ಕೊಪ್ಪಳ: ಸಿಂಗಟಾಲೂರು, ಅಳವಂಡಿ-ಬೆಟಗೇರಿ ಹಾಗೂ ನವಲಕಲ್ ಮೂರು ಏತ ನೀರಾವರಿ ಯೋಜನೆಗಳ ಮೂಲಕ 2027ರ ವೇಳೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.
ಸಿಂಗಟಾಲೂರು ಯೋಜನೆ
ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಈ ಹಿಂದೆ 98 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಗುರಿ ಹೊಂದಲಾಗಿತ್ತು. ಆದರೆ, ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶವನ್ನು ಈಗಾಗಲೇ ಸೌರ ಹಾಗೂ ಪವನ ವಿದ್ಯುತ್ ಯೋಜನೆಗಳಿಗೆ ನೀಡಿರುವುದರಿಂದ ನೀರಾವರಿ ವ್ಯಾಪ್ತಿ ಕಡಿಮೆಯಾಗಿದೆ. ಮಧ್ಯಪ್ರದೇಶ ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಯೋಜನೆ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ₹519 ಕೋಟಿ ಅನುದಾನ ನೀಡಲಿದೆ ಎಂದು ತಿಳಿಸಿದರು.ಅಳವಂಡಿ-ಬೆಟಗೇರಿ ಶೀಘ್ರ ಲೋಕಾರ್ಪಣೆ
ಯೋಜನೆಯಡಿ 1.02 ಕಿ.ಮೀ. ಉದ್ದದ ಇಂಟೇಕ್ ಕಾಲುವೆ, 16.50 ಕಿ.ಮೀ. ಉದ್ದದ ಎಂಎಸ್ ರೈಸಿಂಗ್ ಮೇನ್, 1760 ಎಚ್‌ಪಿ ಸಾಮರ್ಥ್ಯದ 2+1 ಪಂಪ್‌ಗಳು ಮತ್ತು ಮೋಟಾರ್‌ಗಳು, ಎರಡು ಡೆಲಿವರಿ ಚೇಂಬರ್‌ಗಳು, ಜಾಕ್‌ವೆಲ್ ಸಮೀಪ 33/6.6. ಕೆವಿ ಸಬ್‌ಸ್ಟೇಷನ್, 6.10 ಕಿ.ಮೀ. ಉದ್ದದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ನಿರ್ಮಿಸಲಾಗಿದೆ. ಸೆ. 10ರಂದು ಸಬ್‌ಸ್ಟೇಷನ್ ಚಾರ್ಜ್ ಮಾಡಲಾಗಿದೆ ಎಂದರು.
ಹೆಚ್ಚುವರಿ 3 ಸಾವಿರ ಎಕರೆಗೆ ಕಾಮಗಾರಿ
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿಪಿಆರ್‌ನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಲಾಗಿದ್ದು, ₹211 ಕೋಟಿಗೆ ಅನುಮೋದನೆ ದೊರೆತಿದೆ. ಯೋಜನೆಯಡಿ 6 ಸಾವಿರ ಎಕರೆ ಜಮೀನುಗಳಿಗೆ ಒಟ್ಟು 39.78 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದರು.
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು ಮತ್ತು ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
ನವಲಕಲ್ ಏತ ನೀರಾವರಿ ಯೋಜನೆಯೂ ಈಗಾಗಲೇ ಪೂರ್ಣಗೊಂಡಿದ್ದು, ಕಾಲುವೆ ನಿರ್ಮಾಣದ ಮೂಲಕ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.