ನೊಣವಿನಕೆರೆಯ ಕಾಡಸಿದ್ದೇಶ್ವರ ಶ್ರೀ । ಕಾಡಸಿದ್ದೇಶ್ವರ ಮಠದಲ್ಲಿ ನಡೆದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ
ಭಕ್ತರ ಸಹಕಾರದಿಂದ ಶ್ರೀಮಠವು ಅಭಿವೃದ್ಧಿಯತ್ತ ಸಾಗುತ್ತಿದ್ದು ಭಕ್ತರ ಕಷ್ಟ - ಸುಖಗಳಿಗೆ ಅಜ್ಜಯನ ಶ್ರೀರಕ್ಷೆ ಸದಾ ಇರಲಿದೆ ಎಂದು ತಾಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ನಡೆದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಕ್ತ ಶ್ರೀಮಂತನಾದರೆ ಮಠವೇ ಶ್ರೀಮಂತವಾಗಿರುತ್ತದೆ. ಕುಟುಂಬಗಳಲ್ಲಿ ಸಾಮರಸ್ಯ, ಬ್ರಾತೃತ್ವ, ಸಹೋದರತ್ವವಿರಬೇಕು, ಮಕ್ಕಳಿಗೆ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಪೋಷಕರು ಕಲಿಸಿದಾಗ ಆ ಮನೆ ಸ್ವರ್ಗಕ್ಕೆ ಸಮಾನವಾಗಿರುತ್ತದೆ. ರೈತರಿಗೆ, ದೇಶ ಕಾಯುವ ಯೋಧರಿಗೆ, ರಾಜಕಾರಣಿಗಳಿಗೆ, ಶಿಕ್ಷಕರು, ವೈದ್ಯರು, ವ್ಯಾಪಾರಸ್ಥರು ಸೇರಿ ನಾಡಿನ ಜನರಿಗೆ ದಯಾಮಯನಾದ ಪರಶಿವನು ದೇಹಕ್ಕೆ ಶಕ್ತಿ, ಆರೋಗ್ಯ ಭಾಗ್ಯ, ನೆಮ್ಮದಿ, ದೇಶಾಭಿಮಾನದ ಹುಮ್ಮಸ್ಸು ನೀಡಿ ದೇಶ ಸುಭೀಕ್ಷವಾಗಿರಲೆಂದು ಈ ಜಾತ್ರಾ ಸಮಯದಲ್ಲಿ ಸಂಕಲ್ಪ ಮಾಡಿದ್ದೇವೆ ಎಂದರು.ಅವಧೂತ ಶ್ರೀವಿನಯ್ ಗುರೂಜಿ ಮಾತನಾಡಿ, ಗುರುವಿನ ಬಲ ಪ್ರತಿ ಮಾನವನಿಗೂ ಇರಬೇಕು. ಹರ ಮುನಿದೆಡೆ ಗುರು ಕಾಯುವನು, ಗುರುವನ್ನು ನಂಬಿದ ಡಿ.ಕೆ.ಶಿವಕುಮಾರ್ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನ್ಯಾಯಾಲಯದ ತೀರ್ಪು ಸಹ ಅವರ ಪರ ಬಂದಿದೆ. ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಯವರು ವಿಭೂತಿ ನಡುವೆ ಕುಂಕುಮ ಇಟ್ಟಿದ್ದಾರೆ. ವಿಭೂತಿ ಶಿವನಾದರೆ ಕುಂಕುಮ ಪಾರ್ವತಿ. ಅವರ ದರ್ಶನ ಪಡೆದರೆ ಸಾಕ್ಷಾತ್ ಶಿವ ಪಾರ್ವತಿ ದರ್ಶನ ಪಡೆದಂತೆ. ವೀರಶೈವ ಮಠಗಳು ತ್ರಿವಿಧ ದಾಸೋಹ ನೀಡಿ ರಾಷ್ಟ್ರಕ್ಕೆ ಮಾದರಿಯಾಗಿವೆ. ರಾವಣನಿಗೂ ಮತ್ತು ರಾಮನಿಗೂ ಶಿವನು ಆರಾಧ್ಯ ದೈವನಾದರೆ ರಾವಣ ಅಹಂಕಾರದಿಂದ ನಾಶವಾದನು, ಶ್ರೀರಾಮನು ಶ್ರದ್ಧೆ, ಭಕ್ತಿಯಿಂದ ಆದರ್ಶ ವ್ಯಕ್ತಿತ್ವದಿಂದ ಪೂಜಿಸಲ್ಪಟ್ಟನು. ಶಿವಭಕ್ತರಲ್ಲಿ ತಾಳ್ಮೆ ಇರಬೇಕು ಇಷ್ಟಲಿಂಗವನ್ನು ಪೂಜಿಸುವ ಎಡಗೈ ದೇಹದ ಶಕ್ತಿ ಭಾಗ. ಸಾರ್ಥಕ ಜೀವನದಲ್ಲಿ ಗುರುವಿಗೆ ತಲೆಬಾಗಿ ಮಠಮಾನ್ಯಗಳಿಗೆ ಸೇವಕನಾಗಿ ಬದುಕಬೇಕು ಎಂದರು.
ಮೇಲಣ ಗವಿಮಠದ ಮಲಯ ಶಾಂತಮುನಿ ಸ್ವಾಮೀಜಿ ಮಾತನಾಡಿ, ಈಗಿನ ಶಿವಯೋಗಿಶ್ವರ ಸ್ವಾಮೀಜಿ ಜನಿಸಿ ಸೂರ್ಯನ ತಾಪವನ್ನು ತಡೆಹಿಡಿದು ಚಂದ್ರನ ರೂಪದಲ್ಲಿ ಭಕ್ತರಿಗೆ ತಂಪನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಶ್ರೀಮಠದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾ ಯಜ್ಞ ಹಾಗೂ ಸಾಮೂಹಿಕ ಉಚಿತ ವಿವಾಹ ನಡೆದವು.