ವಿಮಾನ ನಿಲ್ದಾಣ ಆರಂಭ ಶೀಘ್ರ

KannadaprabhaNewsNetwork |  
Published : Nov 12, 2025, 03:15 AM IST

ಸಾರಾಂಶ

ತಾಲೂಕಿನ ಬುರಣಾಪುರ ಬಳಿಯಿರುವ ವಿಮಾನ ನಿಲ್ದಾಣದ ವೀಕ್ಷಣೆ ಮಾಡಿದ್ದೇನೆ. ಅಲ್ಲಿ ಶೇ.99 ರಷ್ಟು ಕಾಮಗಾರಿಗಳು ಪೂರ್ಣವಾಗಿವೆ. ಒಟ್ಟು 727ಎಕರೆ ಜಾಗದಲ್ಲಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ 3 ಹಂತದ ಕಾಮಗಾರಿಗಳನ್ನು ಮಾಡಲಾಗಿದ್ದು, ಈಗ ನೈಟ್ ಲ್ಯಾಂಡಿಂಗ್ ಕಾಮಗಾರಿ ಮಾತ್ರ ಪ್ರಗತಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ (ಕೆ.ಎಸ್.ಐ.ಐ.ಡಿ.ಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಾಲೂಕಿನ ಬುರಣಾಪುರ ಬಳಿಯಿರುವ ವಿಮಾನ ನಿಲ್ದಾಣದ ವೀಕ್ಷಣೆ ಮಾಡಿದ್ದೇನೆ. ಅಲ್ಲಿ ಶೇ.99 ರಷ್ಟು ಕಾಮಗಾರಿಗಳು ಪೂರ್ಣವಾಗಿವೆ. ಒಟ್ಟು 727ಎಕರೆ ಜಾಗದಲ್ಲಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ 3 ಹಂತದ ಕಾಮಗಾರಿಗಳನ್ನು ಮಾಡಲಾಗಿದ್ದು, ಈಗ ನೈಟ್ ಲ್ಯಾಂಡಿಂಗ್ ಕಾಮಗಾರಿ ಮಾತ್ರ ಪ್ರಗತಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ (ಕೆ.ಎಸ್.ಐ.ಐ.ಡಿ.ಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸರ ಇಲಾಖೆಯಿಂದ ಮೊದಲೇ ಅನುಮತಿ ಪಡೆದಿಲ್ಲವಾದ್ದರಿಂದ ಕೆಲವು ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದವು. ಅಲ್ಲಿ ಈಗಾಗಲೇ ವಾದ ಮುಗಿದಿದ್ದು, ನ್ಯಾಯಾಧೀಶರ ಆದೇಶ ಮಾತ್ರ ಬಾಕಿಯಿದೆ. ಈ ತಿಂಗಳ ಕೊನೆಗೆ ನ್ಯಾಯಮೂರ್ತಿಗಳು ನಿರ್ಣಯ ಕೊಡಬಹುದು ಎಂಬ ನಿರೀಕ್ಷೆಯಿದೆ. ಅವಶ್ಯಕತೆ ಇದ್ದರೇ ನಾವು ಸುಪ್ರೀಂ ಕೋರ್ಟ್ ವಕೀಲರನ್ನು ಭೇಟಿಯಾಗಲಿದ್ದೇವೆ ಎಂದರು.

ವಿಜಯಪುರದ ವಿಮಾನ ನಿಲ್ದಾಣ ಜನೋಪಯೋಗಿಯಾಗಲಿದೆ. ಇಲ್ಲಿ ಲಿಂಬೆ, ದ್ರಾಕ್ಷಿ, ದಾಳಿಂಬೆ ಸೇರಿದಂತೆ ಅನೇಕ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳು ಬೆಳೆಯುವುದರಿಂದ ಉತ್ಪನ್ನಗಳನ್ನು ಬೇರೆಡೆ ಎಕ್ಸಪೋರ್ಟ್ ಮಾಡಲು ಅನುಕೂಲವಾಗಲಿದೆ. ವಿಮಾನ ನಿಲ್ದಾಣದಲ್ಲಿ ವಿವಿಧ ಕಂಪನಿಗಳ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಅಗ್ನಿಶಾಮಕ ವಾಹನಗಳನ್ನು ತರಿಸಲಾಗಿದೆ ಎಂದರು.ರಾಯಚೂರಿನ ವಿಮಾನ ನಿಲ್ದಾಣದ ಕೆಲಸ ಶೇ.13ರಷ್ಟು ಆಗಿದೆ. ಕಾಮಗಾರಿ ವೇಗದಲ್ಲಿ ಮುಂದುವರೆದಿದೆ. ಹಾಸನದಲ್ಲಿ ವಿಮಾನ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ಮುಕ್ತಾಯವಾಗಲಿದೆ. ಚಿಕ್ಕಮಗಳೂರಿನಲ್ಲಿ ಭೂ ಸ್ವಾಧೀನ ಪಡೆಸಿಕೊಳ್ಳುವ ಕುರಿತು ಕಾರ್ಯ ನಡೆದಿದೆ. ನನಗೆ ಬಾಗಲಕೋಟೆಯಲ್ಲಿ ವಿಮಾನ ನಿಲ್ದಾಣ ಮಾಡುವ ಉದ್ದೇಶವಿದೆ. ಏಕೆಂದರೇ ಅಲ್ಲಿ 14 ಸಕ್ಕರೆ ಕಾರ್ಖಾನೆಗಳು, 4 ಮೆಡಿಕಲ್ ಕಾಲೇಜುಗಳಿವೆ. ಜೊತೆಗೆ ಅನೇಕ ಐತಿಹಾಸಿಕ ಪ್ರವಾಸಿ ತಾಣಗಳಿವೆ. ಹಾಗಾಗಿ ಅಲ್ಲೊಂದು ನಿಲ್ದಾಣ ಮಾಡುವ ವಿಚಾರವಿದೆ ಎಂದರು.ಕೆಬಿಜೆಎನ್ಎಲ್‌ನಿಂದ ಜಿಲ್ಲೆಯ ಆಲಮಟ್ಟಿಯಲ್ಲಿ ಐದಾರು ಎಕರೆ ಜಮೀನು ಪಡೆದು ಯಾತ್ರಿ ನಿವಾಸಗಳನ್ನು ಮಾಡಬೇಕು ಎಂದು ವಿಚಾರ ಮಾಡಲಾಗುತ್ತಿದೆ. ಪ್ರವಾಸಿ ತಾಣಗಳಾದ ಐಹೊಳೆ, ಪಟ್ಟದಕಲ್ಲು, ಬದಾಮಿಯಲ್ಲಿ ಈ ಮೂರು ಸ್ಥಳಗಳಲ್ಲೂ ಸಹ ಯಾತ್ರಿ ನಿವಾಸಗಳನ್ನು ಮಾಡುವ ವಿಚಾರದಲ್ಲಿದ್ದೇವೆ. ಬಾಗಲಕೋಟೆಯಲ್ಲಿ ಐದು ಎಕರೆಯಲ್ಲಿ ಪಿಜಿ ಸೆಂಟರ್‌ಗಳ ಮಾದರಿಯಲ್ಲಿ ಕಡಿಮೆ ವೆಚ್ಚದಲ್ಲಿ ಸ್ತ್ರೀಯರಿಗೆ ಹಾಗೂ ಪುರುಷರಿಗೆ ಉಪಯೋಗವಾಗುವಂತೆ ಕಟ್ಟಡಗಳನ್ನು ಮಾಡುವ ವಿಚಾರವಿದೆ ಎಂದರು.

ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬುವುದು ನನಗೆ ಗೊತ್ತಿಲ್ಲ. ನಾನು ಹೈಕಮಾಂಡ್‌ನಲ್ಲೂ ಇಲ್ಲ, ಸಚಿವ ಸಂಪುಟದಲ್ಲೂ ಇಲ್ಲ.‌ ರಾಜಕಿಯವಾಗಿ ನಂಜನ್ಯಮಠ ಸ್ಪರ್ಧಿಸುವ ಬಗ್ಗೆ ಆಲೋಚನೆ ಮಾಡಿಲ್ಲ. ಅನುಕಂಪದ ಮತ ಪಡೆಯುವ ಸಂಭವ ಇರುತ್ತದೆ. ಅಕಸ್ಮಾತ ಅವರು ನಿರಾಕರಿಸಿದರೇ ಹೈಕಮಾಂಡ್ ನನಗೆ ಸ್ಪರ್ಧಿಸು ಎಂದರೆ ನಾನು ಸ್ಪರ್ಧಸುತ್ತೇನೆ.

-ಎಸ್.ಜಿ.ನಂಜಯ್ಯನಮಠ,
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ