ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಭಕ್ತರ ಸಹಕಾರ ಹಾಗೂ ಪ್ರೇರಣೆಯಿಂದ ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹವನ್ನು ನಮ್ಮ ಮಠದಿಂದ ನೀಡಲಾಗುತ್ತದೆ ಎಂದು ತಾಲೂಕಿನ ಅರಸಿಕೇರಿಯ ಕೋಲಶಾಂತೇಶ್ವರಮಠದ ಶಾಂತಂಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.ತಾಲೂಕಿನ ಅರಸೀಕೆರೆ ಗ್ರಾಮದ ಶ್ರೀ ಕೋಲ ಶಾಂತೇಶ್ವರ ಮಠದಲ್ಲಿ 1992-93ನೇ ಸಾಲಿನ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ದೇಣಿಗೆ ನೀಡಿದ ದಾಸೋಹದ ದಿನಸಿಗಳನ್ನು ಮಠಕ್ಕೆ ಸ್ವೀಕರಿಸಿ ಮಾತನಾಡಿದರು.
ಕಳೆದ 20 ವರ್ಷಗಳಿಂದ ಪ್ರತಿ ಅಮಾವಾಸ್ಯೆ ದಿನ ಪ್ರಸಾದ ವ್ಯವಸ್ಥೆ ನಡೆಸುತ್ತ ಬರಲಾಗಿದೆ. ನಂತರ ಕೊಟ್ಟೂರಿನ ಪಾದಯಾತ್ರಿಗಳಿಗೆ ಪ್ರಸಾದದ ವ್ಯವಸ್ಥೆ ಹಾಗೂ ಬಸವ ಜಯಂತಿ ಪ್ರಯುಕ್ತ ಸಾಮೂಹಿಕ ವಿವಾಹ ಆಯೋಜನೆ ಮಾಡುತ್ತಾ ಬಂದಿದ್ದೇವೆ ಎಂದರು.ಐಟಿಐ. ಕಾಲೇಜಿನ 25ನೇ ವರ್ಷದ ರಜತ ಮಹೋತ್ಸವ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದು ಹೇಳಿದರು.ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಮಧ್ಯಾಹ್ನದ ಅನ್ನ ದಾಸೋಹ ಪ್ರಾರಂಭಿಸಿದ್ದೇವೆ. ನಾವು ಅನ್ನ ದಾಸೋಹ ನೀಡುತ್ತಿರುವುದನ್ನು ನೋಡಿ ಹಳೆಯ ವಿದ್ಯಾರ್ಥಿಗಳು ದಾಸೋಹದ ದಿನಸಿಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕಿಸಾನ್ ಸಭಾ ಜಿಲ್ಲಾದ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಅರಸೀಕೆರೆ ಗೆಳೆಯರ ಬಳಗದ ವತಿಯಿಂದ ಶ್ರೀ ಮಠಕ್ಕೆ ದಾಸೋಹ ದಿನಸಿ ನೀಡಿದ್ದೇವೆ, ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು ಶಿಕ್ಷಣ ಕೊಡುವುದರ ಜೊತೆಗೆ ಅನ್ನ ದಾಸೋಹ ಸಹ ನೀಡುತ್ತಿದ್ದಾರೆ ಎಂದರು.ಇಂದಿನ ವಿದ್ಯೆ ವ್ಯಾಪಾರೀಕರಣವಾಗಿದ್ದು, ಮಾರಾಟದ ಮಳಿಗೆಗಳಾಗಿವೆ. ಇಂತಹ ದಿನಗಳಲ್ಲಿ ಶ್ರೀಗಳು ಶಿಕ್ಷಣದ ಜೊತೆಗೆ ಅನ್ನ ದಾಸೋಹ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಅವರು ಶ್ರೀಗಳ ಪ್ರೇರಣೆಯಿಂದ ನಾವೆಲ್ಲ ಹಳೆಯ ವಿದ್ಯಾರ್ಥಿಗಳು ಈದಿನ ಮಠಕ್ಕೆ ದಾಸೋಹದ ದಿನಸಿಗಳನ್ನು ನೀಡಿದೆವು ಎಂದರು. ಅನ್ಯ ಮಠಗಳಂತೆ ಈ ಮಠ ಬೆಳೆಯಬೇಕು, ನಮ್ಮ ಗೆಳೆಯರ ಬಳಗ ಈ ಮಠಕ್ಕೆ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ. ಎಂ. ಸುರೇಶ್, ಸಿದ್ದೇಶ್, ಹುಲುಗಪ್ಪ, ಶಿವಣ್ಣ, ರೇಣುಕಮ್ಮ, ನಿರ್ಮಲಾ, ಸುನೀತಾ ಈ ಸಂದರ್ಭದಲ್ಲಿ ಮಾತನಾಡಿದರು.ಮುಖಂಡರಾದ ಎಂ. ಶಂಕರಪ್ಪ, ಚಂದ್ರಪ್ಪ, ರವಿ, ಭಾಗ್ಯಮ್ಮ, ಕೊಟ್ರಮ್ಮ, ಪ್ರೇಮಾ, ರೇಣುಕಾ, ಪ್ರಾಂಶುಪಾಲರಾದ ಸಿದ್ದೇಶ್, ಉಪನ್ಯಾಸಕರಾದ ಮಂಜುನಾಥ್, ಬೆಟ್ಟಪ್ಪ, ರಮೇಶ್, ಪ್ರಶಾಂತ್, ಕಾರ್ಯದರ್ಶಿ ವೃಷಬೇಂದ್ರಯ್ಯ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.