ಟಿಎಲ್‌ಬಿಸಿ ಕೆಳಭಾಗದ ರೈತರ ಹೋರಾಟ । ಮುಖ್ಯಕಾಲುವೆಯಲ್ಲಿ ನಿಗದಿತ ಗೇಜ್ ನಿರ್ವಹಣೆ, ಸಮಾನಾಂತರ ಭರ್ತಿಗೆ ಕ್ರಮದ ಭರವಸೆ ಕನ್ನಡಪ್ರಭ ವಾರ್ತೆ ರಾಯಚೂರು ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭೇಟಿ ನೀಡಿ, ರೈತರೊಂದಿಗೆ ಸಮಾಲೋಚನೆ ನಡೆಸಿದರು. ಸಮೀಪದ ಸಾಥ್ ಮೈಲ್‌ನಲ್ಲಿ ಕೆಳಭಾಗದ ರೈತರು ಹೋರಾಟ ನಡೆಸುತ್ತಿದ್ದು, ಶನಿವಾರ ಸ್ಥಳಕ್ಕೆ ತೆರಳಿದ ಸಚಿವರು ಟಿಎಲ್‌ಬಿಸಿ ಕೆಳಭಾಗದ ಅಚ್ಚುಕಟ್ಟು ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಕಾಲುವೆಯಲ್ಲಿ ನಿಗದಿತ ಗೇಜ್ ನಿರ್ವಹಣೆ ಹಾಗೂ ಸಮಾನಾಂತರ ಜಲಾಶಯದ ಭರ್ತಿಗೆ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ರೈತರ ಬೇಡಿಕೆ ಈಡೇರಿಸುವ ತನಕ ಹೋರಾಟ ಕೈಬಿಡುವುದಿಲ್ಲವೆಂದು ರೈತರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್ ಸೇರಿದಂತೆ ರೈತ ಮುಖಂಡರು,ಗ್ರಾಮಸ್ಥರು ಇದ್ದರು. - - - ಬಾಕ್ಸ್ ಅಧಿಕಾರಿಗಳಿಗೆ ಸೂಚನೆ ಟಿಎಲ್‌ಬಿಸಿ ಕೆಳಭಾಗದ ನೀರಿನ ಸಮಸ್ಯೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶರಣಪ್ರಕಾಶ ಪಾಟೀಲ್, ಐಸಿಸಿ ಸಭೆಯಲ್ಲಿ ತೆಗೆದುಕೊಂದ ತೀಮರ್ಮಾನದಂತೆಯೇ ಕಾಲುವೆಗೆ ನೀರು ಹರಿಸಲು ಕ್ರಮವಹಿಸಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಕೆಳಭಾಗಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಲಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪ್ರಭಾವದಿಂದ ಕೆಳಭಾಗ್ಕಕೆ ನೀರು ಬರುತ್ತಿಲ್ಲ ಎನ್ನುವುದು ಈಗಾಗಲೇ ಐಸಿಸಿ ಸಭೆಯಲ್ಲಿ ಎಲ್ಲ ಸಚಿವರು, ಶಾಸಕರು ಸಮರ್ಪಕವಾಗಿ ನೀರು ಹರಿಸುವುದರ ಕುರಿತು ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಆಯುಕ್ತರು ಅಚ್ಚುಕಟ್ಟು ಪ್ರದೇಶದಲ್ಲಿಯೇ ಬಿಡಾರ ಹೂಡಿ ನೀರು ನಿರ್ವಹಿಸಲಿದ್ದಾರೆ. ಕೆಳಭಾಗಕ್ಕೆ ನೀರು ಹರಿಸುವ ನಿಟ್ಟಿನಲ್ಲಿ ಡಿಸಿ, ಎಸ್ಪಿ ಅಗತ್ಯವಾದ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. - - - ಶಾಸಕರ ನಡುವೆ ಜಟಾಪಟಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟಿಎಲ್‌ಬಿಸಿ ಕೆಳಭಾಗದ ನೀರಿನ ಸಮಸ್ಯೆ ಕುರಿತು ಶಾಸಕರ ನಡುವೆ ಜಟಾಪಟಿಯ ಘಟನೆ ಜರುಗಿತು. ಕೊನೆ ಭಾಗಕ್ಕೆ ನೀರಿನ ಸಮಸ್ಯೆ ಗಂಭೀರವಾಗಿದೆ. ಕೂಡಲೇ ಪ್ರತ್ಯೇಕ ಐಸಿಸಿ ಸಭೆ ಕರೆಯಲು ಶಾಸಕರು ತಾಕೀತು ಮಾಡಿದರು. ನೀರಾವರಿ ಅಧಿಕಾರಿಗಳು ದಪ್ಪ ಚರ್ಮದವರಾಗಿದ್ದಾರೆ. ಸಚಿವರ ಸಭೆಗೂ ಬಂದಿಲ್ಲ ಎಂದರೆ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಅವರನ್ನು ವಿಚಾರಿಸಬೇಕು ಎಂದು ಆಗ್ರಹಿಸಿದರು. ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ನೀರಾವರಿ ಸಮಸ್ಯೆ ಕುರಿತು ವಿವರಿಸಿ ಇದು ಯಾವ ಸರ್ಕಾರ ಬಂದರೂ ಬಗೆ ಹರಿಯದಂತಾಗಿದೆ. ಈ ವೇಳೆ ಶಾಸಕ ಶಿವರಾಜ್ ಪಾಟೀಲ್ ಮೇಲ್ಭಾಗದಲ್ಲಿ 20 ಎಕರೆಗೆ ಒಂದರಂತೆ ಕೆರೆ ನಿರ್ಮಿಸಿಕೊಂಡರೆ ಕೆಳಭಾಗಕ್ಕೆ ಹೇಗೆ ನೀರು ಬರುತ್ತದೆ ಎಂದರು. ಇದಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಆಕ್ಷೇಪಿಸಿದಾಗ ನೀವೆ ಸಾಕಷ್ಟು ಕೆರೆಗಳನ್ನು ನಿರ್ಮಿಸಿಕೊಂಡಿದ್ದೀರಿ ಎಂದು ನೇರ ವಾಗ್ದಾಳಿ ಮಾಡಿದರು. ಆಗ ಸಚಿವರು ವಿಷಯಾಂತರ ಮಾಡಬೇಡಿ ಎಂದು ಸಮಾಧಾನ ಮಾಡಿದರು. - - - - 21ಕೆಪಿಆರ್‌ಸಿಆರ್03: ರಾಯಚೂರು ಸಮೀಪದ ಸಾಥ್ ಮೈಲ್‌ನಲ್ಲಿ ಟಿಎಲ್‌ಬಿಸಿ ಕೆಳಭಾಗದ ರೈತರು ನಡೆಸುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.