ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಶಾಸಕ ಡಿ. ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರ ಉಪಸ್ಥಿತಿಯಲ್ಲಿ ನಡೆಯುವ ಜನ ಸ್ಪಂದನಾ ಸಭೆಗೆ ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸುವರು ಎಂದು ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ಆರಂಭವಾಗಲಿರುವ ಜನ ಸಂಪರ್ಕ ಸಭೆಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನ ವ್ಯಾಪ್ತಿಯ ನಾಗರೀಕರ ಸಾರ್ವಜನಿಕ ಅಹವಾಲು ಆಲಿಸಲಿದ್ದು, ಸರ್ವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಜನ ಸಂಪರ್ಕ ಸಭೆಯಲ್ಲಿ ನಾಗರಿಕರಿಂದ ಬರುವ ಅರ್ಜಿಗಳು ಮತ್ತು ಮನವಿ ಪತ್ರಗಳನ್ನು ಸ್ವೀಕರಿಸಿ ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಿದ್ದು, ಈ ವಿಚಾರವನ್ನು ಗ್ರಾಪಂಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದರ ಜತೆಗೆ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಿಂದ ನಮಗೆ ಆದೇಶ ಬಂದಿದ್ದು, ಜನರು ಈ ಸಮಯದಲ್ಲಿ ನಮಗೆ ಸಹಕಾರ ನೀಡಬೇಕೆಂದರು.
ಸರ್ಕಾರದ ಆದೇಶದ ಮೇರೆಗೆ ಈಗಾಗಲೇ ನಾವು ಪ್ರತಿ ಗ್ರಾಮದಲ್ಲಿಯೂ ಕಾಳಜಿ ಕೇಂದ್ರಗಳನ್ನು ಗುರುತು ಮಾಡಿದ್ದು, ಇದರೊಂದಿಗೆ ಮಳೆ ಹಾನಿಯಿಂದ ತೊಂದರೆಗೆ ಒಳಗಾದವರ ರಕ್ಷಣೆಗೆ ಕ್ರಮ ಕೈಗೊಳ್ಳಲು ಸನ್ನದ್ದರಾಗಿದ್ದೇವೆಂದರು.