ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಪರೀಕ್ಷೆಯಲ್ಲಿ ಸಂಪೂರ್ಣ ಫೇಲ್ ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿ ನಿಂತ ನೀರಾಗಿರುವ ಕಾಂಗ್ರೆಸ್ ಸರ್ಕಾರ, ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ನಂಬಿ ಮತ ಹಾಕಿದ ಮತದಾರರ ಕಿವಿಗೆ ಹೂವಿಟ್ಟಿದೆ ಎಂದು ಟೀಕಿಸಿದರು.ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ದಾಖಲೆಯ ಬರ ಪರಿಹಾರ ಸಿಕ್ಕಿದೆ. ಆದರೆ, ಇನ್ನೂ ೨ ಲಕ್ಷ ರೈತರಿಗೆ ಪರಿಹಾರ ನೀಡಬೇಕಿದೆ. ಕೆಲವರಿಗೆ ೩೦೦, ೪೦೦ ರು. ಪರಿಹಾರ ನೀಡಿದ್ದಾರೆ. ಬಿತ್ತನೆ ಮಾಡಬೇಡಿ ಎಂದು ಮೊದಲಿಗೆ ಹೇಳಿ, ಈಗ ಬಿತ್ತನೆ ಮಾಡದವರಿಗೆ ಪರಿಹಾರ ನೀಡುತ್ತಿಲ್ಲ, ಇತ್ತ ಬೆಳೆಯೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎಂಬಂತೆ ರೈತರ ಹೊಟ್ಟೆಯ ಮೇಲೆ ಬರೆ ಎದೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ, ಹಾಲು ಉತ್ಪಾದಕರಿಗೆ ಬರಬೇಕಾದ ಪ್ರೋತ್ಸಹದ ಹಣ, ಸಾಮಾಜಿಕ ಭದ್ರತಾ ಪಿಂಚಣಿ ಹಣ, ವಿಧವೆಯರ ಮಾಶಾಸನ, ದಲಿತರಿಗೆ ಮೀಸಲಿಟ್ಟ ಹಣ, ಗ್ಯಾರಂಟಿ ಯೋಜನೆಗಳಿಗೆ ಹೊಂದಿಸಲಾಗುತ್ತಿದೆ. ಹೊಸ ನೀರಾವರಿ ಯೋಜನೆಗಳಿಗೆ ಹಣವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗವಿಲ್ಲ ದಂತಹ ಸಂಕಷ್ಟ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದೊಡ್ಡಿದೆ ಎಂದು ಟೀಕಿಸಿದರು.
ಬಿಜೆಪಿ ಮುಖಂಡರಾದ ವಿನೋಬ, ಪ್ರಸನ್ನಕುಮಾರ್, ಬಿ.ಟಿ.ಶಿವಲಿಂಗಯ್ಯ, ನಾಗಾನಂದ್, ಸುರೇಶ್, ಕೃಷ್ಣಪ್ಪ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.