ದತ್ತಮಾಲಾ ಅಭಿಯಾನ: ಇಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ

KannadaprabhaNewsNetwork |  
Published : Nov 04, 2023, 11:45 PM IST
ದತ್ತಮಾಲಾ ಅಭಿಯಾನದ ಅಂಗವಾಗಿ ದತ್ತಮಾಲೆ ಧರಿಸಿರುವ ದತ್ತಭಕ್ತರು ಚಿಕ್ಕಮಗಳೂರಿನಲ್ಲಿ ಶನಿವಾರ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು. | Kannada Prabha

ಸಾರಾಂಶ

ದತ್ತಮಾಲಾ ಅಭಿಯಾನ: ಇಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ

ರಾಜ್ಯದ ವಿವಿಧೆಡೆಯಿಂದ ದತ್ತಭಕ್ತರ ಆಗಮನ, ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಶ್ರೀರಾಮ ಸೇನೆ ಆಯೋಜನೆ ಮಾಡಿರುವ ದತ್ತಮಾಲಾ ಅಭಿಯಾನದ ಅಂಗವಾಗಿ ಭಾನುವಾರ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ದತ್ತಪೀಠದಲ್ಲಿ ಪಾದುಕೆಗಳ ದರ್ಶನ ಹಾಗೂ ವಿಶೇಷ ಪೂಜೆ ನಡೆಯಲಿದೆ. ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದೆ. ಇದರ ಜತೆಗೆ ಸೂಕ್ಷ್ಮ ಸ್ಥಳ ಹಾಗೂ ಶೋಭಾಯಾತ್ರೆ, ಧಾರ್ಮಿಕ ಸಭೆ ನಡೆಯುವ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾಗಳನ್ನು ಅಳವಡಿಸಿ, ದ್ರೋಣ್ ಕ್ಯಾಮರಾಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ. 20 ನೇ ವರ್ಷದ ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಅ.30 ರಂದು ದತ್ತಮಾಲೆ ಧರಿಸಿದರು. ವ್ರತ ಆಚರಿಸಿದ ದತ್ತಮಾಲಾಧಾರಿಗಳು ಶನಿವಾರ ಚಿಕ್ಕಮಗಳೂರಿನ ಕೆಲವು ಮನೆಗಳಿಗೆ ತೆರಳಿ ಪಡಿ ಸಂಗ್ರಹ ಮಾಡಿದರು. ಇದೇ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಇಂದು ರಾಜ್ಯಾದ್ಯಂತ ದತ್ತಭಕ್ತರು ಪಡಿ ಸಂಗ್ರಹಿಸಿದ್ದಾರೆ. ಇದನ್ನು ದತ್ತಪೀಠದಲ್ಲಿ ಸಮರ್ಪಿಸಲಾಗುವುದು ಎಂದರು. ಶೋಭಾಯಾತ್ರೆ: ನಗರದ ಶಂಕರಮಠದ ಮುಂಭಾಗದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಸಂಘಟನೆ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಸಭೆ ನಂತರ ಬಸವನಹಳ್ಳಿ ಮುಖ್ಯ ರಸ್ತೆ ಮಾರ್ಗವಾಗಿ ಶೋಭಾಯಾತ್ರೆ ಹೊರಡಲಿದೆ. ಈ ಯಾತ್ರೆ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತ ತಲುಪಲಿದೆ. ನಂತರ ದತ್ತ ಮಾಲಾಧಾರಿಗಳು ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದ್ದಾರೆ. ಇಲ್ಲಿ ಸರದಿ ಸಾಲಿನಲ್ಲಿ ದತ್ತಪೀಠದ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಮಾಡಲಿದ್ದಾರೆ. ಬಳಿಕ ದತ್ತಪೀಠದ ಹೊರ ವಲಯದಲ್ಲಿ ನಡೆಯಲಿರುವ ದತ್ತ ವ್ರತ ಹಾಗೂ ದತ್ತ ಹೋಮದಲ್ಲಿ ಪಾಲ್ಗೊಂಡು ನಂತರ ತಮ್ಮ ಊರುಗಳಿಗೆ ವಾಪಸ್ ತೆರಳಲಿದ್ದಾರೆ. --- ಬಾಕ್ಸ್ ------- ಎಲ್ಲಲ್ಲಿ ಸಂಚಾರ ನಿಷೇಧ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ಸಂಚರಿಸುವ ಮಾರ್ಗದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ. ಬಸವನಹಳ್ಳಿ ಮುಖ್ಯ ರಸ್ತೆ (ಕೆಇಬಿ ಈದ್ಗಾ ಸರ್ಕಲ್‌ನಿಂದ ಹನುಮಂತಪ್ಪ ವೃತ್ತದವರೆಗೆ), ಎಂ.ಜಿ. ರಸ್ತೆ (ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವೃತ್ತದವರೆಗೆ) ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗುವ ಸಾರ್ವಜನಿಕ ವಾಹನಗಳು ರತ್ನಗಿರಿ ರಸ್ತೆ (ಆರ್.ಜಿ. ರಸ್ತೆ)ಯಲ್ಲಿ ಎಂ.ಜಿ. ರಸ್ತೆಯಲ್ಲಿ ಸಾಗುವ ವಾಹನಗಳು ಐ.ಜಿ. ರಸ್ತೆ ಮತ್ತು ಅಂಬೇಡ್ಕರ್ ರಸ್ತೆ (ಮಾರ್ಕೆಟ್ ರಸ್ತೆಯಲ್ಲಿ) ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 4 ಕೆಸಿಕೆಎಂ 3 ದತ್ತಮಾಲಾ ಅಭಿಯಾನದ ಅಂಗವಾಗಿ ದತ್ತಮಾಲೆ ಧರಿಸಿರುವ ದತ್ತಭಕ್ತರು ಚಿಕ್ಕಮಗಳೂರಿನಲ್ಲಿ ಶನಿವಾರ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ