ಕೂಡ್ಲಿಗಿ: ಕಲಾವಿದರ ಮಾಶಾಸನವನ್ನು ಮೊದಲಿದ್ದ ಸಾವಿರದ ಜತೆಗೆ 1ಸಾವಿರ ಹೆಚ್ಚಿಗೆ ಭರಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದವು. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದಿಸಿದ್ದರಿಂದ ₹ 2500 ಮಾಶಾಸನ ಪಡೆಯುವಂತಾಗಿದೆ. ಅಖಂಡ ಬಳ್ಳಾರಿ ಕಲಾವಿದರ ತವರೂರಾಗಿದ್ದರಿಂದ ಪ್ರಶಸ್ತಿಗಳಿಗೂ ಸಿಂಹಪಾಲನ್ನು ಅಖಂಡ ಬಳ್ಳಾರಿಗೆ ನೀಡಿದ್ದೇನೆ, ಮುತ್ಸದ್ಧಿ ರಾಜಕಾರಣಿ ಎಂ.ಪಿ. ಪ್ರಕಾಶ ಗರಡಿಯಲ್ಲಿ ಪಳಗಿದವನು ನಾನು ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.
ನಿರಂತರವಾಗಿ ನಾಟಕರಂಗ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ, ಕೂಡ್ಲಿಗಿಯಲ್ಲಿ ಸುಸಜ್ಜಿತ, ಆಧುನಿಕತೆಯಿಂದ ಕೂಡಿದ ಕನ್ನಡ ಭವನ ನಿರ್ಮಾಣ ಮಾಡುವ ಮೂಲಕ ಇಲ್ಲಿನ ಆಸಕ್ತ ನಾಟಕಕಾರರಿಗೆ ವೇದಿಕೆ ಕಲ್ಪಿಸುವ ಬಗ್ಗೆ ಕೆ.ವಿ.ನಾರಾಜಮೂರ್ತಿ ಭರವಸೆ ನೀಡಿದರು. ನಾಟಕ ಆಕಾಡೆಮಿಯಿಂದ ಈಗಾಗಲೇ ಪಟ್ಟಣದ ಊರಮ್ಮ ದೇವಿ ಉತ್ಸವದ ಜಾತ್ರೆಗೆ ಎರಡು ನಾಟಕಗಳಿಗೆ ಪ್ರಾಯೋಜಕತ್ವ ನೀಡಲಾಗಿದೆ. ಅಲ್ಲದೆ, ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಲು ಮುಂದಿನ ದಿನಗಳಲ್ಲಿ ಪ್ರಾಯೋಜಕತ್ವ ನೀಡಲಾಗುವುದು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕೂಡ್ಲಿಗಿಯ ಹಿರಿಯ ರಂಗನಟಿ ಪಿ. ಪದ್ಮಾ, ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಬ್ಯಾಳಿ ವಿಜಯಕುಮಾರ ಗೌಡ, ರಂಗ ಶಿಕ್ಷಕ ಶಿವನಾಯಕ ದೊರೆ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಕಲಾಭಾರತಿ ಕಲಾಸಂಘದ ರಾಜ್ಯಾಧ್ಯಕ್ಷ ಬಣಕಾರ ಮೂಗಪ್ಪ, ಕಜಾಪ ಅಧ್ಯಕ್ಷ ಕೆ.ಎಂ. ವೀರೇಶ ಮಾತನಾಡಿದರು. ಹಿರಿಯ ರಂಗಕಲಾವಿದೆಯರಾದ ಭಾರತಿ, ಕೋಟೆ ಅಂಜಿನಮ್ಮ, ಬ್ಯಾಳಿ ಶಿವಪ್ರಸಾದ ಗೌಡ, ವಿಭೂತಿ ವೀರಣ್ಣ, ಬಾಣದ ನರಸಿಂಹಪ್ಪ ಸೇರಿದಂತೆ ಜಿಲ್ಲೆಯಿಂದ ಹತ್ತು ಹಲವು ನಾಟಕ ಕಲಾವಿದರು ಆಗಮಿಸಿದ್ದರು.