ನರೇಗಲ್ಲ: ನರೇಗಲ್ಲಗೆ ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಮಠದ ಆವರಣದಲ್ಲಿ ಜ.೧೩ರಂದು ಬೆಳಗ್ಗೆ ೧೦ಕ್ಕೆ ಅಕ್ಷರ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಸಾನಿಧ್ಯವನ್ನು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ನಂದವಾಡಗಿ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸುವರು.ಸಮ್ಮುಖವನ್ನು ಕರೇಗುಡ್ಡ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಮಹಾಸ್ವಾಮಿಗಳು, ಹೊಸಪೇಟೆಕೆಂಪಿನಮಠದ ಚಂದ್ರಶೇಖರ ದೇವರುಹಳಿಂಗಳಿ ಕಮರಿಮಠದ ಶಿವಾನಂದ ದೇವರು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ವಹಿಸಲಿದ್ದಾರೆ.
ಸಂಜೆ ೭ಕ್ಕೆ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದ್ದು, ಅಧ್ಯಕ್ಷತೆಯನ್ನು ಖೇಳಗಿ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ಸಮ್ಮುಖವನ್ನು ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಜಿಗೇರಿ ಹಿರೇಮಠದ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ, ಸಂಗನಹಾಲ ಅನ್ನದಾನೇಶ್ವರ ಮಠದ ಶಿವಲಿಂಗ ದೇಶಿಕರು ವಹಿಸಲಿದ್ದಾರೆ ಅಭಿನವ ಬೀಚಿ ಎಂದೇ ಪ್ರತಿತಿ ಹೊಂದಿದ ಗಂಗಾವತಿಯ ಬಿ. ಪ್ರಾಣೇಶ, ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಶಿ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ನೆರವೇರಲಿದೆ. ನ.೧೪ರಂದು ಬೆಳಗ್ಗೆ ೫ರಿಂದ ೭ ಗಂಟೆಯವರೆಗೆ ಪೂಜ್ಯತ್ರಯರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರುತಿ ಜರುಗುವುದು. ಬೆಳಗ್ಗೆ ೧೦ಕ್ಕೆ ಜಂಗಮೋತ್ಸವ ಕಾರ್ಯಕ್ರಮವನ್ನು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು ನೆರವೇರಿಸುವರು. ಸಂಜೆ ೫ಕ್ಕೆ ಶ್ರೀ ಅನ್ನದಾನೇಶ್ವರರ ಮಹಾರಥೋತ್ಸವ ಜರುಗುವದು.
ಸಂಜೆ ೬ ಗಂಟೆಗೆ ಶ್ರೀ ಅನ್ನದಾನೇಶ್ವರ ಕಾರ್ತಿಕೋತ್ಸವ, ಸಂಜೆ ೬.೩೦ಕ್ಕೆ ಶಿವಾನುಭವಗೋಷ್ಠಿ ನಡೆಯಲಿದೆ. ಶಿವಾನುಭವ ಗೋಷ್ಟಿಯ ಸನ್ನಿಧಾನವನ್ನು ಹಾವೇರಿ ಹುಕ್ಕೇರಿ ಮಠದ ಸದಾಶಿವ ದೇವರು ವಹಿಸುವರು.ಅಧ್ಯಕ್ಷತೆಯನ್ನು ಮಣಕವಾಡ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು, ಸಮ್ಮುಖವನ್ನು ದರೂರಿನ ಕೊಟ್ಟೂರು ಮಹಾಸ್ವಾಮಿಗಳು, ಕುರಗೋಡದ ನಿರಂಜನ ದೇಶೀಕರು, ಸೋಮಸಮುದ್ರದ ಸಿದ್ದಲಿಂಗ ದೇಶಿಕರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಬೂದಗುಂಪಾದ ಸಿದ್ದೇಶ್ವರ ದೇಶಿಕರು, ಅಡ್ನೂರಿನ ವಿಶ್ವೇಶ್ವರ ದೇವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಎಂಜಿನಿಯರ್ ಆರ್.ಬಿ. ಪಾಟೀಲ, ಸಿಂಧನೂರಿನ ಡಾ. ಬಿ.ಎನ್. ಪಾಟೀಲ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಸಿದ್ದಣ್ಣ ಬಂಡಿ ಭಾಗವಹಿಸಲಿದ್ದಾರೆ.ಎರಡು ದಿನಗಳಕಾಲ ಜರುಗುವ ಕಾರ್ಯಕ್ರಮದಲ್ಲಿ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿ ವಿವಿಧ ಅಂಗಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.