ಅನ್ಯಧರ್ಮದ ದಬ್ಬಾಳಿಕೆಯಿಂದಾಗಿ ಹಿಂದೂ ಧರ್ಮ ಸಂಕಷ್ಟದಲ್ಲಿದ್ದು ಕೆಲವು ಕಡೆ ಅಂತೂ ಹಿಂದುಗಳ ಸ್ಥಿತಿಗತಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿದೆ ಎಂದು ಕೆರಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಅನ್ಯಧರ್ಮದ ದಬ್ಬಾಳಿಕೆಯಿಂದಾಗಿ ಹಿಂದೂ ಧರ್ಮ ಸಂಕಷ್ಟದಲ್ಲಿದ್ದು ಕೆಲವು ಕಡೆ ಅಂತೂ ಹಿಂದುಗಳ ಸ್ಥಿತಿಗತಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿದೆ ಎಂದು ಕೆರಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಬಸವೇಶ್ವರ ನಗರದಲ್ಲಿ ಭಾನುವಾರ ಹಿಂದೂ ಸಮಾಜೋತ್ಸವ ಅಂಗವಾಗಿ ಏರ್ಪಡಿಸಿದ ಶೋಭಾ ಯಾತ್ರೆ ಹಾಗೂ ವೇದಿಕೆ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿ ಹಿಂದೂಗಳ ಮನೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಕಳವಳಕಾರಿ ಸಂಗತಿಯಾಗಲಿದ್ದು ಹಿಂದುಗಳ ಜನಸಂಖ್ಯೆ ಹೆಚ್ಚಾಗಬೇಕು. ಹಿಂದೂ ಧರ್ಮ-ಸಂಸ್ಕೃತಿ ಉಳಿಯಲು ಮೊದಲು ಹಿಂದುಗಳು ಒಂದಾಗಬೇಕು. ಮಕ್ಕಳಲ್ಲಿ ಸಂಸ್ಕಾರ ನೀಡುವತ್ತ ಪೋಷಕರು ಗಮನಹರಿಸಬೇಕು. ಸಂಸ್ಕೃತಿ ಉಳಿಸುವ ಕೆಲಸವಾಗಬೇಕು, ಮಕ್ಕಳನ್ನು ಪೋಷಕರು ಪ್ರೀತಿಯಿಂದ ಕಾಣಬೇಕು. ಧಾರ್ಮಿಕತೆಯಲ್ಲಿ ನಾವೆಲ್ಲರೂ ಒಂದೇ ಎಂದಾಗಲೇ ಹಿಂದೂ ಸಂಸ್ಕೃತಿ ಹಿಂದುತ್ವ ಉಳಿಯಲು ಸಾಧ್ಯ ಎಂದರು. ಬಸವಣ್ಣನವರು ಹೇಳಿದಂತೆ ಇವನ್ಯಾರವ ಇವನ್ಯಾರವ ಇವ ನಮ್ಮವ ಎಂಬ ಭಾವನೆ ಹಿಂದುಗಳಲ್ಲಿ ಬರಬೇಕು. ಭಾರತ ದೇಶ ಪ್ರಪಂಚದಲ್ಲಿ ಇರುವ ಏಕೈಕ ಹಿಂದೂ ರಾಷ್ಟ್ರವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ ನೂರು ವರ್ಷಗಳಲ್ಲಿ ದೇಶಾದ್ಯಂತ ಉತ್ತಮವಾದ ಕೆಲಸ ಮಾಡುತ್ತಿದೆ. ಸಣ್ಣ ಸಣ್ಣ ಪ್ರಾಂತ್ಯಗಳಲ್ಲಿ, ಗ್ರಾಮಗಳಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸುವ ಮೂಲಕ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀಗಳು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಕುಟುಂಬ ಪ್ರಬೋಧನ ಮುಖ್ಯಸ್ಥರಾದ ಕಜಂಪಾಡಿ ಸುಬ್ರಮಣ್ಯ ಭಟ್ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಹಿಂದು ಯುವತಿಯ ಹತ್ಯೆಯಾಯಿತು. ಘಟನೆ ಖಂಡಿಸಿ ಹಿಂದುಗಳೆಲ್ಲ ಒಟ್ಟಾಗಿ ಪ್ರತಿಭಟನೆ ಮಾಡಿದಾಗ ಯುವತಿಯ ಹತ್ಯೆ ಮಾಡಿದವನು ಅನ್ಯ ಕೋಮೀನವನಾಗಿದ್ದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಿಂದುಗಳ ಒಗ್ಗಟ್ಟು ಇದಕ್ಕೆ ಕಾರಣವಾಗಿದೆ. ಸತ್ಯ ಅನುಷ್ಠಾನ ತರುವ ಪ್ರಕ್ರಿಯೆ ಪ್ರತಿಯೊಬ್ಬರು ಚಾಲನೆ ನೀಡಬೇಕು. ಅಂತಃಕರಣದಲ್ಲಿದಲ್ಲಿ ಹಿಂದೂ ಹಾಗೂ ಸಂಸ್ಕೃತಿ ಜಾಗೃತಿ ಮೂಡಿಸಬೇಕು. ನಮ್ಮ ದೇಶದ ಗೊಂದಲ ಸರಿಪಡಿಸಲು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ನೂರಾರು ವರ್ಷವಾಯಿತು. ಇತ್ತೀಚಿನ ಶಿಕ್ಷಣ ಪದ್ಧತಿಯಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮಕ್ಕಳಿಗೆ ಸದ್ಭಾವನ ಸಂಸ್ಕೃತಿ, ಜೀವನ ಮೌಲ್ಯ ತಿಳಿಸಬೇಕು. ಪ್ರತಿ ಕುಟುಂಬದಲ್ಲಿ ಪ್ರತಿಯೊಬ್ಬರು ಒಟ್ಟಾಗಿ ಸೇರಬೇಕು. ನಮ್ಮ ದೇಶದಲ್ಲಿ ಅನ್ನ ನೀರು ಪ್ರತಿಯೊಂದು ಕೂಡ ಭಕ್ತಿಯಿಂದ ಪ್ರಾರ್ಥಿಸುತ್ತೇವೆ. ಮಕ್ಕಳಿಗೆ ಸಾಮರಸ್ಯ ಹಾಗೂ ಪರಿಸರ ಉಳಿಸುವತ್ತ ತಿಳಿಸಿಕೊಡಬೇಕು. ಸ್ವದೇಶಿ, ಸ್ವಭಾಷೆ, ನಮ್ಮ ಧರ್ಮ, ದೇವರು ಬಗ್ಗೆ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಶಾಲೆಯ ಮುಖ್ಯಸ್ಥರಾದ ಮುರಳಿ ಕೃಷ್ಣ ಮಾತನಾಡಿದರು. ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಕಲ್ಯಾಣಿ ಮತ್ತು ತಂಡದವರು ಪ್ರಾರ್ಥಿಸಿದರು. ರಾಜೀವಲೋಚನ ಸ್ವಾಗತಿಸಿದರು. ಸಮಾಜೋತ್ಸವ ಸಮಿತಿಯ ಗಣೇಶ್ ವಂದಿಸಿದರು. ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್, ಪ್ರಕಾಶ್, ಮಂಜುನಾಥ್, ಧನಂಜಯ ಹಾಗೂ ಸಮಿತಿಯ ಸದಸ್ಯರು, ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.