ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಕ್ಷಯ ತೃತಿಯ ದಿನವಾದ ಬುಧವಾರ ಚಿನ್ನ ಬೆಳ್ಳಿ ಬಂಗಾರ ಕೊಂಡರೆ ಶ್ರೇಷ್ಠ ಎಂಬ ಧಾರ್ಮಿಕವಾದ ನಂಬಿಕೆ ಹಿನ್ನೆಲೆಯಲ್ಲಿ ನಗರದ ಗಂಗಮ್ಮ ಗುಡಿ ರಸ್ತೆಯ ಬಹುತೇಕ ಚಿನ್ನದ ಅಂಗಡಿಗಳ ಎದುರು ಜನತೆ ಸಾಲುಗಟ್ಟಿ ನಿಂತು ಬಂಗಾರ ಖರೀದಿಸಿದ ದೃಶ್ಯಗಳು ಕಂಡು ಬಂದವು. ನಗರದಲ್ಲಿ ಗಂಗಮ್ಮ ಗುಡಿ ರಸ್ತೆ ಎಂದರೆ ಸಾಕು ಬಂಗಾರದ ಅಂಗಡಿಗಳಿರುವ ಜಾಗ ಎಂಬುದು ಜನರಿಗೆ ವೇದ್ಯವಾಗಿರುವ ಸಂಗತಿ. ಗೋಲ್ಡ್ ಬಜಾರ್ ನಲ್ಲಿರುವ ಬಂಗಾರದ ಅಂಗಡಿಗಳಲ್ಲಿ ಎಂದಿಗಿಂತ ತುಸು ಹೆಚ್ಚೇ ಎನ್ನುವಷ್ಟು ಜನ ಜಂಗುಳಿಯಾಗಿತ್ತು. ಇದರಿಂದಾಗಿ ಗಂಗಮ್ಮಗುಡಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಬಂಗಾರದ ಅಂಗಡಿಗಳಲ್ಲಿ ಗ್ರಾಮೀಣ ಮಹಿಳೆಯರೆ ಹೆಚ್ಚಾಗಿ ಖರೀದಿಗೆ ಮುಂದಾಗಿದ್ದರು. ಅದರಲ್ಲೂ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಸಹಾ ಇಂದು ಚಿನ್ನದಂಗಡಿಗಳಲ್ಲಿ ಖರೀದಿ ಮಾಡುತ್ತಿದ್ದುದು ಕಂಡು ಬಂದಿತು. ಅಕ್ಷಯ ತೃತಿಯ ಅಂಗವಾಗಿ ಚಿನ್ನ ಬೆಳ್ಳಿ ಬಂಗಾರ ಕೊಳ್ಳಲು ಗ್ರಾಹಕರನ್ನು ಸೆಳೆಯಲು ಭಾಗವಾಗಿ ಅಂಗಡಿಗಳ ಮಾಲಿಕರು ಅಂಗಡಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರು.ಪ್ರತಿ ವರ್ಷ ವೈಶಾಖ ಮಾಸದಲ್ಲಿ ಮಹಿಳೆಯರಿಗೆ ಅಚ್ಚುಮೆಚ್ಚಿನ ಬಂಗಾರ ತನ್ನದಾಗಿಸುವ ಸಡಗರ ಸಂಭ್ರಮದ ಹಬ್ಬ ಅಕ್ಷಯ ತೃತೀಯ ಆದರೆ ಈ ವರ್ಷ ಬಂಗಾರದ ಬೆಲೆ ಗಗನಕ್ಕೆ ಏರಿದ್ದು ಈ ಬಾರಿ ಬಂಗಾರ ಕೊಳ್ಳುವವರಲ್ಲಿ ನಿರುತ್ಸಾಹ ಮೂಡಿಸಿದೆ.
ಅಕ್ಷಯ ತೃತೀಯ ದಿನದಂದು ಹೊಸದಾಗಿ ಖರೀದಿಸಿದ ಬಂಗಾರದ ಒಡವೆಗಳನ್ನು ಲಕ್ಷ್ಮೀದೇವಿ ಮುಂದಿಟ್ಟು ಪೂಜೆ ಸಲ್ಲಿಸಿದರೆ ಅಂತಹವರ ಮನೆಗಳಲ್ಲಿ ಬಂಗಾರ ಇನ್ನಷ್ಟು ಮತ್ತಷ್ಟು ವೃದ್ಧಿಯಾಗುತ್ತದೆ ಮತ್ತು ಲಕ್ಷ್ಮೀದೇವಿ ಕೃಪೆಯಿಂದ ಸಿರಿ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತಿರುವ ಕಾರಣ ಬಂಗಾರದ ಅಂಗಡಿಗಳಿಗೆ ಜನ ಆ ದಿನ ಮುಗಿಬಿದ್ದು ಖರೀದಿಸುವುದು ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.ಆದರೆ ಈ ವರ್ಷ ಬಂಗಾರದ ಬೆಲೆ ಸರ್ವಕಾಲಿಕ ದಾಖಲೆ ಏರಿಕೆಯ ಪರಿಣಾಮ ಒಂದು ಗ್ರಾಂ ಚಿನ್ನಕ್ಕೆ ಏಳು ಸಾವಿರಕ್ಕೂ ಅಧಿಕ ಮೌಲ್ಯ ಆಗಿದ್ದು ಬಂಗಾರಕೊಳ್ಳಲು ಸಾಧ್ಯವಾಗದೆ ಮಧ್ಯಮ ವರ್ಗದ ಜನತೆ ಚಡಪಡಿಸುತ್ತಿದ್ದಾರೆ. ಒಮ್ಮೆ ಬಂಗಾರ ಕೊಂಡರೆ ಅದು ಅವರ ಜೀವಮಾನದ ಪರ್ಯಂತ ಇಟ್ಟುಕೊಳ್ಳೋದು ಹಾಗೂ ಎಂದೂ ಹೊಳಪನ್ನ ಕಳೆದುಕೊಳ್ಳದ ಹಾಗೂ ಕಷ್ಟಕಾಲದಲ್ಲಿ ಕ್ಷಣ ಮಾತ್ರದಲ್ಲಿ ಹಣ ಒದಗಿಸಿಕೊಡುವ ಏಕೈಕ ಹಳದಿ ಲೋಹ ಬಂಗಾರ ಆಗಿರುವುದು ಈ ಲೋಹದ ವಿಶೇಷವಾಗಿದೆ.ಹಳ್ಳಿಗಾಡಿನ ಗಿರವಿ ಅಂಗಡಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಬ್ಯಾಂಕ್ ವಹಿವಾಟಿನ ತನಕ ಷೇರು ಮಾರುಕಟ್ಟೆಯಲ್ಲಿನ ಏರುಪೇರುಗಳಿಗೂ ಸಹ ಬಂಗಾರದ ಬೆಲೆಯೇ ಮಾನದಂಡವಾಗಲಿದೆ. ದೇಶದಲ್ಲಿ ನೋಟು ಮುದ್ರಿಸಲು ಸಹ ಇಂತಿಷ್ಟು ಬಂಗಾರ ಕೇಂದ್ರ ಸರ್ಕಾರ ಸಂಗ್ರಹಿಸಬೇಕು ಎಂಬ ನಿಯಮ ಇದೆ ಹಾಗಾಗಿ ಬಂಗಾರ ಎಂದರೆ ಎಲ್ಲರಿಗೂ ಪ್ರೀತಿ.
ನಗರದ ಗಂಗಮ್ಮ ಗುಡಿ ರಸ್ತೆಯ ಚಿನ್ನದಂಗಡಿಗಳಲ್ಲಿ ಸುಮಾರು ₹25 ಕೋಟಿ ವಹಿವಾಟು ನಡೆದಿರಬಹುದು ಎಂದು ಹೆಸರೇಳಲಿಚ್ಚಿಸದ ಚಿನ್ನದಂಗಡಿ ಮಾಲಿಕರೊಬ್ಬರು ತಿಳಿಸಿದರು. ಜನಮರುಳೋ ಜಾತ್ರೆ ಮರುಳೋ ಎಂಬಂತೆ ಅಕ್ಷಯ ತೃತೀಯ ನೆಪದಲ್ಲಿ ಬಂಗಾದ ಅಂಗಡಿಗಳ ಮಾಲೀಕರು ಭರ್ಜರಿಯಾದ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಮಾತ್ರ ಬಡವರ ಬದುಕನ್ನು ಅಣಕಿಸುವಂತಿತ್ತು.