ಯೋಜನಾ ಪ್ರದರ್ಶನ, ರಾಷ್ಟ್ರೀಯ ತಂತ್ರಜ್ಞಾನ ದಿನ । ಎಂಜಿನಿಯರ್ ವಿದ್ಯಾರ್ಥಿಗಳ ಹೊಸ ಸಂಶೋಧನೆಗಳ ಅನಾವರಣ
ಕೈಗಾರಿಕೆಗಳಲ್ಲಿ ಅನಿಲ ಸೋರಿಕೆಯಿಂದಾಗುವ ಭಾರೀ ಅನಾಹುತ ತಪ್ಪಿಲು ಗ್ಯಾಸ್ ಸೋರಿಕೆಯಾಗುತ್ತಿದ್ದಂತೆಯ ಸಿಗ್ನಲ್ ನೀಡುವ ಯಂತ್ರ, ವಾಹನ, ರೈಲುಗಳ ಅಪಘಾತ ತಡೆಯುವ ಯಂತ್ರ, ಮತದಾನ ಪ್ರಮಾಣ ಹೆಚ್ಚಿಸಲು ಮನೆಯಿಂದಲೇ ಮತ ಚಲಾಯಿಸಲು ಪೂರಕವಾಗಿರುವ ಆ್ಯಪ್, ಕೃಷಿ ಬೆಳೆಗಳ ಸಾಲಿನಲ್ಲಿ ಕಳೆಯಲ್ಲೂ ಕಾಣಿಸುವ ಕ್ಯಾನ್ಸರ್‌ಗೆ ಔಷಧಿ, ಹೀಗೆ ವಿದ್ಯಾರ್ಥಿಗಳ ಆಲೋಚನೆಯಲ್ಲಿ ರೂಪುಗೊಂಡ ಅನೇಕ ಸಂಶೋಧನೆಗಳು ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ (ಬಿಐಇಟಿ) ಕಾಲೇಜನಲ್ಲಿ ಅನಾವರಣಗೊಂಡವು.
ನಗರದ ಬಿಐಇಟಿ ಕಾಲೇಜಿನ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಾಣ 5.0 ಯೋಜನಾ ಪ್ರದರ್ಶನ-2025 ಮತ್ತು ರಾಷ್ಟ್ರೀಯ ತಂತ್ರಜ್ಞಾನ ದಿನ-2025 ಸಮಾರಂಭದಲ್ಲಿ ಎಂಜಿನಿಯರಿಂದ್ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಆಲೋಚನೆ, ಪ್ರಯತ್ನದಿಂದ ರೂಪುಗೊಂಡ ಅನೇಕ ಸಂಶೋಧನೆಗಳು ಅತಿಥಿಗಳು, ಗಣ್ಯರು, ಕಾಲೇಜು ಪ್ರಾಚಾರ್ಯರು, ಪ್ರಾಧ್ಯಾಕರ ಗಮನ ಸೆಳೆಯುವಂತಿದ್ದವು.ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಕಿರಣಕುಮಾರ, ವಿ.ಗಣೇಶ, ರಾಜೀವ್, ಮಹೇಶ ತಂಡವು ಬೃಹತ್ ಉದ್ದಿಮೆ, ಕೈಗಾರಿಕೆಗಳಲ್ಲಿ ಅನಿಲ ಸೋರಿಕೆಯಿಂದ ಆಗುತ್ತಿದ್ದ ಅಪಾಯ ತಡೆಗೆ ಸಿಗ್ನಲ್ ಮೂಲಕ ಜಾಗೃತಿ ಮೂಡಿಸುವ ಸಂಶೋಧನೆ ಮಾಡಿದ್ದಾರೆ. ಅನಿಲ ಸೋರಿಕೆಯಿಂದಾಗುವ ಭಾರೀ ಅನಾಹುತ ತಪ್ಪಿಸುವ ಯಂತ್ರವನ್ನು ಈ ತಂಡ ಸಂಶೋಧಿಸಿದ್ದು, ಎಲ್ಲರ ಗಮನ ಸೆಳೆಯಿತು. ಇ ಅಂಡ್ ಸಿ ವಿಭಾಗದ ಸ್ಮಿತಾ, ದೀಕ್ಷಿತಾ ತಂಡ ಸೋಲಾರ್ ಬೈಸಿಕಲ್ ತಯಾರಿಸಿದ್ದು, ಅದೇ ವಿಭಾಗದ ಖುಷಿ, ಉಸ್ಮಾಜಾನ್ ಶಾಪಿಂಗ್ ಮಾಲ್‌ನಲ್ಲಿ ಸರದಿಯಲ್ಲಿ ನಿಂತು, ಖರೀದಿಸಿರುವ ವಸ್ತುಗಳಿಗೆ ಬಿಲ್ ಪಡೆಯುವುದನ್ನು ತಪ್ಪಿಸಲು ಸ್ಮಾರ್ಟ್ ಶಾಪಿಂಗ್ ಕಾರ್ಡ್ ಸಂಶೋಧಿಸಿದ್ದಾರೆ.
ಇನ್ಫಾರ್ಮೇಷನ್ ಅಂಡ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಮನೀಶ್ ಎಸ್.ಚಿಕ್ಕಮಠ, ಪ್ರಜ್ವಲ್ ಮಲ್ಲೂರ್, ಎನ್.ಎಚ್.ಶಂಕರ್, ವೈ.ರವಿತೇಜ ತಂಡವು ರಸ್ತೆ ನಿಯಮ, ಸಂಚಾರ ನಿಯಮ ಪಾಲಿಸಿದರೂ ವಾಹನಗಳ ಅಪಘಾತ ತಡೆ ಸಾಧ್ಯವಾಗುತ್ತಿಲ್ಲವೆಂಬ ಕೊರಗನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನ 1 ಪೇಜ್ ಸಂಸ್ಥಾಪಕ, ಸಿಇಒ, ಕಾಲೇಜಿನ ಹಳೆಯ ವಿದ್ಯಾರ್ಥಿ ಪೂರಣ ಪ್ರಸಾದ್ ರಾಜಣ್ಣ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.