶಿವಮೊಗ್ಗ ವಿಮಾನದಿಂದ ಪ್ರಯಾಣ ಬೆಳೆಸಿರುವ ಕೂಡ್ಲಿಗೆರೆ ಹಾಲೇಶ್ ಮತ್ತು ಅವರ ಜಮೀನಿನ ೧೦ಜನ ಕೂಲಿ ಕಾರ್ಮಿಕರು ಗೋವಾದಲ್ಲಿ ಬೀಚುಗಳು, ಪ್ರವಾಸಿ ಕ್ಷೇತ್ರಗಳು, ದೇವಸ್ಥಾನ, ಚರ್ಚ್‌ಗಳನ್ನು ವೀಕ್ಷಿಸಲಿದ್ದಾರೆ. ಇವರು ಉಳಿದುಕೊಳ್ಳಲು ಉತ್ತಮ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಕೂಡ್ಲಿಗೆರೆ ಹಾಲೇಶ್‌, ವರ್ಷವಿಡೀ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ಆಸೆ, ಆಕಾಂಕ್ಷೆಗಳಿರುತ್ತವೆ. ಅವರ ದುಡಿಮೆ ಒತ್ತಡ ಕಡಿಮೆ ಮಾಡಿ, ಕೆಲವು ದಿನ ಮಾನಸಿಕ ನೆಮ್ಮದಿ ಕಂಡು ಕೊಳ್ಳುವ ಮೂಲಕ ಅವರ ಕಾರ್ಯ ಕ್ಷಮತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ ಅವರಿಗೆ ಹೊರಗಿನ ಪರಿಸರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕೂಡ್ಲಿಗೆರೆ ಹಾಲೇಶ್‌ರವರು ಕೂಡ್ಲಿಗೆರೆ ಭಾಗದಲ್ಲಿ ಮಾತ್ರವಲ್ಲದೆ ತಾಲೂಕಿನಾದ್ಯಂತ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದು, ರಾಜಕೀಯವಾಗಿ, ಧಾರ್ಮಿಕವಾಗಿ ಮಾತ್ರವಲ್ಲದೆ ವಿವಿಧ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.