ಅಕ್ಷರ ದಾಸೋಹ ಅಧಿಕಾರಿ ಅಮಾನತಿಗೆ ಒತ್ತಾಯ

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ಕನಗಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರನ್ನು ಶಿಸ್ತು ಕ್ರಮದಡಿ ಅಮಾನತುಗೊಳಿಸಿದ ನಂತರ, ಅಕ್ಷರ ದಾಸೋಹ, ಹುಣಸಗಿ ಕ್ಲಸ್ಟರ್ ಸಿ.ಆರ್.ಪಿ.ಯನ್ನು ಅಮಾನತುಗೊಳಿಸಲು ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಮಾದಿಗ ದಂಡೋರ ಸಮಿತಿ ಸದಸ್ಯರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ಕನಗಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರನ್ನು ಶಿಸ್ತು ಕ್ರಮದಡಿ ಅಮಾನತುಗೊಳಿಸಿದ ನಂತರ, ಅಕ್ಷರ ದಾಸೋಹ, ಹುಣಸಗಿ ಕ್ಲಸ್ಟರ್ ಸಿ.ಆರ್.ಪಿ.ಯನ್ನು ಅಮಾನತುಗೊಳಿಸಲು ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಮಾದಿಗ ದಂಡೋರ ಸಮಿತಿ ಸದಸ್ಯರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾದಿಗ ದಂಡೋರ ಸಮಿತಿಯ ತಾಲೂಕು ಅಧ್ಯಕ್ಷ ಮಾನಪ್ಪ ಕಟ್ಟಿಮನಿ ಮಾತನಾಡಿ, ಕನಗಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಶ್ರೀಶೈಲ ವದರಿ ಅವರು, ಶಾಲೆಯ ಜವಾಬ್ದಾರಿ ನಿರ್ವಹಿಸಲು, ಬಿಸಿಯೂಟದ ಸಾಮಗ್ರಿ ಖರೀದಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದನ್ನು ಅಧಿಕಾರಿಗಳ ಗಮನಕ್ಕೆ ತಂದ್ದಿದರು. ಇದರಿಂದ ಮಕ್ಕಳಿಗೆ ಬಿಸಿಯೂಟ ನೀಡಲು ಸಾಧ್ಯವಾಗುತ್ತಿಲ್ಲವೆಂದು ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳದೆ ಮಕ್ಕಳಿಗೆ ಬಿಸಿಯೂಟ ನೀಡಿಲ್ಲ, ಸರ್ಕಾರದ ದುಡ್ಡು ಬಳಸಿಕೊಂಡಿದ್ದಾರೆ ಎಂದು ಅವರನ್ನು ಶಿಸ್ತು ಕ್ರಮದಡಿ ಅಮಾನತುಗೊಳಿಸಿರುವುದು ಖಂಡನಿಯ ಎಂದರು.

ಸಿದ್ದಣ್ಣ ಮೇಲಿನಮನಿ ಮಾತನಾಡಿ, ಒಂದು ವಾರದಿಂದ ಮಕ್ಕಳಿಗೆ ಬಿಸಿಯೂಟ ನೀಡುತ್ತಿಲ್ಲವೆಂದು ಅಕ್ಷರ ದಾಸೋಹ, ಹುಣಸಗಿ ಕ್ಲಸ್ಟರ್ ಸಿ.ಆರ್.ಪಿ.ಗೆ ಮಾಹಿತಿ ಇದ್ದರೂ ಸಮಸ್ಯೆ ಬಗ್ಗೆ ಕಿವಿಗೊಡದೆ ಕರ್ತವ್ಯ ಲೋಪವೆಸಗಿರುವ ಅಧಿಕಾರಿ ಬಿಟ್ಟು ಅಮಾಯಕ ದಲಿತ ಶಿಕ್ಷಕರನ್ನು ಗುರಿ ಮಾಡಿ ಅಮಾನತುಗೊಳಿಸಿ ಬಿಸಿಯೂಟ ಅಧಿಕಾರಿ, ಹಣಸಗಿ ಕ್ಲಸ್ಟರ್ ಸಿ.ಆರ್.ಪಿ. ರಕ್ಷಿಸುವಲ್ಲಿ ಬಿಇಒ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಖಂಡನಿಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಅಕ್ಷರ ದಾಸೋಹ ಅಧಿಕಾರಿ, ಸಿ.ಆರ್.ಪಿ.ರನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಮಿತಿಯ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಿ, ಸೋಮಶೇಖರ ಆನೇಕಿ, ತಿಪ್ಪಣ್ಣ ಗೋಗಿ, ತಿಪ್ಪಣ್ಣ ಮೇಲಿನಮನಿ ಇದ್ದರು.

Share this article