ಮಂಗಳೂರು ವಿಮಾನ ದುರಂತದ 12 ಮಂದಿ ಮೃತರ ಗುರುತು ಕೊನೆಗೂ ಪತ್ತೆಯೇ ಆಗಲಿಲ್ಲ!

KannadaprabhaNewsNetwork | Published : May 22, 2024 12:46 AM

ಸಾರಾಂಶ

ಮೃತಪಟ್ಟ 158 ಮಂದಿ ಪೈಕಿ 136 ಮಂದಿಯ ಗುರುತು ಪತ್ತೆಯಾಗಿತ್ತು. ಬಾಕಿ 22 ಮಂದಿಯ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 12 ಮಂದಿಯ ಶವದ ಗುರುತು ಪತ್ತೆಯಾಗಿದ್ದರೆ, ಬಾಕಿ 12 ಮಂದಿಯ ಶವ ಯಾರದ್ದು ಎಂಬುದು ಇದುವರೆಗೂ ಗೊತ್ತಾಗಿಲ್ಲ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಕೆಂಜಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುರಂತಕ್ಕೆ ಒಳಗಾಗಿ ಇಂದಿಗೆ (2010 ಮೇ 22) 14 ವರ್ಷ ತುಂಬುತ್ತಿದೆ. ವಿಮಾನ ದುರಂತದಲ್ಲಿ ಒಟ್ಟು 166 ಮಂದಿ ಪ್ರಯಾಣಿಕರಲ್ಲಿ 8 ಮಂದಿ ಬದುಕುಳಿದಿದ್ದಾರೆ. ಮೃತ 158 ಮಂದಿಯಲ್ಲಿ 146 ಮಂದಿಯ ಗುರುತು ಪತ್ತೆಯಾಗಿತ್ತು. ಉಳಿದ 12 ಮಂದಿಯ ಗುರುತು ಕೊನೆಗೂ ಪತ್ತೆಯಾಗಲೇ ಇಲ್ಲ!

ಮೃತಪಟ್ಟ 158 ಮಂದಿ ಪೈಕಿ 136 ಮಂದಿಯ ಗುರುತು ಪತ್ತೆಯಾಗಿತ್ತು. ಬಾಕಿ 22 ಮಂದಿಯ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 12 ಮಂದಿಯ ಶವದ ಗುರುತು ಪತ್ತೆಯಾಗಿದ್ದರೆ, ಬಾಕಿ 12 ಮಂದಿಯ ಶವ ಯಾರದ್ದು ಎಂಬುದು ಇದುವರೆಗೂ ಗೊತ್ತಾಗಿಲ್ಲ.

ಹೈದರಾಬಾದ್‌ನಿಂದ ಡಿಎನ್‌ಎ ಪರೀಕ್ಷೆ ಹೊರತೂ 12 ಮಂದಿಯ ಶವ ಆಯಾ ಕುಟುಂಬಕ್ಕೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 12 ಮಂದಿಯ ಶವವನ್ನೂ ಸಾಮೂಹಿಕ ಸಂಸ್ಕಾರಕ್ಕೆ ಒಳಪಡಿಸಲಾಯಿತು. 12 ಮಂದಿಯ ಗುರುತನ್ನು ಅವರವರ ಕುಟುಂಬಕ್ಕೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ.

ಪರಿಹಾರ ಪೂರ್ತಿ ಪಾವತಿ: 12 ಮಂದಿಯ ಗುರುತು ಪತ್ತೆಯಾಗದಿದ್ದರೂ ಅದು ಕುಟುಂಬಕ್ಕೆ ಪರಿಹಾರ ಪಾವತಿಗೆ ಅಡ್ಡಿಯಾಗಿಲ್ಲ. ವಿಮಾನ ದುರಂತ ನಡೆದಿರುವುದು ಸತ್ಯ ಘಟನೆಯಾದ್ದರಿಂದ ವಿಮಾನದಲ್ಲಿದ್ದ ಈ 12 ಮಂದಿ ಪ್ರಯಾಣಿಕರ ಬೋರ್ಡಿಂಗ್‌ ಪಾಸ್‌ ಮತ್ತಿತರ ದಾಖಲೆಗಳ ಆಧಾರದಲ್ಲಿ ಜಿಲ್ಲಾಡಳಿತ ಮೃತಪಟ್ಟ ಬಗ್ಗೆ ಸರ್ಟಿಫಿಕೆಟ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಗುರುತು ಪತ್ತೆಯಾಗದ ಮೃತರ ಕುಟುಂಬಗಳಿಗೂ ಪರಿಹಾರ ನೀಡಲಾಗಿದೆ. ಅಂತಾರಾಷ್ಟ್ರೀಯ ಮೋಂಟ್ರಿಯಲ್‌ ಒಪ್ಪಂದ ಪ್ರಕಾರ ಗರಿಷ್ಠ ಮೊತ್ತದ ಪರಿಹಾರವನ್ನು ನೀಡಲಾಗಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ ತಲಾ 2 ಲಕ್ಷ ರು. ಪರಿಹಾರ ಹಾಗೂ ಗಾಯಾಳುಗಳಿಗೂ ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿತ್ತು.

ಕೂಳೂರಿನಲ್ಲಿ ಸ್ಮಾರಕ: ಮಂಗಳೂರು ವಿಮಾನ ದುರಂತದಲ್ಲಿ ಮೃತಪಟ್ಟ ಎಲ್ಲ 158 ಮಂದಿಯ ಸ್ಮರಣಾರ್ಥ ಮಂಗಳೂರಿನ ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಅದಕ್ಕೂ ಮೊದಲು ವಿಮಾನ ದುರಂತ ನಡೆದ ಸಮೀಪದಲ್ಲೇ ಮಳವೂರಿನಲ್ಲಿ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿತ್ತು. ಬಳಿಕ ಜಿಲ್ಲಾಡಳಿತ ತಣ್ಣೀರುಬಾವಿ ಬಳಿ ನದಿ ಕಿನಾರೆಯಲ್ಲಿ ಸ್ಮಾರಕ ನಿರ್ಮಿಸಿದೆ. ಗುರುತಿಸಿದ ಹಾಗೂ ಗುರುತು ಸಿಗದ ಮೃತರ ಶವಗಳನ್ನು ಇಲ್ಲೇ ದಫನ ಮಾಡಲಾಯಿತು. 2018ರಲ್ಲಿ ಅಲ್ಲಿ ಪ್ರತ್ಯೇಕ ಸ್ಮಾರಕವನ್ನು ಜಿಲ್ಲಾಡಳಿತ ನಿರ್ಮಿಸಿದೆ. ಈ ಸ್ಥಳದಲ್ಲಿ ಪ್ರತಿ ವರ್ಷ ಮೇ 22ರಂದು ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ವಿಮಾನ ದುರಂತದ ಆ ಕರಾಳ ನೆನಪು

2010 ಮೇ 22ರಂದು ಬೆಳಗ್ಗೆ 6.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದ 166 ಮಂದಿ ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ರನ್‌ವೇ ಜಾರಿ ಕಣಿವೆಗೆ ಬಿದ್ದು ಸ್ಫೋಟಗೊಂಡು ಇಬ್ಭಾಗವಾಗಿತ್ತು. ಈ ವೇಳೆ ಹೊತ್ತಿ ಉರಿಯುತ್ತಿದ್ದ ವಿಮಾನದೊಳಗಿಂದ 8 ಮಂದಿ ಜಿಗಿದು ಸುಟ್ಟ ಗಾಯದೊಂದಿಗೆ ಪಾರಾದರೆ, ಉಳಿದ ಪ್ರಯಾಣಿಕರು ಸಜೀವ ದಹನವಾಗಿದ್ದರು. ಮೃತ 158 ಮಂದಿಯಲ್ಲಿ 135 ಮಂದಿ ವಯಸ್ಕರು, 19 ಮಕ್ಕಳು, ನಾಲ್ವರು ಶಿಶುಗಳು, ಆರು ಮಂದಿ ವಿಮಾನ ಸಿಬ್ಬಂದಿ ಸೇರಿದ್ದರು. ಪೈಲಟ್‌, ಸಹ ಪೈಲಟ್‌ ಕೂಡ ಸಾವಿಗೀಡಾಗಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ದ.ಕ, ಉಡುಪಿ, ಉತ್ತರ ಕನ್ನಡ ಹಾಗೂ ಕೇರಳದವರಿದ್ದರು.

ವಿಮಾನದ ಕಾಕ್‌ಪಿಟ್‌ ಧ್ವನಿ ಹಾಗೂ ವಿಮಾನದ ಕಪ್ಪು ಪೆಟ್ಟಿಗೆಯನ್ನು ಪರಿಶೀಲಿಸಿದಾಗ ಪೈಲಟ್‌ ನಿದ್ರೆಗೆ ಜಾರಿರುವುದೇ ದುರಂತಕ್ಕೆ ಕಾರಣ ಎಂಬುದು ಪತ್ತೆಯಾಗಿತ್ತು. ಬಳಿಕ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಅಂತಾರಾಷ್ಟ್ರೀಯ ವಿಮಾ ಒಪ್ಪಂದ ಪ್ರಕಾರ ಪರಿಹಾರ ಪಾವತಿಸುವಂತೆ ಸಂತ್ರಸ್ತರ ಕುಟುಂಬಸ್ಥರು ಕೇರಳ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಕೊನೆಗೂ ಹೋರಾಟದ ಫಲವಾಗಿ ದೊಡ್ಡ ಮೊತ್ತದ ಪರಿಹಾರ ದೊರಕಿಸಿಕೊಳ್ಳುವಲ್ಲಿ ಸಫಲರಾದರು.

Share this article