ಫಕೃದ್ದೀನ ಎಂ.ಎನ್.
ಪಟ್ಟಣದ ಅಜಾತ ನಾಗಲಿಂಗ ಶ್ರೀಗಳ 145ನೇ ಆರಾಧನಾ ಮಹೋತ್ಸವ ಹಾಗೂ ಮಜಾರ ಪೂಜೆ ಜು. 18ರಂದು ಹಾಗೂ ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ಜು. 19ರಂದು ವಿಜೃಂಭಣೆಯಿಂದ ಜರುಗಲಿದೆ.
ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠ ಹಿಂದೂಗಳ ಮಠವಾದರೂ ಭಾವೈಕ್ಯತೆಯ ತಾಣ. ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ ಗದ್ದುಗೆ, ಕ್ರೈಸ್ತರ ಧರ್ಮಗ್ರಂಥ ಬೈಬಲ್ ಹಾಗೂ ಮುಸ್ಲಿಂ ಪಂಜಾಗಳು ದಿನನಿತ್ಯ ಪೂಜಿಸಲ್ಪಡುತ್ತವೆ.ಹುಬ್ಬಳ್ಳಿಯ ಸಿದ್ಧಾರೂಢರು, ಹೊಸಳ್ಳಿ ಬೂದೀಶ್ವರ ಶ್ರೀಗಳು, ಗರಗದ ಮಡಿವಾಳಜ್ಜನವರು, ಶಿಶುನಾಳ ಶರೀಫರು ಮೊದಲಾದ ಶರಣರು ಹಾಗೂ ಸಂತ ಮಹಾಪುರುಷರೊಡಗೂಡಿ ನಾಗಲಿಂಗಜ್ಜನವರು ಮಾಡಿದ ಪವಾಡಗಳನ್ನು ಇಲ್ಲಿನ ಹಿರಿಯರು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅಜ್ಜನವರು 1881ರಲ್ಲಿ ಜೀವಂತ ಸಮಾಧಿ ಹೊಂದಿದ್ದಾರೆ.
ಅಜ್ಜನ ಆರಾಧನಾ ಮಹೋತ್ಸವ ಲಕ್ಷಾಂತರ ಜನರಿಗೆ ಭಕ್ತಿ, ಶ್ರದ್ಧೆಗಳ ಸಮ್ಮೇಳನವಾಗಿದೆ. ಶ್ರೀಗಳ ಸಂಕಲ್ಪದಂತೆ ಇಂದಿನ ಪೀಠಾಧಿಪತಿಯಾದ ವೀರೇಂದ್ರ ಸ್ವಾಮೀಜಿ ಮಠವನ್ನು ಧಾರ್ಮಿಕ ಕಾರ್ಯಕಲಾಪಗಳಿಗೆ ಸೀಮಿತಗೊಳಿಸದೇ ಶೈಕ್ಷಣಿಕ- ಸಾಂಸ್ಕೃತಿಕ- ಸಾಮಾಜಿಕವಾಗಿ ಬೆಳೆಸಿದ್ದಾರೆ.
ಈಗಿನ ಪೀಠಾಧಿಪತಿಗಳಾದ ವೀರೇಂದ್ರ ಶ್ರೀಗಳು ಎಂ.ಎ. ಸಂಸ್ಕೃತ ಹಾಗೂ ಯೋಗ ಪದವೀಧರರಾಗಿದ್ದು, ಬಿಡುವಿನ ವೇಳೆಯಲ್ಲಿ ಶಾಲಾ ಮಕ್ಕಳಿಗೆ ಸಂಸ್ಕೃತ ಕಲಿಸುತ್ತಾರೆ. ಪ್ರೌಢಶಾಲೆ ಮತ್ತು ಐಟಿಐ ಕಾಲೇಜನ್ನು ನಡೆಸುತ್ತಿದ್ದು, ಅವು ಪ್ರಗತಿಪಥದಲ್ಲಿವೆ. ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿವೆ.
ಶ್ರೀ ಮಠದಲ್ಲಿ ಭಕ್ತರ ಸೇವೆ ಅಗಾಧ. ಯಾವುದೇ ಜಾತಿ, ಮತ, ಭೇದವಿಲ್ಲದೆ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಸಕಲ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ.