ನಾಡಿನ ಸಮಗ್ರತೆಗೆ ಅಳವಂಡಿ ಶಿವಮೂರ್ತಿ ಶ್ರೀಗಳ ಕೊಡುಗೆ ಅಪಾರ

KannadaprabhaNewsNetwork |  
Published : May 22, 2024, 12:46 AM IST
ಕಾರ್ಯಕ್ರಮದಲ್ಲಿ ಎಸ್.ಯು.ಸಜ್ಜನಶೆಟ್ಟರ ಮಾತನಾಡಿದರು. | Kannada Prabha

ಸಾರಾಂಶ

ಶಿವಮೂರ್ತಿ ಸ್ವಾಮಿಗಳು ಬದುಕಿನುದ್ದಕ್ಕೂ ಮಾನವೀಯತೆ ಉಸಿರೆರೆದವರು.

ಗದಗ: ಕರ್ನಾಟಕ ಏಕೀಕರಣ ಚಳವಳಿ, ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ನೇತಾರರಾಗಿ ಕನ್ನಡ ನಾಡು-ನುಡಿಗೆ ತಮ್ಮನ್ನೇ ಸಮರ್ಪಿಸಿಕೊಂಡ ಮಹಾನ್‌ ಚೇತನ ಅಳವಂಡಿ ಶಿವಮೂರ್ತಿ ಸ್ವಾಮಿಗಳು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಎಸ್.ಯು. ಸಜ್ಜನಶೆಟ್ಟರ ಹೇಳಿದರು.

ಅವರು ನಗರದ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ವೇದಮೂರ್ತಿ ಅಳವಂಡಿ ಶಿವಮೂರ್ತಿ ಸ್ವಾಮಿಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಚಳವಳಿ ಮತ್ತು ಅಳವಂಡಿ ಶಿವಮೂರ್ತಿ ಸ್ವಾಮಿಗಳು ಎಂಬ ವಿಷಯವಾಗಿ ಮಾತನಾಡಿದರು. ಅಳವಂಡಿ ಶಿವಮೂರ್ತಿ ಸ್ವಾಮಿಗಳ ಹೋರಾಟದ ಫಲವಾಗಿ ಹೈದರಾಬಾದ್‌ ಕರ್ನಾಟಕದ ಅನೇಕ ಪ್ರದೇಶಗಳು ಕನ್ನಡ ನಾಡಿಗೆ ಬರಲು ಸಾಧ್ಯವಾಯಿತು. ದಿಟ್ಟ ಹೋರಾಟಗಾರ ಕರ್ನಾಟಕದ ಹುಲಿ ಅಳವಂಡಿ ಶಿವಮೂರ್ತಿ ಸ್ವಾಮಿಗಳಾಗಿದ್ದಾರೆ ಎಂದರು.

1955ರಲ್ಲಿ ಭಾಷಾವಾರು ಪ್ರಾಂತ ರಚನೆ ಸಂದರ್ಭದಲ್ಲಿ ಕರ್ನಾಟಕದ ಬಳ್ಳಾರಿ, ಹೊಸಪೇಟೆ, ಹಂಪಿ ಮತ್ತು ತುಂಗಭದ್ರಾ ಅಣೆಕಟ್ಟು ಪ್ರದೇಶವನ್ನು ವಿಶಾಲ ಆಂಧ್ರ ಪ್ರದೇಶಕ್ಕೆ ಸೇರಿಸುವಂತೆ ಅಂದಿನ ಫಜಲ್ ಅಲಿ ಕಮಿಶನ್ ನಿರ್ಧರಿಸಿತ್ತು. ಇದನ್ನು ತೀವ್ರವಾಗಿ ವಿರೋಧಿಸಿದ ಸ್ವಾಮಿಗಳು, ಸಾವಿರಾರು ಜನ ರೈತರನ್ನು ಸಂಘಟಿಸಿ ಅಮರಣ ಉಪವಾಸ ಸತ್ಯಾಗ್ರಹ ಮಾಡಿದ್ದರು. ಅದರ ಫಲವಾಗಿ ನ್ಯಾಯಮೂರ್ತಿ ಮಿಶ್ರ ಸಮಿತಿ ನೇಮಕವಾಗಿ ಬಳ್ಳಾರಿ ಮತ್ತು ತುಂಗಭದ್ರಾ ಡ್ಯಾಂ ಪ್ರದೇಶ ಕರ್ನಾಟಕಕ್ಕೆ ಸೇರ್ಪಡೆಗೊಳ್ಳುವ ಮೂಲಕ ಐತಿಹಾಸಿಕ ಫಟನೆಗೆ ಸ್ವಾಮಿಜಿ ಕಾರಣೀಭೂತರಾಗಿದ್ದಾರೆ ಎಂದರು.ಅಳವಂಡಿ ಶಿವಮೂರ್ತಿ ಸ್ವಾಮಿಗಳು ಅರೇ ಸೈನಿಕ ತರಬೇತಿ ಪಡೆದು ರಜಾಕರ ಸೈನಿಕರ ಮೇಲೆ ದಾಳಿ ಮಾಡಿ, ಅವರಿಗೆ ಸಿಂಹಸ್ವಪ್ನರಾದರು. ಹೋರಾಟದ ಜತೆಗೆ ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಅಳವಂಡಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಉಚಿತ ಪ್ರಸಾದ ನಿಲಯ, ಅನಾಥ ಮಕ್ಕಳ ನಿಲಯ ಹಾಗೂ ಜ. ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸಿ, ಶೈಕ್ಷಣಿಕ ಕ್ಷೇತ್ರಕ್ಕೂ ನಾಂದಿ ಹಾಡಿದರು. ಸ್ವಾಮಿಗಳು ನಾಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2006ರಲ್ಲಿ ಸುವರ್ಣ ಏಕೀಕರಣ ಪುರಸ್ಕಾರ ನೀಡಿ ಗೌರವಿಸಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿವಮೂರ್ತಿ ಸ್ವಾಮಿಗಳು ಬದುಕಿನುದ್ದಕ್ಕೂ ಮಾನವೀಯತೆ ಉಸಿರೆರೆದವರು. ರಾಷ್ಟ್ರೀಯ ಸಮಸ್ಯೆಗಳನ್ನು ತಮ್ಮ ಸಮರ್ಥ ವಾಕ್ಪಟುತ್ವದಿಂದ ಪರಿಣಾಮಕಾರಿಯಾಗಿ ಪ್ರತಿಪಾದಿಸಿ ಸರ್ಕಾರದ ಗಮನ ಸೆಳೆದ ತತ್ವನಿಷ್ಠ ರಾಜಕಾರಣಿ, ಆದರ್ಶ ಜನನಾಯಕ. ತಮ್ಮ 20ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಈ ವೇಳೆ ಕ.ವಿ.ವ. ಸಮಿತಿ ಕಾರ್ಯದರ್ಶಿ ವಿ.ಆರ್. ಕಟ್ಟಿಮನಿ ಹಿರೇಮಠ, ಪ್ರಾಚಾರ್ಯ ಡಾ. ಬಿ.ಬಿ. ಹೊಳಗುಂದಿ, ಶಿವಾನಂದ ಗಿಡ್ನಂದಿ, ಡಿ.ಎಸ್. ಬಾಪುರಿ, ಡಿ.ಎಸ್. ತಳವಾರ, ಎಸ್.ಎಸ್. ಕಳಸಾಪುರಶೆಟ್ರು, ಆರ್.ಡಿ. ಕಪ್ಪಲಿ, ಪ್ರ.ತೋ. ನಾರಾಯಣಪುರ, ಎಚ್.ಟಿ. ಸಂಜೀವಸ್ವಾಮಿ, ಎಚ್.ಕೆ. ದಾಸರ, ಷಡಕ್ಷರಯ್ಯ ಸ್ವಾಮಿಕಣ್ವಿಮಠ, ಡಾ. ಶಿಲ್ಪಾ ಹಿರೇಕೇರೂರ, ಡಾ. ಎಂ.ಎಸ್. ಶಿರೋಳ, ಡಾ. ಎಸ್.ಎಂ. ರಾಯನಗೌಡರ, ಟಿ.ಎಫ್. ನದಾಫ್, ವಿಜಯಲಕ್ಷ್ಮೀ ಆರ್‌.ಎಚ್., ಎಂ.ಎಲ್. ಬೆಳಧಡಿ, ಡಿ.ಆರ್. ಜಗ್ಗಲ್ ಹಾಗೂ ಬಿಇಡಿ ಪ್ರಶಿಕ್ಷಣಾರ್ಥಿಗಳು ಇದ್ದರು. ಡಾ. ಹೊಳಗುಂದಿ ಸ್ವಾಗತಿಸಿದರು. ಯಶೋದಾ ನಾಯ್ಕರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಕಿಶೋರಬಾಬು ನಾಗರಕಟ್ಟಿ ವಂದಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ