ಅಗ್ನಿಕುಂಡದಲ್ಲಿ ಜಿಗಿದಾಡಿದ ಅಲಾಯಿ ದೇವರುಗಳು

KannadaprabhaNewsNetwork |  
Published : Jul 18, 2024, 01:32 AM IST
17ಕೆಪಿಎಲ್25,26 ಕೊಪ್ಪಳ ತಾಲೂಕಿನ ಬೋಚನಳ್ಳಿ ಗ್ರಾಮದಲ್ಲಿ ಅಲಾಯಿ ದೇವರು ಮೈಮೇಲೆ ಬಂದು ಅಗ್ನಿಕುಂಡದಲ್ಲಿ ಕುಣಿದಾಡುತ್ತಿರುವುದು. | Kannada Prabha

ಸಾರಾಂಶ

ಕಾದು ಕೆಂಡದಂತೆ ಆಗಿದ್ದ ಅಗ್ನಿಕುಂಡದಲ್ಲಿನ ಹಾರಿಕೋಲು ಕೈಯಿಂದ ಹಿಡಿದು ಆಚೆ ಎಸೆದು ಪವಾಡ ಮೆರೆದಿದ್ದಾರೆ.

- ಮೈಮೇಲೆ ದೇವರು ಬಂದಿದ್ದರಿಂದ ಕುಣಿದಾಡಿದರು

- ಮೈಮೇಲೆ ಬೆಂಕಿ ಸುರಿದುಕೊಂಡು ಪವಾಡ

- ಕಾದು, ಕೆಂಡವಾಗಿದ್ದ ಹಾರಿಕೋಲು ಕೈಯಲ್ಲಿ ಹಿಡಿದ ದೇವರು

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಬೋಚನಳ್ಳಿ ಗ್ರಾಮದಲ್ಲಿ ನಡೆದ ಅಲಾಯಿ ದೇವರ ಅಗ್ನಿಕುಂಡ ಹಾಯುವ ಕಾರ್ಯಕ್ರಮದಲ್ಲಿ ದೇವರು ಮೈಮೇಲೆ ಬಂದವರು ಕೆಂಡದಲ್ಲಿಯೇ ಕುಣಿದಾಡಿದ್ದಾರೆ, ಮೈಮೇಲೆ ಬೆಂಕಿ ಸುರಿದುಕೊಂಡು ಹುಚ್ಚಾಟ ಮಾಡಿದ್ದಾರೆ. ಅಷ್ಟೇ ಅಲ್ಲ, ಕಾದು ಕೆಂಡದಂತೆ ಆಗಿದ್ದ ಅಗ್ನಿಕುಂಡದಲ್ಲಿನ ಹಾರಿಕೋಲು ಕೈಯಿಂದ ಹಿಡಿದು ಆಚೆ ಎಸೆದು ಪವಾಡ ಮೆರೆದಿದ್ದಾರೆ.

ಬುಧವಾರ ಬೆಳಗಿನ ಜಾವ ಇಂಥ ಪವಾಡಗಳಿಗೆ ತಾಲೂಕಿನ ಬೋಚನಳ್ಳಿ ಗ್ರಾಮದ ಭಕ್ತರು ಸಾಕ್ಷಿಯಾದರು.

ಏನಿದು ಮೈಮೇಲೆ ದೇವರು ಬರುವುದು:ತಾಲೂಕಿನ ಬೋಚನಳ್ಳಿ ಗ್ರಾಮದಲ್ಲಿ ಅಲಾಯಿ ದೇವರ ಹಬ್ಬದ ಕೊನೆಯ ದಿನ ಮೈಮೇಲೆ ದೇವರು ಬಂದವರಿಗೆ ಅಲಾಯಿ ದೇವರುಗಳನ್ನು ಹಿಡಿದುಕೊಳ್ಳಲು ನೀಡುವ ಪದ್ಧತಿ ಇದೆ. ಇವರನ್ನು ದೇವರ ಕುದುರೆ ಎಂದು ಸಹ ಕರೆಯಲಾಗುತ್ತದೆ.

ಬೆಳಗಿನ ಜಾವ ಅಲಾಯಿ ದೇವರನ್ನು ಹೊರುವ ಮುನ್ನ ಅವರು ಪವಾಡ ಮಾಡಿ ತೋರಿಸಬೇಕು. ಅಂಥ ಪವಾಡ ತೋರಿಸಿದ ಮೇಲೆ ಅದು ಮೆಚ್ಚುಗೆಯಾದರೇ ಮಾತ್ರ ಅಲಾಯಿ ದೇವರನ್ನು ಅವರ ಕೈಯಲ್ಲಿ ನೀಡಲಾಗುತ್ತದೆ.

ಇದಕ್ಕಾಗಿ ಮೈಮೇಲೆ ದೇವರು ಬಂದವರು ಈ ರೀತಿ ಅಗ್ನಿಕುಂಡದಲ್ಲಿ ಹಾಯ್ದು, ಮೈಮೇಲೆ ಬೆಂಕಿ ಸುರಿದುಕೊಳ್ಳುವುದು, ಉರಿಯುತ್ತಿರುವ ಅಗ್ನಿಕುಂಡದಲ್ಲಿ ಜಿದಿದಾಡುವ ದೃಶ್ಯ ರೋಮಾಂಚನ.

ಒಂದೊಂದು ಅಲಾಯಿ ದೇವರನ್ನು ಹೊರಲು ಒಬ್ಬೊಬ್ಬರು ಒಂದೊಂದು ಪವಾಡ ಮಾಡುತ್ತಾರೆ. ಮೈಮೇಲೆ ದೇವರು ಬಂದ ಓರ್ವ ಅಗ್ನಿಕುಂಡದಲ್ಲಿ ಕುಣಿದಾಡಿದ್ದು ಅಲ್ಲದೆ ಅಗ್ನಿಕುಂಡದಲ್ಲಿ ಹಾಕಿದ್ದ ಹಾರಿಕೋಲು(ಕಬ್ಬಿಣದ್ದು) ಕಾದು ಕೆಂಡವಾಗಿದ್ದನ್ನು ಅಗ್ನಿಕುಂಡದಲ್ಲಿ ಕೈ ಹಾಕಿ, ಅದನ್ನು ಕೈಯಿಂದ ಹಿಡಿದು, ಅಲಾಯ ದೇವರ ಅಗ್ನಿಕುಂಡದಿಂದ ಆಚ ಎಸೆದ ಮೇಲೆ ಇವರ ಕೈಗೆ ಅಲಾಯಿ ದೇವರನ್ನು ನೀಡಲಾಯಿತು.

ಇನ್ನೋರ್ವ ಅಗ್ನಿಕುಂಡದಲ್ಲಿ ಜಿಗಿದಾಡಿದ್ದು, ಅಲ್ಲದೆ ಮೈಮೇಲೆ ಬೆಂಕಿಯನ್ನೇ ಸುರಿದುಕೊಂಡಿದ್ದಾನೆ. ಆದರೂ ಆತನಿಗೆ ಏನು ಆಗಿಲ್ಲ. ಅಗ್ನಿಕುಂಡದಲ್ಲಿ ನಿಂತುಕೊಂಡು ಮೈಮೇಲೆ ಬೆಂಕಿ ಸುರಿದುಕೊಳ್ಳುವ ದೃಶ್ಯ ನೆರೆದವರನ್ನು ನಿಬ್ಬೆರಗಾಗಿಸಿತು.

ನಿಷೇಧವಿದ್ದರೂ ನಿರ್ಬಂಧ ಇಲ್ಲ:

ಮೂಢನಂಬಿಕೆ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಅಗ್ನಿಕುಂಡದಲ್ಲಿ ಹಾಯುವುದನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ 2014ರಲ್ಲಿಯೇ ಆದೇಶಿಸಿದೆ. ಆದರೂ ಈ ರೀತಿಯಾಗಿ ಅಗ್ನಿಕುಂಡ ಹಾಯುವುದು, ಹುಚ್ಚಾಟ ಮೆರೆಯುವುದು ಸರ್ವೆ ಸಾಮಾನ್ಯವಾಗಿದೆ. ಇದೆಲ್ಲವನ್ನು ನೋಡಿಕೊಂಡು ಅಲ್ಲಿಯೇ ಇರುವ ಪೊಲೀಸರು ತಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಇರುತ್ತಾರೆ ಎನ್ನುವುದು ಮಾತ್ರ ಸೋಜಿಗ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ