ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ದೈಹಿಕ ಬೆಳವಣಿಗೆಯಲ್ಲಿ ಕುಂಠಿತ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ತಡೆಯಲು ಆರೋಗ್ಯ ಇಲಾಖೆ ನೀಡುವ ಅಲ್ಬೆಂಡ ಜೋಲ್ ಮಾತ್ರೆ ಕಡ್ಡಾಯವಾಗಿ ಮಕ್ಕಳು ಸೇವಿಸಬೇಕು ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ದೈಹಿಕ ಬೆಳವಣಿಗೆಯಲ್ಲಿ ಕುಂಠಿತ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ತಡೆಯಲು ಆರೋಗ್ಯ ಇಲಾಖೆ ನೀಡುವ ಅಲ್ಬೆಂಡ ಜೋಲ್ ಮಾತ್ರೆ ಕಡ್ಡಾಯವಾಗಿ ಮಕ್ಕಳು ಸೇವಿಸಬೇಕು ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಕರೆ ನೀಡಿದರು.
ತಾಲೂಕಿನ ಮೂಡುಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಗೆ ಜಂತು ಹುಳು ಮಾತ್ರೆ ವಿತರಿಸಿ ಮಾತನಾಡಿ, ಮಕ್ಕಳ ಆರೋಗ್ಯ ಉತ್ತಮವಾಗಿಡಲು ವೈಯಕ್ತಿಕ ಸ್ವಚ್ಛತೆ, ಊಟದ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯಿರಿ ಎಂದರು.
ಶುದ್ಧ ಕುಡಿಯುವ ನೀರನ್ನು ಬಳಸಬೇಕು. ಶೌಚಾಲಯ ಸಮರ್ಪಕವಾಗಿ ಬಳಸಬೇಕು ಹಾಗೂ ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದರು.
ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೆ ಮಕ್ಕಳ ಪೋಷಕರು ರಾಷ್ಟ್ರೀಯ ಜಂತುಹುಳು ಮಾತ್ರೆಯನ್ನು ತಪ್ಪದೇ ಕೊಡಿಸಬೇಕು, ಅಲ್ಲದೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಬಿ.ಆರ್. ಮಾತನಾಡಿ, ತಾಲೂಕು ಆರೋಗ್ಯ ಇಲಾಖೆಯು ಈ ಕಾರ್ಯಕ್ರಮಕ್ಕೆ ಸಮಗ್ರ ಮೈಕ್ರೋಪ್ಲಾನ್ ಸಿದ್ಧಪಡಿಸಲಾಗಿದ್ದು, ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
೧ ರಿಂದ ೧೯ ವರ್ಷದೊಳಗಿನ ಸುಮಾರು ೨೬ ಸಾವಿರ ಮಕ್ಕಳನ್ನು ಈ ಅಭಿಯಾನದಲ್ಲಿ ಗುರಿ ಹೊಂದಲಾಗಿದೆ. ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವುದರ ಜೊತೆಗೆ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಸಹ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್.ನಾಗರಾಜು, ಕೋಟೆಕೆರೆ ಫ್ಯಾಕ್ಸ್ ಕೆ.ಎಂ.ಮಹದೇವಸ್ವಾಮಿ, ಚಂದ್ರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯರು ಇದ್ದರು.
-------
೧೦ಜಿಪಿಟಿ೧
ಗುಂಡ್ಲುಪೇಟೆ ತಾಲೂಕಿನ ಮೂಡುಗೂರಲ್ಲಿ ರಾಷ್ಟ್ರೀಯ ಜಂತು ಹುಳ ನಿವಾರಣಾ ದಿನಾಚರಣೆಯಲ್ಲಿ ಶಾಲಾ ವಿದ್ಯಾರ್ಥಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತ್ರೆ ತಿನ್ನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.