ಕನ್ನಡಪ್ರಭ ವಾರ್ತೆ ಮಂಗಳೂರು
ಜಾತ್ಯತೀತತೆ, ಸಂವಿಧಾನ ತತ್ವ, ಸಾಮಾಜಿಕ ಕಾಳಜಿಯೊಂದಿಗೆ ಸಾಂಸ್ಕೃತಿಕ, ಭಾಷಿಕ, ಸಾಮಾಜಿಕ ಹೋರಾಟವನ್ನು ಯುವ ಪೀಳಿಗೆಗೆ ಪರಿಚಯಿಸುವ ಹೊಸ ಅಭಿವ್ಯಕ್ತಿ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಜವಾಬ್ದಾರಿಯನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಮತ್ತು ಅಖಿಲ ಭಾರತ ಕೊಂಕಣಿ ಯೂತ್ ಲೀಗ್ ಸ್ಥಾಪನೆ ಇಂದಿನ ಅಗತ್ಯ ಎಂದು ಸಾಹಿತಿ ಹೇಮಾ ನಾಯಕ್ ಹೇಳಿದರು.ಅವರು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ಬಸ್ತಿವಾಮನ ಶೆಣೈ ವೇದಿಕೆಯಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ‘ಒಂದು ದೇಶ ಒಂದು ಸಂವಿಧಾನ’ ನಮ್ಮ ಏಕತೆಯ ಸಂಕೇತವಾಗಿತ್ತು. ಆದರೆ ಇಂದು ಎಲ್ಲರೂ ಒಂದಾಗಿ ಹೊಸ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ರೂಪಿಸಲು ಒಂದು ದೇಶ ಒಂದು ಭಾಷೆ ಹೇರುವ ಪ್ರಯತ್ನ ನಡೆದಿದೆ ಎಂದವರು ಹೇಳಿದರು.ಮಾತೃಭಾಷೆಯ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅನನ್ಯವಾಗಿದೆ. ಜಿ 20 ಶೃಂಗವೂ ಮಹಿಳಾ ನಾಯಕತ್ವದಲ್ಲಿ ಅಭಿವೃದ್ಧಿಯ ಚಿಂತನೆ ಮಾಡಿದೆ. ಆದರೆ ಮಾತೃಭಾಷೆ ಸಂಸ್ಕೃತಿಯ ವಿಕಾಸದಲ್ಲಿ ಮಹಿಳೆಯರ ಕೊಡುಗೆಯನ್ನೇ ನಿರ್ಲಕ್ಷಿಸಿಕೊಂಡು ಬರಲಾಗಿದೆ. ಸಾಂವಿಧಾನಿಕವಾಗಿ ನೀಡಲಾಗಿರುವ ಸಮಾನ ಅವಕಾಶಗಳನ್ನೂ ಮೀಸಲಾತಿಯ ರೂಪದಲ್ಲಿ ಜಾರಿಗೊಳಿಸುವುದಕ್ಕೂ ಹಲವು ಅಡ್ಡಿ ಆತಂಕಗಳಿವೆ ಎನ್ನುವುದು ವಿಷಾದನೀಯ ಎಂದರು.
ಸಾಹಿತಿಗಳು ಮುಕ್ತ ಅಭಿವ್ಯಕ್ತಿಗೆ ದನಿಯಾಗಬೇಕು, ಭಾಷಿಕ ಚಳವಳಿಗಳು ಮತೀಯವಾಗದಂತೆ ಎಚ್ಚರ ವಹಿಸಬೇಕು.ಭಾಷೆ ಕೇವಲ ಸಾಂಸ್ಕೃತಿಕ ವಿಷಯಕ್ಕೆ ಸೀಮಿತವಾಗದೇ ಹಕ್ಕು ತಲುಪಿಸುವ ಸಾಧನವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಸಮ್ಮೇಳನ ಉದ್ಘಾಟಿಸಿದ ಕವಿ, ಕತೆಗಾರ ಉದಯನ್ ವಾಜಪೇಯಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ನಮ್ಮ ದೇಶವನ್ನು ಒಂದಾಗಿಸಿದೆ. ಭಾಷೆಗಳಿಂದ ಒಗ್ಗೂಡಿದ್ದೇವೆ, ಸಣ್ಣ ಸಮುದಾಯವಾದರೂ ಕೊಂಕಣಿಯಲ್ಲಿ ಭಾಷೆಯ ಉತ್ಕರ್ಷ, ಸೃಜನಶೀಲತೆ ಕಾಯ್ದುಕೊಳ್ಳುವಲ್ಲಿ ಉತ್ಸಾಹ ತೋರಿಸಿದೆ. ಲೇಖಕರ ಕರ್ತವ್ಯ ಬರೇ ಅಭಿವ್ಯಕ್ತಿಯಲ್ಲ, ಅದು ಓದುಗರಲ್ಲಿ ನೈತಿಕತೆ, ಸೌಂದರ್ಯ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಾಗಿದೆ ಎಂದರು.ಅಖಿಲ ಭಾರತ ಕೊಂಕಣಿ ಸಾಹಿತ್ಯ ಪರಿಷತ್ ಅಧ್ಯಕ್ಷ ಅರುಣ್ ಉಭಯಕರ್ ಮಾತನಾಡಿ, ಕಳೆದ 84 ವರ್ಷಗಳಲ್ಲಿ ಪರಿಷತ್ ಮಾಡಿದ ಸೇವೆ, ಸಾಧನೆಯ ಪರಿಣಾಮವಾಗಿ ಕೊಂಕಣಿ ಭಾಷೆ ಮತ್ತು ಭಾಷಿಗರ ಸ್ಥಾನಮಾನ ಬೆಳವಣಿಗೆಯಿಂದ ಹೆಮ್ಮೆ ಅನಿಸಿದೆ ಎಂದರು.
ಈ ಸಂದರ್ಭ ವಿವಿಧ ಲೇಖಕರ 11 ಕೃತಿಗಳು ಹಾಗೂ ಸಮ್ಮೇಳನದ ಸ್ಮರಣ ಸಂಚಿಕೆ ‘ಬಿಂಗಾರು’ ವನ್ನು ಲೋಕಾರ್ಪಣೆಗೊಳಿಸಲಾಯಿತು. ಗೋವಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷ , ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಸಮ್ಮೇಳನ ಕಾರ್ಯಾಧ್ಯಕ್ಷ ಹೆನ್ರಿ ಮೆಂಡೋನ್ಸಾ ಇದ್ದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್ ಡಿ ಸೋಜಾ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗೌರೀಶ್ ರೇವರ್ಣಕರ್ ವಂದಿಸಿದರು. ಪ್ರಾಧ್ಯಾಪಕ ಅನಂತ ಅಗ್ನಿ ನಿರೂಪಿಸಿದರು.ಮೂಲತಃ ಗೋವಾದ ಆಗಸ್ಟಿನ್ ಅಲ್ಮೇಡಾ ಅವರು ಗಾಂಧಿ ವೇಷಧಾರಿಯಾಗಿ ಸಮ್ಮೇಳನಾಂಗಣದಲ್ಲಿ ಗಮನ ಸೆಳೆದರು. ಈ ಸಮ್ಮೇಳನ ನ.5ರಂದು ಸಂಜೆ 3.30ಕ್ಕೆ ಸಮಾರೋಪಗೊಳ್ಳಲಿದೆ.