ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು

KannadaprabhaNewsNetwork |  
Published : Jun 18, 2025, 01:34 AM ISTUpdated : Jun 18, 2025, 12:15 PM IST
17 ಆಲಮಟ್ಟಿ 1:ಆಲಮಟ್ಟಿ ಜಲಾಶಯ: ನೀರಿನಾಳದಲ್ಲಿ ಅಣೆಕಟ್ಟು ಪುನಃಶ್ಚೇತನ ಕಾಮಗಾರಿ ಆರಂಭ | Kannada Prabha

ಸಾರಾಂಶ

ಆಲಮಟ್ಟಿ ಬಳಿ ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ಲಾಲ್ ಬಹದ್ದೂರ್‌ ಶಾಸ್ತ್ರಿ ಜಲಾಶಯದ ಹಿಂಭಾಗದಲ್ಲಿ ಕಾಂಕ್ರಿಟೀಕರಣ ಪುನಶ್ಚೇತನಗೊಳಿಸುವ ಕಾಮಗಾರಿ ಆರಂಭಗೊಂಡಿದೆ.

ಗಂಗಾಧರ ಹಿರೇಮಠ

 ಆಲಮಟ್ಟಿ :  ಆಲಮಟ್ಟಿ ಬಳಿ ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ಲಾಲ್ ಬಹದ್ದೂರ್‌ ಶಾಸ್ತ್ರಿ ಜಲಾಶಯದ ಹಿಂಭಾಗದಲ್ಲಿ ಕಾಂಕ್ರಿಟೀಕರಣ ಪುನಶ್ಚೇತನಗೊಳಿಸುವ ಕಾಮಗಾರಿ ಆರಂಭಗೊಂಡಿದೆ. ಡ್ಯಾಂ ಹಿಂಭಾಗ ನೀರಿನಾಳದಲ್ಲಿ ವಿಶಿಷ್ಟ ರಾಸಾಯನಿಕಗಳ ಮಿಶ್ರಣಗಳ ಲೇಪನ ಕಾಮಗಾರಿಯು ಅಂದಾಜು ₹28 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಕಳೆದ 15 ದಿನಗಳಿಂದ ಕಾಮಗಾರಿ ಆರಂಭಗೊಂಡಿದೆ.

ಜಲಾಶಯದ ಕಾಂಕ್ರಿಟ್ ಭಾಗ 1.2 ಕಿಮೀ ಉದ್ದ ಹಾಗೂ 15 ಮೀ. ಎತ್ತರದವರೆಗೆ ಈ ಕಾಮಗಾರಿ ನಿರ್ವಹಿಸಲಾಗುತ್ತದೆ. ಈ ಕಾಮಗಾರಿಯು ಮುಂದಿನ ಎರಡು ವರ್ಷಗಳ ಕಾಲ ನಡೆಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯ ನಿರ್ಮಾಣವಾದಾಗಿನಿಂದ ನೀರಿನಾಳದಲ್ಲಿ ಪುನಶ್ಚೇತನ ಕಾಮಗಾರಿ ನಡೆಸುತ್ತಿರುವುದು ಇದೇ ಮೊದಲು.

1964ರಲ್ಲಿ ಆಗಿನ ಕೇಂದ್ರ ನೀರಾವರಿ ಸಚಿವ ಲಾಲ ಬಹಾದ್ದೂರ್ ಶಾಸ್ತ್ರಿ ಅವರು ಡ್ಯಾಂ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಹಾಗೂ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸಿದ್ದು 2002ರಲ್ಲಿ. ಅಂದಿನಿಂದ ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ನಿತ್ಯವೂ ಆಲಮಟ್ಟಿ ಜಲಾಶಯಕ್ಕೆ 3ರಿಂದ 4 ಲಕ್ಷ ಕ್ಯುಸೆಕ್‌ ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. 123.081 ಟಿಎಂಸಿ ಅಡಿಯಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಈ ಜಲಾಶಯಕ್ಕಿದೆ. ಆದರೆ ಈಗ ಅಂತಾರಾಷ್ಟ್ರೀಯ ನೂತನ ತಂತ್ರಜ್ಞಾನಗಳನ್ನು ಅನುಸರಿಸಿ, ವಿಶೇಷ ಸಿಮೆಂಟ್ ಹಾಗೂ ರಾಸಾಯನಿಕಗಳನ್ನು ಬಳಸಿ, ಜಲಾಶಯದ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ.

ಕೇಂದ್ರ ಜಲ ಆಯೋಗ ರೂಪಿಸಿದ್ದ ಅಣೆಕಟ್ಟೆಗಳ ಪುನರ್ವಸತಿ ಮತ್ತು ಸುಧಾರಣೆ ಯೋಜನೆ-2 (ಡ್ರಿಪ್- ಡ್ಯಾಂ ರಿಹ್ಯಾಬಿಲಿಟೇಷನ್ ಆ್ಯಂಡ್ ಇಂಪ್ರೂಮೆಂಟ್ ಪ್ರೊಜೆಕ್ಟ್) ಅಡಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಕಾಮಗಾರಿ ನಡೆಯುತ್ತಿದೆ. ಡ್ರಿಪ್-1ರಡಿ ಜಲಾಶಯದ ಡೆಡ್ ಸ್ಟೋರೇಜ್ ಮೇಲ್ಭಾಗದ ಕಾಂಕ್ರಿಟ್ ಭಾಗ ಪುನಃಶ್ಚೇತನಗೊಳಿಸಲಾಗಿತ್ತು.

ಡೆಡ್ ಸ್ಟೋರೇಜ್ ಮಟ್ಟಕ್ಕಿಂತ ಕೆಳಗಿನ ಕಾಮಗಾರಿ:

ಜಲಾಶಯದ ಡೆಡ್ ಸ್ಟೋರೇಜ್ ಮಟ್ಟ ಸಮುದ್ರ ಮಟ್ಟದಿಂದ 506.8 ಮೀ ಇದ್ದು, ಅದರ ಕೆಳಗಡೆ ಅಂದಾಜು 17.6 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಯಾವಾಗಲೂ ಸಂಗ್ರಹವಾಗಿರುತ್ತದೆ. ಹೀಗಾಗಿ ಜಲಾಶಯದ ಅಡಿಪಾಯ 488 ಮೀ. ನಿಂದ ಜಲಾಶಯದ ಡೆಡ್ ಸ್ಟೋರೇಜ್ ಮಟ್ಟ 506.87ಮೀ. ಎತ್ತರದವರೆಗೆ ಅಂದರೆ ಅಂದಾಜು 15ಮೀ. ಎತ್ತರದವರೆಗಿನ ಜಲಾಶಯದ ಕಾಂಕ್ರಿಟ್ ಭಾಗವನ್ನು ವಿವಿಧ ತಂತ್ರಜ್ಞಾನ ಬಳಸಿ ಪುನಶ್ಚೇತನಗೊಳಿಸಿ, ನೀರಿನ ಸೋರುವಿಕೆ ಕಡಿಮೆ ಮಾಡುವುದು ಈ ಕಾಮಗಾರಿ ಮುಖ್ಯ ಉದ್ದೇಶ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದ್ದಾರೆ.

ಕಾಮಗಾರಿ ನಿರ್ವಹಣೆ ಹೇಗೆ?:

ನುರಿತ ಮುಳುಗು ತಜ್ಞರುಳ್ಳ, ನೀರಿನಾಳದಲ್ಲಿ ಕಾಮಗಾರಿ ನಿರ್ವಹಿಸಿರುವ 20 ಜನ ಕಾರ್ಮಿಕರ ತಂಡದಿಂದ ಈ ಕಾರ್ಯ ನಡೆಯಲಿದೆ. ಜೋಕಾಲಿಯಂತೆ ಫ್ಲಾಟ್ ಫಾರ್ಮ್‌ ನಿರ್ಮಿಸಿಕೊಂಡು ಜಲಾಶಯದ ಹಿನ್ನೀರಿನ ನದಿಗೆ ಇಳಿಯುತ್ತಾರೆ. ಅಲ್ಲಿಂದ ರಕ್ಷಣಾ ಕವಚ, ಸಾಮಗ್ರಿ, ಆಮ್ಲಜನಕ ಸಿಲಿಂಡರ್‌ನೊಂದಿಗೆ ಒಬ್ಬೊಬ್ಬ ಕಾರ್ಮಿಕ, ಜಲಾಶಯದ ಹಿನ್ನೀರಿಗೆ ಹತ್ತಿಕೊಂಡೆ ನೀರಿನಾಳದೊಳಗೆ ಪ್ರವೇಶಿಸುತ್ತಾನೆ. ಯಾವುದೇ ಜಲಚರ ಪ್ರಾಣಿಗಳಿಂದಲೂ ತೊಂದರೆ ಆಗದಂತೆ ರಕ್ಷಣಾ ಕವಚ ಧರಿಸಿ ನೀರಿನೊಳಗೆ ಇಳಿಯುತ್ತಾರೆ. ಕೆಲಸ ನಿರ್ವಹಿಸುವ ಭಾಗದಲ್ಲಿ ಒಂದೆಡೆ ಮಾತ್ರ ರಕ್ಷಣಾ ಕವಚ ತೆಗೆದು ಜಲಾಶಯದ ಕಾಂಕ್ರಿಟ್ ಭಾಗದ ಹಾನಿ ಆದವುಗಳನ್ನು ಪರಿಶೀಲಿಸಿ, ಕುಳಿಗೆ ತಕ್ಕಂತೆ ಕಾಮಗಾರಿ ನಿರ್ವಹಿಸಲಾಗುತ್ತದೆ.

ಜಿಪ್ಸಮ್, ಪಾಲಿಮರ್, ಅಪಾಕ್ಸಿ ಮತ್ತಿತರ ರಾಸಾಯನಿಕ ವಸ್ತುಗಳುಳ್ಳ ಮಿಶ್ರಣವನ್ನು ಲೇಪಿಸಲಾಗುತ್ತದೆ. ಅದು ಕೇವಲ 10ರಿಂದ 30 ಸೆಕೆಂಡ್‌ನಲ್ಲಿ ಗಟ್ಟಿಯಾಗುತ್ತದೆ. ಜಲಾಶಯಕ್ಕೆ ಚಿಕ್ಕ ರಂಧ್ರಗಳನ್ನು ಕೊರೆದು ರಾಸಾಯನಿಕ ಬಳಸಿ ಗ್ರೌಟಿಂಗ್ ನಡೆಸಲಾಗುತ್ತದೆ. ವಿಶೇಷ ಜೆಟ್ ಯಂತ್ರದ ಮೂಲಕ ಹೆಚ್ಚಿನ ಒತ್ತಡದಲ್ಲಿ ಅದನ್ನು ರಂಧ್ರದೊಳಕ್ಕೆ ಬಿಡಲಾಗುತ್ತದೆ. ಇದರಿಂದ ದೊಡ್ಡ, ಚಿಕ್ಕ ಗಾತ್ರದ ಕುಳಿಗಳು ಮುಚ್ಚಿಕೊಳ್ಳುತ್ತವೆ. ನೀರಿನಾಳದೊಳಗೆ ಲಂಬವಾಗಿ ಬ್ಲಾಕ್, ಕುಳಿಗಳನ್ನು ಮುಚ್ಚಲಾಗುತ್ತದೆ ಎಂದು ಸಹಾಯಕ ಎಂಜಿನಿಯರ್ ವಿಠ್ಠಲ್‌ ಜಾಧವ ತಿಳಿಸಿದ್ದಾರೆ.

ಅಪ್ ಸ್ಟೀಮ್ ಅಂಡರ್‌ ವಾಟರ್ ಪಾಯಿಂಟಿಂಗ್, ಅಂಡರ್‌ ವಾಟರ್ ಡೀಪರ್ ಕ್ಯಾವಿಟಿ ಸೆಮೆಂಟಿಯಸ್ ಫಿಲ್ಲಿಂಗ್, ಅಂಡರ್ ವಾಟರ್ ಸೆಮೆಂಟಿಯಸ್ ಗ್ರೌಟಿಂಗ್ ಹಾರಿಜಂಟಲಿ, ಅಪಾಕ್ಸಿ ರೆಸಿನ್ ಗ್ರೌಟಿಂಗ್, ಪಿಯು ಗ್ರೌಟಿಂಗ್, ಬ್ಲಾಕ್ ಜಾಯಿಂಟ್ ಟ್ರಿಟ್ಮೆಂಟ್, ರಿಸರ್ಪೇಸಿಂಗ್ ಟು ದಿ ಕಾಂಕ್ರಿಟ್ ಪೋರ್ಷನ್, ಪೋರೌಸ್ ಮತ್ತು ಡ್ರೈನೇಜ್ ಹೋಲ್ಸ್ ಎಂಬ 9 ರೀತಿಯಲ್ಲಿ ಜಲಾಶಯದ ಸಾಮರ್ಥ್ಯ ಹೆಚ್ಚಿಸಲು ಈ ಕಾಮಗಾರಿ ನಡೆಸಲಾಗುತ್ತಿದೆ.

ಇದು ಅತ್ಯಂತ ಸೂಕ್ಷ್ಮ ಕೆಲಸ. ಅದಕ್ಕಾಗಿ ನುರಿತ ಕಾರ್ಮಿಕರಿಂದ, ದೇಶ, ವಿದೇಶಗಳಿಂದ ತಯಾರಿಸಲಾದ ರಾಸಾಯನಿಕಗಳನ್ನು ಬಳಸಿ, ನೀರಿನ ರಭಸದ ಅಲೆಗಳು ಕಡಿಮೆಯಿದ್ದಾಗ ಕಾಮಗಾರಿ ನಿರ್ವಹಿಸಲಾಗುತ್ತದೆ. ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಡಿ.ಬಸವರಾಜ, ಮುಖ್ಯ ಎಂಜಿನಿಯರ್‌, ಅಣೆಕಟ್ಟು ವಲಯ

PREV
Read more Articles on

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌