ಮಂಗಳೂರಿನಲ್ಲಿ ಪ್ರವಾಸಿ ತಾಣ ನಿರ್ಮಾಣಕ್ಕೆ 50 ಕೋಟಿ ರು.: ಬೈರತಿ

KannadaprabhaNewsNetwork |  
Published : Nov 25, 2023, 01:15 AM IST
19ನೇ ಮಾಸ್ಟರ್ಸ್‌ ಈಜು ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡುತ್ತಿರುವ ಸಚಿವ ಬೈರತಿ ಸುರೇಶ್‌. | Kannada Prabha

ಸಾರಾಂಶ

ಮಂಗಳೂರಿನಲ್ಲಿ ಪ್ರವಾಸಿ ತಾಣಗಳ ನಿರ್ಮಾಣಕ್ಕೆ ೫೦ ಕೋಟಿ ರು. : ಸಚಿವ ಬೈರತಿ ಸುರೇಶ್ಶ್‌, ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಉತ್ಕೃಷ್ಟ ದರ್ಜೆಯ ಪ್ರವಾಸಿ ತಾಣ ನಿರ್ಮಾಣ ಮಾಡಲು 50 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಘೋಷಣೆ ಮಾಡಿದ್ದಾರೆ.ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ನಗರದ ಎಮ್ಮೆಕೆರೆಯ 2 ಎಕರೆ ಪ್ರದೇಶದಲ್ಲಿ 24.94 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ಒಲಿಂಪಿಕ್‌ ದರ್ಜೆಯ ಈಜುಕೊಳವನ್ನು ಶುಕ್ರವಾರ ಉದ್ಘಾಟಿಸಿ, 19ನೇ ರಾಷ್ಟ್ರೀಯ ಮಾಸ್ಟರ್ಸ್‌ ಚಾಂಪಿಯನ್‌ಶಿಪ್‌ ಈಜು ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಮಂಗಳೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಮನವಿ ಮಾಡಿದ್ದು, ಅದರಂತೆ ಇಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿಕೊಟ್ಟರೆ ನನ್ನ ಜಿಲ್ಲೆಗೆ ಹೋಗಬೇಕಾದ 50 ಕೋಟಿ ರು. ವಿಶೇಷ ಅನುದಾನವನ್ನು ಮಂಗಳೂರಿಗೆ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಿ ಮಂಗಳೂರನ್ನು ಆಕರ್ಷಣೀಯ ತಾಣವನ್ನಾಗಿ ಮಾಡೋಣ ಎಂದು ಹೇಳಿದರು.3 ಕಾಮಗಾರಿಗಳಿಗೆ ಅನುಮತಿ ಕೊಡಿಸಿ:ಮಂಗಳೂರು ಸ್ಮಾರ್ಟ್‌ ಸಿಟಿ ವತಿಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಇದುವರೆಗೆ 749 ಕೋಟಿ ರು. ಅನುದಾನ ಖರ್ಚಾಗಿದೆ. ಪ್ರಸ್ತುತ 24 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಮೂರು ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ಸಿಗಬೇಕಿದೆ. ಸಂಸದರು ಈ ಕುರಿತು ಗಮನ ಹರಿಸಿ ಅನುಮತಿ ಕೊಡಿಸಿದರೆ ಸ್ಮಾರ್ಟ್ ಸಿಟಿ ಕೆಲಸ ಸಂಪೂರ್ಣ ಆಗಲಿದೆ ಎಂದು ಬೈರತಿ ಸುರೇಶ್‌ ತಿಳಿಸಿದರು.ಅಭಿವೃದ್ಧಿಯಲ್ಲಿ ಪಕ್ಷ ರಾಜಕಾರಣ ಬೇಡ: ಮಂಗಳೂರು ಮಹಾನಗರ ಪಾಲಿಕೆಗೆ ಈಗಾಗಲೇ 25 ಕೋಟಿ ರು. ಅನುದಾನ ನೀಡಿದ್ದೇನೆ. ಅದನ್ನು ಸದುಪಯೋಗ ಮಾಡಬೇಕು. ಯಾವ ಪಕ್ಷವೇ ಇರಲಿ, ಜನರ ಹಣ ಜನರ ಅನುಕೂಲಕ್ಕಾಗಿಯೇ ವಿನಿಯೋಗವಾಗಬೇಕು. ಪಕ್ಷ ರಾಜಕಾರಣ ಒತ್ತಟ್ಟಿಗಿಟ್ಟು ಜನಸೇವಕರಾಗಿ ಕೆಲಸ ಮಾಡೋಣ. ಪಾಲಿಕೆಯಲ್ಲಿ ಹಾಗೂ ಶಾಸಕರು ಯಾವುದೇ ಪಕ್ಷದವರು ಇದ್ದರೂ ಅಭಿವೃದ್ಧಿಗೆ ತೊಡಕಾಗಬಾರದು ಎನ್ನುವುದು ನಮ್ಮ ಉದ್ದೇಶ ಎಂದ ಸಚಿವರು, ಯೋಜನಾ ಸಚಿವ ಸ್ಥಾನ ನನಗೆ ಸಿಕ್ಕಿರುವುದರಿಂದ ಮಂಗಳೂರಿಗೆ ಹೊಸ ಯೋಜನೆ ತರಲು ಬದ್ಧ ಎಂದು ಭರವಸೆ ನೀಡಿದರು.ಎಮ್ಮೆಕೆರೆಯಲ್ಲಿ ನಿರ್ಮಾಣವಾದಂಥ ಗುಣಮಟ್ಟದ ಈಜುಕೊಳ ಬೆಂಗಳೂರಲ್ಲಿ ಕೂಡ ಇಲ್ಲ. ಇದರ ಸದುಪಯೋಗವನ್ನು ಇಲ್ಲಿನ ಮಕ್ಕಳು, ಜನರು ಪಡೆದುಕೊಂಡು ಈಜುಸ್ಪರ್ಧೆಯಲ್ಲಿ ನಾಡಿಗೆ ಕೀರ್ತಿ ತರುವಂತಾಗಬೇಕು ಎಂದು ಬೈರತಿ ಸುರೇಶ್‌ ಆಶಿಸಿದರು.ನಂತೂರು ಸಮಸ್ಯೆ ನೀಗಿಸಿ: ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್ ಮಾತನಾಡಿ, ಉಳ್ಳಾಲ- ಮಂಗಳೂರು ನಡುವೆ ಸಂಚಾರಕ್ಕೆ ಜಪ್ಪು ಕುಡ್ಪಾಡಿ ಗೇಟಲ್ಲಿ 20 ನಿಮಿಷ ಕ್ಯೂ ನಿಲ್ಲಬೇಕಿತ್ತು, ಈ ಸಮಸ್ಯೆ ನೀಗಿಸಲು ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ಇದೇ ರೀತಿ ನಂತೂರಲ್ಲೂ ವಾಹನ ದಟ್ಟಣೆ ಸಮಸ್ಯೆ ನೀಗಿಸಲು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮಂಗಳೂರಿನ ಅಭಿವೃದ್ಧಿ ಕನಸು ಸಾಕಾರಗೊಳ್ಳುವುದಿಲ್ಲ ಎಂದು ಸಲಹೆ ನೀಡಿದರು.ಮಂಗಳೂರಿಗೆ ಪ್ರವಾಸಿಗರನ್ನು ಆಕರ್ಷಿಸುವ ಒಂದಾದರೂ ಯೋಜನೆ ಆಗಬೇಕಿದೆ. ಲೈಟ್ ಹೌಸ್‌ನ್ನು ಬೃಹತ್ತಾಗಿ ನಿರ್ಮಾಣ ಮಾಡಿ, ಅಲ್ಲಿಂದಲೇ ಇಡೀ ಮಂಗಳೂರು ಕಾಣುವಂತೆ ವ್ಯವಸ್ಥೆ ಮಾಡಬೇಕಿದೆ. ಅಲ್ಲದೆ, ರಿವಾಲ್ವಿಂಗ್ ಹೊಟೇಲನ್ನೂ ಮಾಡಿದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಎಮ್ಮೆಕೆರೆ ಈಜುಕೊಳವನ್ನು ದೂರದೃಷ್ಟಿಯಿಂದ ಮಾಡಲಾಗಿದೆ. ಇಲ್ಲಿ ಮಿನಿ ಕ್ರೀಡಾಂಗಣಕ್ಕೆ ಸ್ಥಳೀಯರ ಬೇಡಿಕೆಯಂತೆ 2 ಕೋಟಿ ರು. ಅನುದಾನವನ್ನು ಸಚಿವರು ಬಿಡುಗಡೆ ಮಾಡಿದ್ದಾರೆ, ಭವಿಷ್ಯದಲ್ಲಿ ಇದು ಕ್ರೀಡೆಯ ಕೇಂದ್ರ ಸ್ಥಳವಾಗಿ ಮಾರ್ಪಡಲಿದೆ ಎಂದು ಖಾದರ್ ಹೇಳಿದರು.ಕಾಮಗಾರಿಗಳ ತಾಂತ್ರಿಕ ಸಮಸ್ಯೆ ಬಗೆಹರಿಸಿ: ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪ್ರಸ್ತುತ ಉರ್ವದಲ್ಲಿ ಕಬಡ್ಡಿ ಸೇರಿದಂತೆ ಒಳಾಂಗಣ ಕ್ರೀಡಾಂಗಣ ಕೆಲಸ ನಡೆಯುತ್ತಿದೆ. ವಾಟರ್ ಫ್ರಂಟ್ ಯೋಜನೆಗೆ ಉದ್ದೇಶಿಸಲಾಗಿದ್ದು, ಅದಕ್ಕೆ ಗುರುತಿಸಲಾದ ಸರ್ಕಾರಿ ಜಾಗ ಖಾಸಗಿಯವರಿಂದ ಅತಿಕ್ರಮಣ ಆಗಿದೆ. ಸಚಿವರು ಈ ಸಮಸ್ಯೆ ಬಗೆಹರಿಸಬೇಕು. ನಂತೂರಿನಲ್ಲಿ ಫ್ಲೈಓವರ್ ಕಾಮಗಾರಿಗೆ ಟೆಂಡರ್ ಆಗಿದೆ. ಅಲ್ಲದೆ ಜಿಲ್ಲೆಯ ೫ ಹೆದ್ದಾರಿಗಳ ಕೆಲಸ ನಡೆಯುತ್ತಿದ್ದರೂ ಕಾನೂನು ಸಮಸ್ಯೆಗಳಿಂದ ಕೆಲಸ ನಿಂತಿದೆ. ಅರಣ್ಯ ಇಲಾಖೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಪರಿಹರಿಸಬೇಕಿದೆ. ಕೂಳೂರು ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕಾಮಗಾರಿಗಳು ಪೂರ್ಣ ಆದಾಗ ನಗರ ಸುಂದರ ಸುಸಜ್ಜಿತ ಆಗಲಿದೆ ಎಂದು ನಳಿನ್ ಕುಮಾರ್‌ ಹೇಳಿದರು.

ಜಿಲ್ಲೆಯಲ್ಲಿ ಈ ಹಿಂದೆ ಮಂಜೂರಾದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.

ಶಾಸಕ ವೇದವ್ಯಾಸ ಕಾಮತ್, ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿದರು. ಎಂಎಲ್ಸಿ ಮಂಜುನಾಥ ಭಂಡಾರಿ, ಉಪಮೇಯರ್‌ ಸುನೀತಾ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಕಾರ್ಪೊರೇಟರ್‌ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಪಂ ಸಿಇಒ ಆನಂದ್ ಕೆ., ಪಾಲಿಕೆ ಆಯುಕ್ತ ಆನಂದ್‌, ಕಾರ್ಪೊರೇಟರ್‌ಗಳಾದ ದಿವಾಕರ ಪಾಂಡೇಶ್ವರ್, ಅಬ್ದುಲ್ ಲತೀಫ್, ಸ್ವಿಮ್ಮಿಂಗ್ ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ತೇಜೋಮಯ ಇದ್ದರು. ಸ್ಮಾರ್ಟ್ ಸಿಟಿ ಎಂಡಿ ರಾಜು ಸ್ವಾಗತಿಸಿದರು. ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಬಗ್ಗೆ ಅಸಮಾಧಾನಮಂಗಳೂರು ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಬಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಮಾರ್ಟ್ ಸಿಟಿಯ ಸಾವಿರ ಕೋಟಿ ರು. ವೆಚ್ಚದ ಯೋಜನೆಗಳಿಗೆ ಶೇ.50ರಷ್ಟು ಅನುದಾನವನ್ನು ರಾಜ್ಯದಿಂದ ನೀಡಸಲಾಗುತ್ತಿದೆ. ಆದರೆ ಮಂಗಳೂರು ಸ್ಮಾರ್ಟ್ ಸಿಟಿ ಅಡಿಯಲ್ಲಿ ಜನರಿಗೆ ಉಪಯೋಗವಾಗುವ ಹಾಗೂ ಪಾಲಿಕೆಗೆ ಲಾಭ ತರುವಂಥ ಯಾವುದೇ ಆಸ್ತಿಯನ್ನು ನಿರ್ಮಾಣ ಮಾಡಲಾಗಿಲ್ಲ. ಬೇರೆ ಸ್ಮಾರ್ಟ್‌ ಸಿಟಿಗಳಲ್ಲಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್, ಮಾರುಕಟ್ಟೆ ಇತ್ಯಾದಿಗಳನ್ನು ಮಾಡಲಾಗಿದೆ. ಸಾವಿರ ಕೋಟಿ ರು. ಸಣ್ಣ ಮೊತ್ತವೇನಲ್ಲ. ಮಂಗಳೂರು‌ ಆರೋಗ್ಯ, ಶಿಕ್ಷಣ ಕ್ಷೇತ್ರದ ಹಬ್. ಈ ಹಿನ್ನೆಲೆಯಲ್ಲಿ ಏನಾದರೂ ಆಸ್ತಿ ನಿರ್ಮಿಸಬಹುದಿತ್ತು. ಮುಂದಿನ ದಿನಗಳಲ್ಲಿ ಪಾಲಿಕೆಗೂ, ಜನರಿಗೂ ಲಾಭವಾಗುವ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ