ಹತ್ತಾರು ವರ್ಷ ಉಳುಮೆ ಮಾಡಿದ ರೈತರಿಗಿಲ್ಲ ಭೂಮಿ

KannadaprabhaNewsNetwork | Published : Jul 3, 2024 12:17 AM

ಸಾರಾಂಶ

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1994ನೇ ಇಸವಿಯಿಂದ 2022ರವರೆಗೆ ಬಗುರ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ 6079 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 1230 ಅರ್ಜಿಗಳು ಸಕ್ರಮವಾಗಿದ್ದರೂ ಕೂಡ ಬಡವರಿಗೆ ಸಾಗುವಳಿ ಚೀಟಿ ನೀಡದೆ ವಿಳಂಬ ಮಾಡಿರುವ ತಹಸೀಲ್ದಾರ್ ಸಿದ್ದೇಶ್ ಕಾರ್ಯವೈಖರಿಯ ಬಗ್ಗೆ ಶಾಸಕ ಬಿ ಸುರೇಶ್ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1994ನೇ ಇಸವಿಯಿಂದ 2022ರವರೆಗೆ ಬಗುರ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ 6079 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 1230 ಅರ್ಜಿಗಳು ಸಕ್ರಮವಾಗಿದ್ದರೂ ಕೂಡ ಬಡವರಿಗೆ ಸಾಗುವಳಿ ಚೀಟಿ ನೀಡದೆ ವಿಳಂಬ ಮಾಡಿರುವ ತಹಸೀಲ್ದಾರ್ ಸಿದ್ದೇಶ್ ಕಾರ್ಯವೈಖರಿಯ ಬಗ್ಗೆ ಶಾಸಕ ಬಿ ಸುರೇಶ್ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ತಾಲೂಕು ಕ್ಷೇತ್ರ ವ್ಯಾಪ್ತಿಯ ಬಗರಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದು, ಬಡವರಿಗೆ ಯಾವುದೇ ಮಾಲೀಕತ್ವ ಇಲ್ಲದೆ ಸರ್ಕಾರಿ ಕಚೇರಿಗಳ ಸುತ್ತಲೂ ಅಲೆಯುವಂತಾಗಿದೆ ಎಂದರು.

ನಿಗದಿತ ಕಾಲಮಿತಿಯಲ್ಲಿ ತಾವು ಸಾಗುವಳಿ ಚೀಟಿ ಹಂಚಿಕೆ ಮಾಡಿದ್ದರೆ ಇಂದು ನಗರದ ಸಮೀಪ 10 ಕಿ.ಮೀ ಅಂತರದಲ್ಲಿರುವವರಿಗೆ ಮಾಲಿಕತ್ವ ಸಿಗುತ್ತಿತ್ತು. ಇಂದು ಸಾಗುವಳಿ ಚೀಟಿಯೂ ಇಲ್ಲ ಭೂಮಿಯು ಇಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಅಧಿಕಾರಿಗಳೇ ನೇರ ಹೊಣೆ ಎಂದು ಕಿಡಿ ಕಾರಿದರು.ಗೋಮಾಳದಲ್ಲಿ ಕೃಷಿ ಮಾಡಿರುವ ರೈತನಿಗೆ ಸಾಗುವಳಿ ಚೀಟಿ ನೀಡಲು ಅವಕಾಶ ಇಲ್ಲ ಎಂದು ತಿಳಿಸಿದ ಗೂಳೂರು ಉಪ ತಹಸಿಲ್ದಾರ್ ಭಾನುಪ್ರಕಾಶ್ ವಿರುದ್ಧ ಕೆಂಡಾಮಂಡಲರಾದರು. ಸರ್ಕಾರಿ ಗೋಮಾಳದಲ್ಲಿ ಯಾವುದೇ ಅಧಿಸೂಚನೆ ಇಲ್ಲದೆ ಕೆಐಎಡಿಬಿಗೆ ಜಮೀನು ನೀಡಲು ನಿಮ್ಮಗಳ ತಕರಾರಿಲ್ಲ. ಅದೇ ರೈತನಿಗೆ ಕೃಷಿ ಜಮೀನು ನೀಡಲು ಮಾತ್ರ ನೂರೆಂಟು ಕಾನೂನುಗಳನ್ನು ತಿಳಿಸುತ್ತೀರಿ ಎಂದರು.

ರೈತರು ಕೃಷಿ ಮಾಡಿರುವ ಬಗುರ ಹುಕುಂ ಸಾಗುವಳಿ ಸಮಿತಿಗೆ ಅರ್ಜಿ ಸಲ್ಲಿಸಿರುವ ಯಾವುದೇ ಒಂದು ಭೂಮಿಯನ್ನು ಕೂಡ ಕೆಐಎಡಿಬಿಗೆ ಹಸ್ತಾಂತರಿಸಲು ಬಿಡುವುದಿಲ್ಲ. ಬಡವರಿಗೆ ಸಹಾಯ ಮಾಡುವಂತೆ ಹಾಗೂ ಕೆಐಎಡಿಬಿಗೆ ಹಸ್ತಾಂತರಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವಂತೆ ತಮ್ಮ ಅಪ್ತ ಸಹಾಯಕರಿಗೆ ಸೂಚಿಸಿದರು.

ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ಸಮಗ್ರವಾಗಿ ಪರಿಶೀಲಿಸಿ, ಅರ್ಹರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಈ ಹಿಂದೆ ವಿತರಣೆ ಮಾಡಿರುವ ಸಾಗುವಳಿ ಚೀಟಿಗಳಿಗೆ ಹೊಸ ಸಂಖ್ಯೆ ನೀಡಲು ಕ್ರಮ ವಹಿಸುವಂತೆ ಸಹಾಯಕ ಭೂ ದಾಖಲೆಗಳ ನಿರ್ದೇಶಕರಿಗೆ ಸೂಚನೆ ನೀಡಿದರು.

ಸರ್ಕಾರಿ ಜಮೀನಿನಲ್ಲಿ 20 -30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಅನ್ಯಾಯವಾಗದಂತೆ‌ ಕ್ರಮ ಕೈಗೊಳ್ಳಬೇಕು. ಅರಣ್ಯ ಭೂಮಿ ಅಲ್ಲದ ಜಮೀನಿನಲ್ಲಿ ಸಾಗುವಳಿ ಮಾಡಿರುವ ರೈತರಿಗೆ ಪಟ್ಟ, ಸಾಗುವಳಿ ನೀಡಬೇಕು. ಈ‌ ಬಗ್ಗೆ ಅರಣ್ಯ ಇಲಾಖೆಯವರು ನಮ್ಮ ಜಾಗ ಎಂದು ವಾದ ಮಾಡುತ್ತಿರುವುದನ್ನು ಕೂಡಲೇ ಇತ್ಯರ್ಥಪಡಿಸುವಂತೆ ಸರ್ಕಾರ ವರದಿ ಸಲ್ಲಿಸುವಂತೆ ಸೂಚಿಸಿದರು.

ತಿರಸ್ಕರಿಸಿರುವ ಸಾಗುವಳಿದಾರರ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು. ಹೆಬ್ಬೂರು ಹಾಗೂ ಬೆಳ್ಳಾವಿ ಕಂದಾಯ ನಿರೀಕ್ಷಕರ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿದ್ದು, ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಸಭೆಗೆ ಗೈರು ಹಾಜರಾಗಿದ್ದ ಕಸಬಾ ವ್ಯಾಪ್ತಿಯ ಎಲ್ಲ ಕಂದಾಯ ನಿರೀಕ್ಷಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲು ಸೂಚಿಸಿದರು.

ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರಾದ ಕರೆರಂಗಯ್ಯ, ಶಿವರಾಜ್, ರೂಪ, ಸದಸ್ಯ ಕಾರ್ಯಮದರ್ಶಿ ತಹಸಿಲ್ದಾರ್ ಸಿದ್ದೇಶ್ ಹಾಗೂ ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.

Share this article