ಮಾನವೀಯತೆ ಮರೆದ ಪೊಲೀಸರು ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರು ಫೈರಿಂಗ್‌ನಲ್ಲಿ ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ ಆತನ ಆರೈಕೆಯನ್ನು ಪೊಲೀಸರೇ ನೋಡಿಕೊಳ್ಳುತ್ತಿರುವ ಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರಿನಲ್ಲಿ ಪೊಲೀಸರು ಚಿಕಿತ್ಸೆ ನೀಡಿ, ಆರೈಕೆ ಮಾಡಿದ್ದರೆ ಈ ವಿಷಯ ಸಹಜ ಅನಿಸುತ್ತಿತ್ತು. ಆದರೆ, ಸುಮಾರು 225 ಕಿ.ಮೀ. ದೂರದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಆರೈಕೆಯಲ್ಲಿ ಹಗಲಿರುಳು ಪೊಲೀಸರು ತೊಡಗಿದ್ದಾರೆ. ಬಾಳೆಹೊನ್ನೂರು ಸಮೀಪದ ಮಾಗಲು ಗ್ರಾಮದ ಎಂ.ಕೆ. ಪೂರ್ಣೇಶ್ ಮೇಲೆ ಮರಣಾಂತಿಕ ಹಲ್ಲೆ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು ಆತ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ, ಆತ ಮನೆಯಲ್ಲಿರುವ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆ ಸಬ್ ಇನ್ಸ್‌ಸ್ಪೆಕ್ಟರ್ ದಿಲೀಪ್‌ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಪೂರ್ಣೇಶ್ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಸಬ್ ಇನ್ಸ್‌ಸ್ಪೆಕ್ಟರ್ ನಡೆಸಿದ ಪೈರಿಂಗ್‌ನಲ್ಲಿ ಪೂರ್ಣೇಶ್ ಮಣ್ಕಾಲಿಗೆ ಗುಂಡು ತಗುಲಿದ್ದು, ಕೂಡಲೇ ಪೊಲೀಸರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು. ಮಣ್ಕಾಲಿನ ರಕ್ತನಾಳಕ್ಕೆ ಪೆಟ್ಟಾಗಿದ್ದರಿಂದ ಅವರನ್ನು ಜಯದೇವ ಆಸ್ಪತ್ರೆಗೆ ಸೇರಿಸಿ ಶಸ್ತ್ರ ಚಿಕಿತ್ಸೆ ಮಾಡಿಸ ಬೇಕೆಂದು ಆಸ್ಪತ್ರೆ ವೈದ್ಯರು ಹೇಳಿದ್ದರಿಂದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರು, ಇನ್ಸ್‌ಸ್ಪೆಕ್ಟರ್, ಸಬ್ ಇನ್ಸ್‌ಸ್ಪೆಕ್ಟರ್ ದರ್ಜೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ನಾಲ್ವರು ಪೊಲೀಸರೊಂದಿಗೆ ಜಯದೇವ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಅಗತ್ಯತೆ ಇದ್ದರಿಂದ ಪೂರ್ಣೇಶ್ ಮನೆಗೆ ತಿಳಿಸಲಾಗಿದ್ದು, ಅವರು ಸ್ಪಂಧಿಸದೆ ಇದ್ದರಿಂದ ಪೊಲೀಸರೇ ಒಪ್ಪಿಗೆ ಪತ್ರ ಬರೆದುಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಪೂರ್ಣೇಶ್ ಸದ್ಯ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ಸಂಬಂಧಿಕರು ಅಥವಾ ಮನೆಯವರು ಯಾರೂ ಇಲ್ಲ. ಬದಲಿಗೆ ಓರ್ವ ಎಸ್‌ಐ, ನಾಲ್ಕು ಜನ ಸಿಬ್ಬಂದಿ ಇದ್ದಾರೆ. ಓರ್ವ ಸಿಬ್ಬಂದಿ ಡೇ ಆ್ಯಂಡ್ ನೈಟ್ ಪೂರ್ಣೇಶ್ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಇದುವೇ, ಪೊಲೀಸ್ ಇಲಾಖೆಯ ಮಾನವೀಯತೆ. 4 ಕೆಸಿಕೆಎಂ 6 ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೂರ್ಣೇಶ್ ನೊಂದಿಗೆ ಪೊಲೀಸ್ ಸಿಬ್ಬಂದಿ.