ಅಖಿಲ ಕೊಡವ ಸಮಾಜ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ವಿಧಿವಶ

KannadaprabhaNewsNetwork | Published : Oct 22, 2023 1:01 AM

ಸಾರಾಂಶ

ಕೊಡವ ಜನಾಂಗದ ಮಾತೃ ಸಂಸ್ಥೆ ಆಗಿರುವ ಅಖಿಲ ಕೊಡವ ಸಮಾಜದಲ್ಲಿ ಸುಧೀರ್ಘ ಅವಧಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾತಂಡ ಮೊಣ್ಣಪ್ಪ ಶನಿವಾರ ಮಧ್ಯಾಹ್ನ ಬೆಂಗಳೂರಿನಲ್ಲಿರುವ ಮಗನ ಮನೆಯಲ್ಲಿ ವಿಧಿವಶರಾಗಿದ್ದಾರೆ.
ಮಡಿಕೇರಿ: ಅಖಿಲ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ (76) ಶನಿವಾರ ವಿಧಿವಶರಾಗಿದ್ದಾರೆ. ಭಾನುವಾರ ಕೆದಮುಳ್ಳೂರುವಿನಲ್ಲಿ (ತೋರ) ಅಂತ್ಯಕ್ರಿಯೆ ನಡೆಯಲಿದೆ. ಕೊಡವ ಜನಾಂಗದ ಮಾತೃ ಸಂಸ್ಥೆ ಆಗಿರುವ ಅಖಿಲ ಕೊಡವ ಸಮಾಜದಲ್ಲಿ ಸುಧೀರ್ಘ ಅವಧಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾತಂಡ ಮೊಣ್ಣಪ್ಪ ಶನಿವಾರ ಮಧ್ಯಾಹ್ನ ಬೆಂಗಳೂರಿನಲ್ಲಿರುವ ಮಗನ ಮನೆಯಲ್ಲಿ ವಿಧಿವಶರಾಗಿದ್ದಾರೆ. ಇವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12 ಗಂಟೆಯ ನಂತರ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ತೋರ ಸಮೀಪದ ಬೊಳ್ಳುಮಾಡ್ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೂಲತಃ ಬೊಳ್ಳುಮಾಡ್ ಗ್ರಾಮದವರಾದ ಕೆದಮುಳ್ಳೂರು ತೋರ ಗ್ರಾಮದಲ್ಲಿ ವಾಸವಿದ್ದ ದಿವಂಗತ ಮಾತಂಡ ಸಿ ಚೆಂಗಪ್ಪ ಹಾಗೂ ಲಿಲ್ಲಿ ಚೆಂಗಪ್ಪ ಪುತ್ರರಾಗಿ 10/02/1948ರಲ್ಲಿ ಜನಿಸಿದ ಇವರು 1973 ರಿಂದ 2022ರ ತನಕ ಅಖಿಲ ಕೊಡವ ಸಮಾಜ ಅಧ್ಯಕ್ಷರಾಗಿದ್ದರು. ಕಳೆದ ವರ್ಷವಷ್ಟೇ ಸ್ವಯಂ ನಿವೃತ್ತಿ ಘೋಷಿಸಿದ್ದರು. ಮಾತಂಡ ಮೊಣ್ಣಪ್ಪ ಅವರು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಕೊಡಗು ಏಕೀಕರಣ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾಗಿ ನಂತರ ತಲಕಾವೇರಿ ಜೀರ್ಣೋದ್ಧಾರ ಸಮೀತಿಯ ಅಧ್ಯಕ್ಷರನ್ನಾಗಿ ಸರ್ಕಾರವೇ ಇವರನ್ನು ನೇಮಕ ಮಾಡಿತ್ತು. ತಲಕಾವೇರಿ ಜೀರ್ಣೋದ್ಧಾರದ ಕಾರಣಕರ್ತರಾದ ಇವರು ತುಲಾ ಸಂಕ್ರಮಣದಂದು ಅನ್ನದಾನದ ರೂವಾರಿಯೂ ಆಗಿದ್ದರು. ಬೆಪ್ಪುನಾಡ್ ತಕ್ಕನಾಗಿ, ಬೆಪ್ಪುನಾಡ್ ಕೊಡವ ಸಮಾಜ ಅಧ್ಯಕ್ಷನಾಗಿ, ದೇಶ ತಕ್ಕನಾಗಿ ಕಾರ್ಯನಿರ್ವಹಿಸಿದ ಇವರು ಹಲವಾರು ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಇವರು ಕೊಡವ ಸಮಾಜ ಒಕ್ಕೂಟದ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಕೊಡವ ಸಮಾಜ ಒಕ್ಕೂಟದ ಬೆಳವಣಿಗೆ ಹಾಗೂ ಸ್ಥಾಪನೆಯಲ್ಲಿ ಕೂಡ ಇವರ ಸೇವೆ ಅಪಾರ. ಕೊಡವ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆರಂಭವಾದ ಹಳ್ಳಿಗಟ್ಟುವಿನ ಸಿ.ಐ.ಟಿ ಕಾಲೇಜು ಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಜಮ್ಮ ಸಮಸ್ಯೆ, ಕೋವಿ ಹಕ್ಕಿನ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ ಇವರು ಒಂದು ರೀತಿಯಲ್ಲಿ ಜನಪರ ಹೋರಾಟಗಾರ ಎಂದರೆ ತಪ್ಪಲ್ಲ. ಎಲ್ಲ ಜಾತಿ ಜನಾಂಗದೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಮಾತಂಡ ಮೊಣ್ಣಪ್ಪ, ಕುಂಜಿಲ ಗ್ರಾಮದ ಮುಖ್ಯ ಶಿಕ್ಷಕಿ ಕೊಟೇರ ಕಮಲ ತಂಗಮ್ಮ ಅವರನ್ನು ಮದುವೆಯಾಗಿದ್ದು ಇವರಿಗೆ ಎರಡು ಹೆಣ್ಣು ಹಾಗೂ ಒಬ್ಬ ಗಂಡು ಮಗ ಇದ್ದಾರೆ. ಒಂದಷ್ಟು ಸಮಯ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನಲ್ಲಿರುವ ಮಗನ ಮನೆಯಲ್ಲಿ ವಾಸವಿದ್ದರು. ಭಾನುವಾರ ಮಧ್ಯಾಹ್ನ 12ರವರೆಗೆ ಕೆದಮುಳ್ಳೂರು ತೋರದಲ್ಲಿರುವ ಮನೆಯಲ್ಲಿ ಸಾರ್ವಜನಿಕ ದರ್ಶನದ ಬಳಿಕ ಬೊಳ್ಳುಮಾಡ್‌ನಲ್ಲಿರುವ ಕುಟುಂಬದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಂತಾಪ: ಇವರ ನಿಧನಕ್ಕೆ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

Share this article