ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ

KannadaprabhaNewsNetwork |  
Published : May 18, 2025, 02:01 AM ISTUpdated : May 18, 2025, 02:02 AM IST
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಎಐಟಿಯುಸಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಶನಿವಾರ ಎಐಟಿಯುಸಿ ಸಂಯೋಜಿತ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಿವೃತ್ತ ನೌಕರರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗ್ರಾಚ್ಯುಟಿ ಸೌಲಭ್ಯವನ್ನು ಜಾರಿಗೊಳಿಸಲು ಒತ್ತಾಯ । ಗಾಂಧಿ ಪ್ರತಿಮೆ ಎದುರು ಧರಣಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಶನಿವಾರ ಎಐಟಿಯುಸಿ ಸಂಯೋಜಿತ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಿವೃತ್ತ ನೌಕರರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ನೂರಕ್ಕೂ ಹೆಚ್ಚು ವಯೋವೃದ್ಧ ನಿವೃತ್ತ ಅಂಗನವಾಡಿ ನೌಕರರು ತಮ್ಮ ಇಳಿ ವಯಸ್ಸಿನಲ್ಲಿ ಜೀವನ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಈಗಾಗಲೇ ರಾಜ್ಯ ಸರ್ಕಾರ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಜಾರಿಗೊಳಿಸಿದ್ದು, 2023ನೇ ಸಾಲಿನಿಂದ ನಿವೃತ್ತ ರಾದವರಿಗೆ ಮಾತ್ರ ಅನ್ವಯಿಸಿ ಆದೇಶಿಸಿದೆ. ಆದರೆ, ಸೇವೆಗೆ ಸೇರಿ 2011-12 ರಿಂದ ನಿವೃತ್ತ ಗೊಂಡ ನೌಕರರನ್ನು ಗ್ರಾಚ್ಯುಟಿ ವ್ಯಾಪ್ತಿಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಅಂಗನವಾಡಿ ಫೆಡರೇಷನ್ನಿನ ರಾಜ್ಯಾಧ್ಯಕ್ಷ ಬಿ. ಅಮ್ಜದ್ ಮಾತನಾಡಿ, ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ರಕ್ತಹೀನತೆ ತಡೆಗಟ್ಟಲು ಅಂಗನವಾಡಿಗಳ ಮೂಲಕ ಜಾರಿಗೊಳಿಸಲಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಇದೀಗ 50 ವರ್ಷ ಪೂರ್ಣಗೊಳ್ಳುತ್ತಿದ್ದು ಇಂತಹ ಸುಧೀರ್ಘ ಯೋಜನೆಯಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರ್ಕಾರ ನೀಡುತ್ತಿರುವ ಸಂಭಾವನೆ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ ಎಂದರು.

ಅವರು ಸೇವೆ ಸಲ್ಲಿಸಿ ನಿವೃತ್ತಿ ನಂತರ ಪಿಂಚಣಿ ಯೋಜನೆಗಳನ್ನು ಸರ್ಕಾರ ರೂಪಿಸಿರುವುದಿಲ್ಲ. ಇವರ ಸೇವೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸುವಂತೆ ಸೂಚಿಸಿತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗ್ರಾಚ್ಯುಟಿ ಜಾರಿಗೊಳಿಸಿ 2023ನೇ ಸಾಲಿನಿಂದ ನಿವೃತ್ತರಾದವರಿಗೆ ಅನ್ವಯವಾಗುವಂತೆ ಮಾತ್ರ ಆದೇಶಿಸಿ ರುವುದರಿಂದ ಕಳೆದ ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ವಯೋ ವೃದ್ಧರಿಗೆ ಅನ್ಯಾಯ ವೆಸಗಿ ದಂತಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 22 ಸಾವಿರದಷ್ಟು ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದು ಬಹಳಷ್ಟು ಜನ ತೀವ್ರ ತರಹದ ಕಾಯಿಲೆಗಳಿಗೆ ತುತ್ತಾಗಿ ಔಷಧಿ ಉಪಚಾರಕ್ಕೆ ಹಾಗೂ ದಿನನಿತ್ಯದ ಬದುಕಿಗೆ ಆರ್ಥಿಕವಾದ ಆಸರೆ ಇಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಇವರ ಬಗ್ಗೆ ಕಾಳಜಿವಹಿಸಿ ಗ್ರಾಚ್ಯುಟಿ ಕಾಯ್ದೆ ನಿಬಂಧನೆಗಳ ಪ್ರಕಾರ ನಿವೃತ್ತಿ ಹೊಂದಿರುವ ಎಲ್ಲರಿಗೂ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಗ್ರೇಟ್ಟಾ ಫರ್ನಾಂಡಿಸ್, ವಿವಿಧ ತಾಲೂಕುಗಳ ಅಧ್ಯಕ್ಷೆ ಚಿಕ್ಕಮಗಳೂರಿನ ಶೈಲಾ ಬಸವರಾಜು, ಕಡೂರಿನ ಯು. ಆರ್. ಪಾರ್ವತಮ್ಮ, ಮೂಡಿಗೆರೆ ತಾಲೂಕಿನ ಶೈಲಾ ನಾರಾಯಣಗೌಡ, ತರೀಕೆರೆಯ ಸವಿತಾ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್. ಎಲ್. ರಾಧಾ ಸುಂದರೇಶ್, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಸಿ. ಧರ್ಮರಾಜು ಹಾಗೂ ಜಿ. ರಮೇಶ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

17 ಕೆಸಿಕೆಎಂ 4ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಎಐಟಿಯುಸಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?