ರಂಭಾಪುರಿ ಬೆಳಕು ಎಂಬ ಪತ್ರಿಕೆ ಬಿಡುಗಡೆಗೊಳಿಸಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾರ ಪಾಟೀಲ್ ಮಾನವ ಧರ್ಮ ಮಂಟಪ ಕನ್ನಡಪ್ರಭ ವಾರ್ತೆ ಲಿಂಗಸುಗೂರು ಮಾನವ ಧರ್ಮದ ಬೆಳವಣಿಗೆಗೆ ವಚನ ಸಾಹಿತ್ಯ ಮತ್ತು ಸಿದ್ಧಾಂತ ಶಿಖಾಮಣಿಯಲ್ಲಿನ ತತ್ವ ಸಿದ್ಧಾಂತಗಳ ಪಾಲನೆ ಮಾಡಬೇಕೆಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಾಲ್ಯಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಕರೆ ನೀಡಿದರು. ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶರನ್ನವರಾತ್ರಿ ನಿಮಿತ್ತ ಮಾನವ ಧರ್ಮ ಮಂಟಪದಲ್ಲಿ ಹಮ್ಮಿಕೊಂಡಿರುವ ರಂಭಾಪುರಿ ಜಗದ್ಗುರುಗಳ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ಬೆಳಕು ಎಂಬ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ವೀರಶೈವ ತತ್ವ ಸಿದ್ಧಾಂತಗಳು ಹಾಗೂ ಧರ್ಮದ ಆಚರಣೆಗಳನ್ನು ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ರಂಭಾಪುರಿ ಜಗದ್ಗುರುಗಳು ಕೈಗೊಂಡಿರುವ ಧರ್ಮ ರಕ್ಷಣೆ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು. ಕಾಯಕ ತತ್ವದ ಪಾಲನೆ ಜೊತೆಗೆ ಅಕ್ಷರದ ಜ್ಞಾನ ನೀಡಿದ ವೀರಶೈವ ಲಿಂಗಾಯತ ಮಠ-ಮಾನ್ಯಗಳು ನಾಡು ಸುಭಿಕ್ಷವಾಗಲು ಶ್ರಮಿಸಿವೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರುತ್ತಾ ಜನರಿಗೆ ಧರ್ಮ, ಆಧ್ಯಾತ್ಮದ ಅರಿವು ಮೂಡಿಸಿ ಸಮಾಜದ ಅಭಿವೃದ್ಧಿಯ ಪರಿವರ್ತನೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು. ವೀರಶೈವ ಧರ್ಮವು ವಿಶಿಷ್ಟ ಧರ್ಮವಾಗಿದೆ. ಇದರ ತತ್ವಗಳು, ಸಂಸ್ಕೃತಿ, ಆಚರಗಳು ಅತ್ಯಂತ ಸರಳವಾಗಿವೆ. ಲಿಂಗಾಷ್ಟಕ, ಲಿಂಗಾರ್ಚನೆ ರೀತಿ-ನೀತಿಗಳು, ಪದ್ಧತಿಗಳಿಗೆ ವೈಜ್ಞಾನಿಕ ದೃಷ್ಟಿಕೋನ ಇದೆ. ಅದರ ಪಾಲನೆ ವಿಸ್ತಾರ ಮಾಡಬೇಕಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ರಂಭಾಪುರಿ ಜಗದ್ಗುರು ಡಾ.ವೀರ ಸೋಮೇಶ್ವರ ಶಿವಾಚಾರ್ಯ, ರೇವಣ್ಣಸಿದ್ದ ಶ್ರೀ, ರೇಣುಕಾಚಾರ್ಯ ಶ್ರೀ, ವೀರಸಂಗಮೇಶ್ವರ ಶ್ರೀ, ವರರುದ್ರಮುನಿ ಶ್ರೀ, ಅಭಿನವ ಗಜದಂಡ ಶ್ರೀ, ರಾಜಾ ಸೋಮನಾಥ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಬಸನಗೌಡ ತುರವಿಹಾಳ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಸೇರಿದಂತೆ ಇದ್ದರು. - - - - 21ಕೆಪಿಎಲ್‌ಎನ್‌ಜಿ01 : ಲಿಂಗಸುಗೂರಲ್ಲಿ ಜರುಗಿದ ಶರನ್ನವರಾತ್ರಿ ಧರ್ಮ ಸಮ್ಮೇಳನದ ಏಳನೇ ದಿನದ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ‘ರಂಭಾಪುರಿ ಬೆಳಗು’ ಮಾಸ ಪತ್ರಿಕೆ ಬಿಡುಗಡೆಗೊಳಿಸಿದರು.